ಶಿವನೇ ಬಸವ, ಬಸವನೇ ಶಿವ: ರಾಮಣ್ಣ ಕಳ್ಳಿಮನಿ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ಮೊದಲು ಕರ್ಮಯೋಗಿಯಾದಂತಹ ಸಿದ್ಧರಾಮೇಶ್ವರರು ಸೊಲ್ಲಾಪುರದಲ್ಲಿ ಗುಡಿ, ಗುಂಡಾರ, ಬಾವಿ, ಕೆರೆ ಕಟ್ಟಿಸುವಂತಹ ಸಾಮಾಜಿಕ ಕೆಲಸಗಳಲ್ಲಿ ತೊಡಗಿದಂತಹ ಕರ್ಮಯೋಗಿ ಸಿದ್ಧರಾಮರನ್ನು ಅಲ್ಲಮಪ್ರಭುಗಳು ಬಂದು ಎಚ್ಚರಿಸಿ ಕಲ್ಯಾಣದ ಬಸವಣ್ಣನವರ ಮಹಿಮೆಯನ್ನು ಅರುಹಿ ಕಲ್ಯಾಣಕ್ಕೆ ಕರೆತಂದು ಚೆನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿದರು.

ನಂತರ ಅನುಭವಮಂಟಪದ ಶರಣರ ಸಂಗದಲ್ಲಿ ಚಿಂತನ, ಮಂಥನ ಮಾಡುತ್ತ ಶಿವಯೋಗದ ಉತ್ತುಂಗಕ್ಕೇರಿ ಶಿವಯೋಗಿಗಳಾದರು. ವಚನಗಳನ್ನ ಬರೆದರು. ಬಸವಣ್ಣನವರನ್ನು ದರ್ಶನ, ಸ್ಪರ್ಶನದಿಂದ, ಅವರ ನಡೆನುಗಳನ್ನು ನೋಡಿ, ಆನಂದಿಸಿ ಬರೆದಂತಹ ವಚನಗಳು ಯೋಗಿನಾಥ ಅಂಕಿತ ಹಾಗೂ ಕಪಿಲಸಿದ್ಧ ಮಲ್ಲಿಕಾರ್ಜುನ ಅಂಕಿತಗಳಿಂದ ರಚಿಸಲ್ಪಟ್ಟಿವೆ. ಇವರ ಅನೇಕ ವಚನಗಳು ಲಿಂಗಾಯತ ಧರ್ಮದ ಕುರಿತಾಗಿ, ತತ್ವದ ಕುರಿತಾಗಿವೆ. ಇವರು ಶೂನ್ಯಪೀಠದ ಮೂರನೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಜೊತೆಗೆ ಕಲ್ಯಾಣ ಕ್ರಾಂತಿಯಲ್ಲಿ ಶರಣರ ರಕ್ಷಣಾ ಕಾರ್ಯವನ್ನು ಮಾಡಿದರು ಎಂದು ಸಿದ್ಧರಾಮರ ವೃತ್ತಾಂತವನ್ನು ಬಸವದಳದ ರಾಮಣ್ಣ ಕಳ್ಳಿಮನಿ ತಿಳಿಸಿದರು.

ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಮಾದೇಶ್ವರ ನಗರದ ಚಂದ್ರಶೇಖರ ಬಿ. ಗೊಲ್ಲರ ಅವರು ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ‘ವಚನ ಶ್ರಾವಣ-೨೦೨೫’ರ ಕಾರ್ಯಕ್ರಮದಲ್ಲಿ, “ಪ್ರಥಮಂತು ಬಸವಣ್ಣ, ದ್ವಿತಿಯಂತು ಲಿಂಗವು, ತ್ರತಿಯಂತು ತತ್ವಬ್ರಹ್ಮಾಂಡವೆಲ್ಲ, ಅಕಳಂಕ ಗುಣನಿಧಿ ಚಿದಾನಂದ ಬಸವಂಗೆ, ಬಕುತನಾದೆನು ಗುರುವೆ ಯೋಗಿನಾಥ”.

ಈ ವಚನ ನಿರ್ವಚಿಸುತ್ತ, ಇದರಲ್ಲಿ ಪ್ರಥಮಂತು ಬಸವಣ್ಣ ಎಂದರೆ ಮೂಲ ಚೈತನ್ಯದ ಸ್ವರೂಪವೇ ಬಸವಣ್ಣನಾಗಿದ್ದಾನೆ. ಚೈತನ್ಯ ಲೀಲೆಗೊಂಡು ಒಂದು ಇದ್ದ ಚೈತನ್ಯ ಎರಡಾಗಿ ಲಿಂಗ ಹುಟ್ಟಿತು. ಇವೆಲ್ಲವುಗಳಿಂದ ಬ್ರಹ್ಮಾಂಡ ಸ್ಥಾಪಿತವಾಯಿತು. ಆ ಕಾರಣ ಸಕಲ ಚರಾಚರ ವಸ್ತುಗಳೆಲ್ಲವೂ ಸೃಷ್ಠಿಗೊಂಡವು. ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಈ ಪಂಚಭೂತಗಳು ಉತ್ಪತ್ತಿಯಾದವು. ಸೂರ‍್ಯ, ಚಂದ್ರ, ಆತ್ಮಗಳು ಜೊತೆಗೆ ಅಷ್ಟತನುಗಳು ಹುಟ್ಟಿದವು. ಇವು ಮಾನವನ ಅಂತರಂಗದಲ್ಲಿ, ಬಹಿರಂಗದಲ್ಲಿ ಕೂಡಾ ಇರುತ್ತವೆ. ಇದನ್ನು ಶರಣರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಇವುಗಳನ್ನೆಲ್ಲ ಬಸವಣ್ಣನವರು ಅರಿತು ಆಚರಿಸುವ ಮೂಲಕ ಸಕಲ ಜೀವಾತ್ಮರಿಗೆ ಬಿತ್ತರಿಸಿದರು. ಅಂತಹ ಅಕಳಂಕ ಎಂದರೆ ಕಳಂಕ ಇರಲಾರದಂತಹ ಬದುಕಿ, ಸದ್ಗುಣಗಳ ನಿಧಿಯಾಗಿ, ಚಿದಾನಂದ ಸ್ವರೂಪರಾದ ಬಸವಣ್ಣನವರಿಗೆ ಶಿವನೇ ಬಸವ, ಬಸವನೇ ಶಿವನೆಂದು ಕರೆವರು. ಸತ್, ಚಿತ್, ಆನಂದ ನಿತ್ಯ ಪರಿಪೂರ್ಣರಾದಂತಹ ಬಸವ ಗುರವಿಗೆ ಭಕ್ತನಾದೆ. ಅವರ ದಾರಿಯಲ್ಲೇ ನಡೆದೆ. ಹಿಂಬಾಲಕನಾದೆ ಎಂದು ತಮ್ಮ ಅರಿವಿನ ಮೂಲಕ ಚೈತನ್ಯವೇ ಆಗಲು ಶಿವಯೋಗಿ ಸಿದ್ಧರಾಮ ಶ್ರಮಿಸಿದ್ದರು ಎಂದು ವಚನದ ಅರ್ಥವನ್ನು ರಾಮಣ್ಣನವರು ಬಿಡಿಸಿದರು.

ಇದೇ ವಚನವನ್ನು ಎನ್. ಎಚ್. ಹಿರೇಸಕ್ಕರಗೌಡ್ರ ಹಾಗೂ ಪ್ರಕಾಶ ಅಸುಂಡಿ ಅವರು ಸಹ ನಿರ್ವಚಿಸಿ ಮಾತನಾಡಿದರು.

ಬಸವದಳದ ಶರಣೆಯರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಗೊಲ್ಲರ ಅಕ್ಕಾವ್ರು ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆ ಎಂ. ಬಿ. ಲಿಂಗದಾಳ ಅವರು ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *