ಬೀದರ:
ಬಸವಕಲ್ಯಾಣದಲ್ಲಿ ನಡೆಸಲು ಉದ್ಧೇಶಿಸಿರುವ ರಂಭಾಪುರಿ ಶ್ರೀಗಳ ದಸರಾ ದರ್ಬಾರನಿಂದ ದೂರ ಸರಿಯಲು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನಿರ್ಧರಿಸಿರುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಸ್ವಾಗತಿಸಿದ್ದಾರೆ.
ದಸರಾ ದರ್ಬಾರನಲ್ಲಿ ಭಕ್ತರ ಹೆಗಲ ಮೇಲೆ ಅಡ್ಡಪಲ್ಲಕ್ಕಿ ನಡೆಸುವ ಪಟ್ಟು ಬಿಡದ ಕಾರಣ ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಕೋಟ್ಯಂತರ ಬಸವ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡದಿರಲು ದರ್ಬಾರನಿಂದ ಹೊರಗುಳಿಯುವ ತೀರ್ಮಾನ ಕೈಗೊಂಡಿದ್ದಾಗಿ ಹಾರಕೂಡ ಶ್ರೀಗಳು ತಿಳಿಸಿದ್ದಾರೆ. ಈ ನೆಲದ ಸಂಸ್ಕೃತಿ, ಬಸವ ಭಕ್ತರ ಅಭಿಮಾನ ಹಾಗೂ ಗೌರವವನ್ನು ಎತ್ತಿ ಹಿಡಿದ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಮೆಹಕರ್ ಶ್ರೀಗಳು ಅಡ್ಡ ಪಲ್ಲಕ್ಕಿ ಮಾಡುತ್ತೇವೆ ಎಂದು ಹೇಳಿರುವುದು ಬಸವಾನುಯಾಯಿಗಳಿಗೆ ತುಂಬಾ ನೋವು ಉಂಟು ಮಾಡಿದೆ ಎಂದು ಹೇಳಿದ್ದಾರೆ. ಬಸವಕಲ್ಯಾಣ ವಿಶ್ವದ ಮಾನವೀಯತೆಯ ಪುಣ್ಯ ಭೂಮಿ. ಈ ನೆಲದಲ್ಲಿ ಮನುಷ್ಯರ ಹೆಗಲ ಮೇಲೆ ಅಡ್ಡ ಪಲ್ಲಕ್ಕಿ ನಡೆಸುವುದು ಬಸವ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಹೀಗಾಗಿ ತಡೋಳಾ ಶ್ರೀಗಳು ಕೂಡ ಸಮಾಜದ ಒಳಿತು ಹಾಗೂ ಬಸವ ಭಕ್ತರ ಆಶಯ ಅರಿತು ದರ್ಬಾರನಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದಾರೆ.
ಬಸವಕಲ್ಯಾಣ ಬಿಟ್ಟು ಬೇರೆಡೆ ದಸರಾ ದರ್ಬಾರ್ ನಡೆಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಶರಣರ ಪಾವನ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ದರ್ಬಾರ್ ನಡೆಸಲು ಬಿಡುವುದಿಲ್ಲ ಎಂದು ಧನ್ನೂರ ಎಚ್ಚರಿಸಿದ್ದಾರೆ.