ಭಾಲ್ಕಿ
(ರಂಭಾಪುರಿ ಶ್ರೀಗಳ ದಸರಾ ದರ್ಬಾರ್-ಅಡ್ಡಪಲ್ಲಕ್ಕಿ ಕಾರ್ಯಕ್ರಮದಿಂದ ದೂರ ಸರಿಯುವ ಹಾರಕೂಡ ಪೂಜ್ಯರ ನಿರ್ಣಯ ಸ್ವಾಗತಿಸಿ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ನೀಡಿರುವ ಪ್ರಕಟಣೆ.)
ವಿಶ್ವಗುರು ಬಸವಣ್ಣನವರ ಕಾಯಕ ಭೂಮಿಯಾಗಿರುವ ಬಸವಕಲ್ಯಾಣದಲ್ಲಿ ಬರುವ ಸಪ್ಟೆಂಬರ್ ತಿಂಗಳ ಕೊನೆಯಲ್ಲಿ ರಂಭಾಪುರಿ ಶ್ರೀಗಳ ದಸರಾ ದರ್ಬಾರ್-ಅಡ್ಡಪಲ್ಲಕ್ಕಿ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಹಾರಕೂಡ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಜವಾಬ್ದಾರಿ ವಹಿಸಿಕೊಂಡಿದ್ದರು.
ಹಾರಕೂಡದ ಪೂಜ್ಯರು ಮೊದಲೇ ರಂಭಾಪುರಿ ಶ್ರೀಗಳಿಗೆ ಬಸವಕಲ್ಯಾಣದ ನೆಲದಲ್ಲಿ ಅಡ್ಡಪಲ್ಲಕ್ಕಿ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದರು. ಅದಕ್ಕೆ ರಂಭಾಪುರಿ ಶ್ರೀಗಳು ಮೊದಲು ಅನುಮತಿ ಸೂಚಿಸಿದರು. ಆದರೆ ಇತ್ತೀಚಿನ ದಿನಮಾನಗಳಲ್ಲಿ ದಸರಾ ದರ್ಬಾರದ ಅಂಗವಾಗಿ ಅಡ್ಡಪಲ್ಲಕ್ಕಿ ಮನುಷ್ಯರ ಹೆಗಲಮೇಲೆ ಮಾಡಲಾಗುತ್ತದೆ ಎಂಬ ಹಠ ಮಾಡಿರುವ ವಿಷಯ ಹಾರಕೂಡ ಪೂಜ್ಯರಿಗೆ ನೋವನ್ನುಂಟು ಮಾಡಿದೆ.
ಬಸವಾದಿ ಶರಣರ ಕುರಿತು ಅಪಾರ ಭಕ್ತಿ, ಗೌರವ ಇಟ್ಟುಕೊಂಡಿರುವ ಹಾರಕೂಡದ ಪೂಜ್ಯರು ಬಸವಕಲ್ಯಾಣದ ನೆಲದಲ್ಲಿ ಮನುಷ್ಯರ ಹೆಗಲಿನ ಮೇಲೆ ಅಡ್ಡಪಲ್ಲಕಿ ಮಾಡುವುದು ಸೂಕ್ತವಲ್ಲವೆಂದು ಗೌರವಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುತ್ತೇವೆ ಎಂದು ತಿಳಿಸಿದರು.
ಹಾರಕೂಡ ಪೂಜ್ಯರ ಈ ನಿರ್ಧಾರ ನಾಡಿನ ಸಮಸ್ತ ಬಸವಭಕ್ತರಿಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಹಾಗೂ ಪೂಜ್ಯರ ಈ ಬಸವತತ್ವಪರ ನಿಲುವು ನಾವು ಆತ್ಮೀಯವಾಗಿ ಸ್ವಾಗತಿಸುತ್ತೇವೆ.