ಜಮಖಂಡಿ
ಅಧ್ಯಾತ್ಮದಲ್ಲಿ ನಂಬಿಕೆ ಮುಖ್ಯ. ವಿಜ್ಞಾನದಲ್ಲಿ ಮೂಲನಂಬಿಕೆ ಇರಬೇಕೆ ವಿನಹ ಮೂಢನಂಬಿಕೆ ಇರಬಾರದು. ಯಾವುದನ್ನೂ ಪ್ರಶ್ನಿಸಿಸದೆ ಒಪ್ಪಿಕೊಳ್ಳಬಾರದು. ಸರಿಯಾಗಿ ಪರಿಶೀಲಿಸಿ, ಪರೀಕ್ಷಿಸಿ ಸರಿಯಾದುದನ್ನು ಮಾತ್ರ ಒಪ್ಪಿಕೊಳ್ಳಬೇಕು ಎಂದು ಸರ್ಕಾರಿ ಪಿ.ಬಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಲಿಂಗಾನಂದ ಗವಿಮಠ ಹೇಳಿದರು.
ಇಲ್ಲಿನ ಮೂಲ ಸಿದ್ಧೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ‘ನಂಬಿಕರೆದಡೆ ಓ ಎನ್ನನೆ ಶಿವನು?’ ವಿಷಯ ಕುರಿತು ಉಪನ್ಯಾಸ ನೀಡಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಓಲೆಮಠದಿಂದ ನಡೆಯುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಜನಜಾಗೃತಿ ಕಾರ್ಯಕ್ರಮವಾಗಿದೆ. ಇದೊಂದು ಸಮಾಜ ಮತ್ತು ದೇಶಕಟ್ಟುವ ಕಾರ್ಯವಾಗಿದೆ. ಎಲ್ಲರೂ ಒಳ್ಳೆಯವರಾಗಿ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂಬುದು ಶ್ರೀಮಠದ ಉದ್ದೇಶವಾಗಿದೆ ಎಂದರು.
ಓಲೆಮಠದ ಆನಂದ ದೇವರು ಮಾತನಾಡಿ, ಪ್ರತಿಯೊಬ್ಬರಿಗೂ ಭಗವಂತ ಏನಾದರೂ ಒಂದು ವಿಶೇಷತೆ ಕೊಟ್ಟಿರುತ್ತಾನೆ. ಅದನ್ನು ಸದುಪಯೋಗ ಪಡಿಸಿಕೊಂಡರೆ ಸಾಧನೆ ಸಾಧ್ಯ. ನಂಬಿಕೆ ಇದ್ದರೆ ಯಾವುದಾದರೂ ರೂಪದಲ್ಲಿ ಭಗವಂತ ಬಂದು ಕಷ್ಟಗಳಿಂದ ಪಾರು ಮಾಡುತ್ತಾನೆ ಎಂದು ಹೇಳಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬದುಕಲು ಬೇಕಾಗುವ ಜ್ಞಾನ ಮತ್ತು ಸಂಸ್ಕಾರ ಸಂಪಾದಿಸಲು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಕಾಯಕದಲ್ಲಿ ಶ್ರದ್ಧೆ, ಭಕ್ತಿಯಿಟ್ಟು ಮಾಡುವವರನ್ನು ಕಾಯಕ ಕಾಯುತ್ತದೆ ಎಂದರು.
ಸಿದ್ಧಕ್ಷೇತ್ರದ ಸಿದ್ಧಮುತ್ಯಾ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಶಿಕ್ಷಕಿ ಶೀಲಾ ಜಮಖಂಡಿ ಸ್ವಾಗತಿಸಿದರು. ಶಿಕ್ಷಕ ಈರಪ್ಪ ಜಮಖಂಡಿ ನಿರೂಪಿಸಿದರು. ಶರಣ ಶರಣೆಯರು ಉಪಸ್ಥಿತರಿದ್ದರು.
