ನ್ಯಾಮತಿ
ತಾಲ್ಲೂಕಿನ ಚಟ್ನಳ್ಳಿಯಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಸಾನಿಧ್ಯದೊಂದಿಗೆ, ವಚನ ಶ್ರಾವಣ ಕಾರ್ಯಕ್ರಮದ ಅನುಭಾವ ನಡೆಯಿತು.
“ಅನುಭವ ಮಂಟಪದಲ್ಲಿ ಪ್ರಸ್ತಾಪವಾದ ಚರ್ಚಿತವಾದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಹಂಚಲು ಅಂದಿನ ಒಂದು ಲಕ್ಷದ 96 ಸಾವಿರ ಜಂಗಮರು ಜಗತ್ತಿನಾದ್ಯಂತ ಸುತ್ತಾಡಿ ಜಗತ್ತೇ ಕರ್ನಾಟಕದೆಡೆಗೆ ಬರುವಂತೆ ಮಾಡುತ್ತಾರೆ. ಅಂತಹ ಕೆಲಸವನ್ನು ಬಸವಾದಿ ಶರಣರ ಹೆಸರಿನ ಸಂಘಟನೆಗಳು ಇಂದು ಮಾಡುತ್ತಿವೆ” ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಯೋಗಿ ಎಂ.ಬಿ. ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.
“12ನೇ ಶತಮಾನದ ಅಂದಿನ ಸಮಾಜವನ್ನು ನೋಡಿದ ಬಸವಣ್ಣ ಅಸಮಾನರಿಗೆ ಬದುಕನ್ನು ಕಟ್ಟಿಕೊಡಬೇಕೆಂಬ ಆಶಯಕ್ಕಾಗಿ ಮಹಾಮನೆಯನ್ನು ಕಟ್ಟಿದರು. ಯಾರು ತಳಸಮುದಾಯಗಳ ಬಗ್ಗೆ ಕಳಕಳಿಯನ್ನು ಇಟ್ಟುಕೊಂಡಿರುತ್ತಾರೆ ಅವರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಶ್ರೇಷ್ಠವೆನಿಸುವ ಜಾತಿಯಲ್ಲಿ ಜನಿಸಿದ ಬಸವಣ್ಣ ಅಧಿಕಾರ, ಅಂತಸ್ತು, ಜ್ಞಾನ, ವಿದ್ಯಾಭ್ಯಾಸ ಸಂಘಟನಾ ಶಕ್ತಿ ಹೊಂದಿ, ತಮ್ಮ ಉನ್ನತ ಚಿಂತನೆಯಿಂದಲೇ ಇಂದಿನ 21ನೇ ಶತಮಾನದಲ್ಲಿಯೂ ಜಾಗತಿಕವಾಗಿ ಪ್ರಸ್ತುತವಾಗಿದ್ದಾರೆ; ಬಸವಣ್ಣನವರ ಚಿಂತನೆಗಳು ಹೀಗೆಯೇ ಪ್ರಸಾರವಾಗುತ್ತಿದ್ದರೆ ಮುಂದೆಯೂ ಪ್ರಸ್ತುತವಾಗಿರುತ್ತಾರೆ” ಎಂದು ಉಪನ್ಯಾಸ ನೀಡಿದ ಭದ್ರಾವತಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಬಸನಗೌಡ ಮಾಳಗಿ ಹೇಳಿದರು.
“ಬಸವಣ್ಣನವರು ನೀಡಿದ ಇಷ್ಟಲಿಂಗ, ಶಿವಯೋಗ, ಧರ್ಮ, ಸಂಹಿತೆ, ಲಾಂಛನ ವಚನಗ್ರಂಥ, ಧ್ವಜ, ಪ್ರಾರ್ಥನೆ ಮುಂತಾದವುಗಳನ್ನು ಇಂದಿನ ಜನತೆ ಅರಿಯಬೇಕಾಗಿದೆ ಎಂದು ಶಿವಮೊಗ್ಗ ರಾಷ್ಟ್ರೀಯ ಬಸವದಳದ ಶಾಂತಮ್ಮ ಅವರು ತಿಳಿಸಿದರು.
ಬಸವಣ್ಣನವರು ನೀಡಿದ ಸಮಾನತೆ ಸಂಕೇತವಾದ ಇಷ್ಟಲಿಂಗ ಹಾಗೂ ಶಿವಯೋಗ ಸಾಧನೆಯಿಂದ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ಸ್ವಯಂ ನಾವೇ ಅನುಭವಿಸಬೇಕು. ಈ ಜ್ಞಾನವನ್ನು ಪಡೆಯದ ಇಂದಿನ ಪೀಳಿಗೆ ಅವನತಿಯ ಕಡೆಗೆ ಸಾಗುತ್ತಿದೆ. ಈ ಬಗ್ಗೆ ಬಸವಪರ ಸಂಘಟನೆಗಳು ಗಮನಹರಿಸಬೇಕು” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷರಾದ ಎಚ್. ಮಹೇಶ್ವರಪ್ಪ ತಿಳಿಸಿದರು.
ಜಗತ್ತಿನಲ್ಲಿ ನಾವು ಮಾಡುವ ಕಾಯಕ ನಮ್ಮನ್ನು ಕಾಪಾಡುತ್ತದೆ. ಯಾರಿಗೂ ನೋವನ್ನು ಕೊಡದ, ಎಲ್ಲರೂ ಸಮಾನರು ಎನ್ನುವ ಭಾವನೆಯನ್ನು ಉಂಟು ಮಾಡುವ ವಚನಗಳು ನಮ್ಮನ್ನು ಸರಿ ದಾರಿಗೆ ಒಯ್ಯುತ್ತವೆ; ತನ್ಮೂಲಕ ಸತ್ಯ-ಶುದ್ಧ-ಕಾಯಕದಲ್ಲಿ ತೊಡಗುವಂತೆ ಮಾಡುತ್ತವೆ” ಎಂದು ಅಧ್ಯಕ್ಷತೆ ವಹಿಸಿಕೊಂಡ ಬಿ. ಚೆನ್ನೇಶ್ ನುಡಿದರು.

ರಾಷ್ಟ್ರೀಯ ಬಸವದಳದ ಬಾಳಪ್ಪ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ವಚನ ಭಜನೆ ನಡೆಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ರಾಷ್ಟ್ರೀಯ ಬಸವದಳದ ಅಧ್ಯಕ್ಷ ನಾರೇಶಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಗೌರವಾಧ್ಯಕ್ಷ ನಂಜಪ್ಪಗೌಡರು, ಪಾರ್ವತಮ್ಮ, ಅಂಬಿಕಾ ಬಿದರಗಡ್ಡೆ, ಷಣ್ಮುಖಶ್ರೀ ಮಹಾಲಿಂಗಯ್ಯ, ಪಿ.ಆರ್ ರಾಜಪ್ಪ ಉಪಸ್ಥಿತರಿದ್ದರು.
ವಿದ್ಯಾಶ್ರೀ ಸ್ವಾಗತಿಸಿದರು. ಸವಿತಾ ವಂದಿಸಿದರು ನಿರೂಪಣೆಯನ್ನು ಮಾನಸ ನಡೆಸಿಕೊಟ್ಟರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಕದಳಿ ಮಹಿಳಾ ವೇದಿಕೆ, ಸುರಹೊನ್ನೆಯ ಶ್ರೀ ಬಸವೇಶ್ವರ ಮಹಿಳಾ ಭಜನಾ ಸಂಘಗಳು, ಬಸವಾಭಿಮಾನಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದವು.