ಬೆಂಗಳೂರು
ಬರುವ ಜಾತಿ ಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ್ ಬುಧವಾರ ಹೇಳಿದರು.
ನಗರದ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಗಣತಿ ವಿಷಯದಲ್ಲಿ ಯುವಕರಲ್ಲಿ ಬಹಳ ಗೊಂದಲವಿದೆ. ವೀರಶೈವ ಮಹಾಸಭಾದವರು ವೀರಶೈವ-ಲಿಂಗಾಯತ ಎಂದು ಬರೆಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಈ ಗೊಂದಲ ನಿವಾರಿಸಲು ಲಿಂಗಾಯತ ಮಠಾಧೀಶರ ಒಕ್ಕೊಟ ಒಂದು ಆದೇಶ ನೀಡಬೇಕು ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಅಂತಹ ಆದೇಶದ ಕರಡು ದಾಖಲೆಯನ್ನು ಆಗಲೇ ಸಿದ್ದಪಡಿಸಿ ಲಿಂಗಾಯತ ಮಠಾಧೀಶರ ಒಕ್ಕೂಟಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪೂಜ್ಯ ತೋಂಟದಾರ್ಯ ಡಾ. ಸಿದ್ದರಾಮ ಮಹಾಸ್ವಾಮಿಗಳು ದಾಖಲೆಯನ್ನು ಪರಿಶೀಲಿಸಿ ಆದೇಶ ನೀಡುವುದಾಗಿ ತಿಳಿಸಿದರು.
ಆಗ ಸಿ ಸೋಮಶೇಖರ್ ಜಾತಿ ಗಣತಿಯಲ್ಲಿ ಲಿಂಗಾಯತ ಎಂದೇ ಎಲ್ಲರೂ ಬರೆಸಬೇಕು ಎಂದು ಕರೆ ನೀಡಿದರು. ಅಭಿಯಾನದಲ್ಲಿ ಭಾಗವಹಿಸಲು ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಘಟಕಗಳಿಗೆ ಸುತ್ತೋಲೆ ಕಳಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿದ್ದವರೆಲ್ಲರೂ ಸೋಮಶೇಖರ್ ಅವರ ಮಾತನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಾಮದಾರ್ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಭಿಯಾನ ಐತಿಹಾಸಿಕ ಅವಕಾಶವಾಗಿದ್ದು, ಎಲ್ಲಾ ಬಸವ ಸಂಘಟನೆಗಳು ಒಕ್ಕೂಟವನ್ನು ಬೆಂಬಲಿಸುತ್ತಿವೆ ಎಂದು ಹೇಳಿದರು.

“ವೀರಶೈವ ಮಹಾಸಭಾದ ರಾಜ್ಯ ನಾಯಕತ್ವದ ಜೊತೆ ಭಿನ್ನಾಭಿಪ್ರಾಯವಿದ್ದರೂ ಅನೇಕ ಜಿಲ್ಲಾ ಘಟಕಗಳು ಅಭಿಯಾನಕ್ಕೆ ಸೇರಿಕೊಂಡಿವೆ ಎಂದು ಹೇಳಿದರು. ದಾವಣಗೆರೆಯಲ್ಲಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಅಣಬೇರು ರಾಜಣ್ಣ ಅಭಿಯಾನ ಸಮಿತಿಯ ಅಧ್ಯಕ್ಷರಾಗಿದ್ದಾರೆ, ಎಂದು ಹೇಳಿದರು.
ಪೂಜ್ಯ ಸಿದ್ದರಾಮ ಶ್ರೀಗಳು ಮಾತನಾಡಿ ಬೆಂಗಳೂರಿನಲ್ಲಿ ಅಕ್ಟೊಬರ್ ಐದು ನಡೆಯುವ ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಹೇಳಿದರು. ಬೇರೆ ಜಿಲ್ಲೆಗಳಿಂದ ಬರುವ ಸಾವಿರಾರು ಜನರಿಗೆ ವಸತಿ, ಸ್ನಾನ, ಪೂಜೆ ವ್ಯವಸ್ಥೆಯಾಗಬೇಕು, ಯಾರಿಗೂ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು, ಎಂದು ಹೇಳಿದರು.
ಸಾಣೆಹಳ್ಳಿ ಶ್ರೀಮಠದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಯಾನದಲ್ಲಿ ಕಾರ್ಯಕ್ರಮಗಳು ಸಂಖ್ಯೆಗಿಂತ ಗುಣಾತ್ಮಕವಾಗಿ ನಡೆಯಬೇಕೆಂದು ಹೇಳಿದರು.
ಹಂದಿಗುಂದದ ಶಿವಾನಂದ ಸ್ವಾಮೀಜಿ, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮೀಜಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಬಸವಧರ್ಮ ಪೀಠದ ಬಸವ ಯೋಗಿ ಸ್ವಾಮಿಗಳು, ಸೇರಿದಂತೆ ಸಮಾಜದ ಪೂಜ್ಯರು, ಹಿರಿಯರು, ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದು, ತಮ್ಮ ಚಿಂತನೆಗಳನ್ನು ಹಂಚಿಕೊಂಡರು.