ಶರಣ ಸಂಸ್ಕೃತಿ ಉತ್ಸವದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಶರಣ ಸಂಸ್ಕೃತಿ ಉತ್ಸವ-೨೦೨೫ರ ಅಂಗವಾಗಿ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ಮಧ್ಯಕರ್ನಾಟಕ ಭಾಗದ ದಸರಾ ಎಂದೇ ಪ್ರಸಿದ್ಧಿ ಪಡೆದಿರುವ ಶರಣ ಸಂಸ್ಕೃತಿ ಉತ್ಸವ ಸೆ. 25ರಿಂದ ಅ. 3ರವರೆಗೆ ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ ನಡೆಯಲಿದೆ.

ಸರ್ಕಾರಿ, ಅನುದಾನಿತ, ಅನುದಾನರಹಿತ, ವೃತ್ತಿಪರ ಕಾಲೇಜುಗಳ ಪ್ರಾಂಶುಪಾಲರುಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಾಹಿತಿ ಸ್ಫೋಟದಿಂದಾಗಿ ನೂರಾರು ಆಯ್ಕೆಗಳು ಯುವಸಮೂಹದ ಎದುರಿಗಿದೆ. ಹೀಗಾಗಿ ಪದವಿ ಪೂರೈಸಿದ ತರುವಾಯ ವಿದ್ಯಾರ್ಥಿಗಳಲ್ಲಿ ಭವಿಷ್ಯದ ವೃತ್ತಿ ಆಯ್ಕೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ತುಸು ಕಷ್ಟದ ಕೆಲಸ.

ಹೀಗಾಗಿ ವಿದ್ಯಾರ್ಥಿಗಳು ಪದವಿ ಹಂತದಲ್ಲಿರುವಾಗಲೇ ಅವರಿಗೆ ಭವಿಷ್ಯದ ಕುರಿತು ಅರಿವು ಹಾಗೂ ಮಾರ್ಗದರ್ಶನ ಅತಿಮುಖ್ಯ. ಈ ವಿಚಾರವಾಗಿ ಸೂಕ್ತ ಸಲಹೆಗಳನ್ನು ನೀಡಿ ಯುವಸಮೂಹವನ್ನು ಉತ್ತೇಜಿಸಿ ಪ್ರೋತ್ಸಾಹಿಸುತ್ತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಯುವಕರ ಚಿತ್ತ ಎತ್ತ ಸಾಗಲಿದೆ ಎಂಬುದೆಡೆಗೆ ಅವಲೋಕಿಸುವ ಯುವಜನೋತ್ಸವ ಕಾರ್ಯಕ್ರಮವನ್ನು ಈ ಬಾರಿಯ ಶರಣಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಹೇಳಿದರು.

ಈ ಕಾರ್ಯಕ್ರಮದಲ್ಲಿ ೫ ಸಾವಿರ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಕ್ರಮವಹಿಸಲಾಗಿದೆ. ಕಾರ್ಯಕ್ರಮದ ಕುರಿತು ಜಾಗೃತಿ ಉಂಟು ಮಾಡಲು ಪ್ರತಿ ಕಾಲೇಜಿಗೆ ಭೇಟಿ ನೀಡಲಾಗುವುದು. ಮುಂದಿನ ರೂಪುರೇಷೆಗಳನ್ನು ಚರ್ಚಿಸಲು ಮತ್ತೊಮ್ಮೆ ಸಭೆ ಸೇರುವುದಾಗಿ ತಿಳಿಸಿದರು.

ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುಡ್ಡದೇಶ್ವರಪ್ಪ ಮಾತನಾಡಿ, ಮುರುಘಾ ಪರಂಪರೆಯ ಬಗ್ಗೆ ತಿಳಿಸುತ್ತ, ಶರಣಸಂಸ್ಕೃತಿ ಉತ್ಸವದಲ್ಲಿ ಇಲ್ಲಿಯವರೆಗೆ ಯುವಜನೋತ್ಸವ ಇರುತ್ತಿರಲಿಲ್ಲ. ಈ ಬಾರಿ ಆ ಕೊರತೆಯನ್ನು ನಿವಾರಿಸಲಾಗಿದೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅದಮ್ಯ ಶಕ್ತಿ, ಸಾಮರ್ಥ್ಯ ಇದೆ. ಅವರನ್ನು ಸನ್ನಡತೆಯೆಡೆಗೆ ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ಕಾಲೇಜು ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿಯಾಗಿ ೧ ಗಂಟೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದಲ್ಲಿ ಎಲ್ಲಾ ಸಹೃದಯ ಮನಸ್ಸುಗಳು ಒಂದಾಗುತ್ತವೆ.

ಈ ಕಾರ್ಯವನ್ನು ಸ್ವಾಮೀಜಿಯವರು ಕೈಗೊಳ್ಳಬೇಕು. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಕಾರ್ಯಕ್ರಮದಲ್ಲಿರುತ್ತಾರೆ. ಕಾಲೇಜುಗಳು ಈ ಕಾರ್ಯಕ್ರಮಕ್ಕಾಗಿ ಮೆಂಟರ್‌ಗಳನ್ನು ನೇಮಿಸಿ ಕಾರ್ಯಪ್ರವೃತ್ತರಾದರೆ ಒಳ್ಳೆಯದು. ಶ್ರೀಮಠದ ಪರಂಪರೆಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದರಿಂದ ಮಾತು ಕೃತಿಗೆ ಅಂತರ ಬಾರದಿರುವುದು. ಯಾವುದೇ ವಯಸ್ಸಿನ ಭೇದ ಬರಬಾರದು. ವಿದ್ಯಾರ್ಥಿಗಳ ಮನಸ್ಸು ಬದಲಾದಲ್ಲಿ ಅದು ಶ್ರೀಮುರುಘಾಮಠದ ಅತ್ಯುತ್ತಮ ಕೊಡುಗೆ ಆಗುತ್ತದೆ ಎಂದರು.

ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಕರಿಯಪ್ಪ ಮಾಳಿಗೆ ಶರಣಸಂಸ್ಕೃತಿ ಉತ್ಸವದ ಪರಂಪರೆ ಬಗ್ಗೆ ಮಾತನಾಡುತ್ತ, ಈ ಬಾರಿಯ ಉತ್ಸವದಲ್ಲಿ ಯುವಜನೋತ್ಸವ ಕಾರ್ಯಕ್ರಮ ನಡೆಸುತ್ತಿರುವುದು ಒಂದು ಚಾರಿತ್ರಿಕ ಅಂಶ. ಇದು ಯುವಶಕ್ತಿಯನ್ನು ಜಾಗೃತಗೊಳಿಸಿ ಗಾಂಭರ‍್ಯತೆಯನ್ನು ಸಾರುತ್ತದೆ. ತರಗತಿಗಳಲ್ಲಿ ಪಾಠ ಪ್ರವಚನಗಳನ್ನು ಕೌಶಲ್ಯವನ್ನು ಕಲಿಸುವುದಕ್ಕಿಂತ ಹೆಚ್ಚು ಬದುಕಿನ ಕುರಿತು ಕೌಶಲ್ಯಗಳನ್ನು ಬೆಳೆಸಲು ಸಹಾಯಕಾರಿಯಾಗುತ್ತದೆ.

ವಿದ್ಯಾರ್ಥಿ ಜೀವನದ ಸಾರ್ಥಕತೆಗಾಗಿ ಅವರ ಶಕ್ತಿಯನ್ನು ಬಳಸಿಕೊಳ್ಳಬೇಕಾದ ಮಾರ್ಗದರ್ಶನವನ್ನು ನೀಡುವ ಅಗತ್ಯವಿದೆ. ಬಸವ, ಬುದ್ಧರೊಂದಿಗೆ ಅಂಬೇಡ್ಕರ್‌ರವರ ಸಂದೇಶವನ್ನು ಸೇರಿಸಿ ಕಾರ್ಯಕ್ರಮದಲ್ಲಿ ಸಂವಿಧಾನ ಪಠಣದೊಡನೆ ವಚನಪಠಣವನ್ನು ವಿಶೇಷವಾಗಿ ಸೇರಿಸಿರುವುದು ಒಂದು ಚಾರಿತ್ರಿಕ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಈ ಕಾರ್ಯಕ್ರಮಕ್ಕೆ ಎಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕೆ.ಪಿ. ನಾಗಭೂಷಣ ಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮವು ಶ್ರೀಮಠದಿಂದ ಹೊಸ ಇತಿಹಾಸ ನಿರ್ಮಿಸಲಿದೆ. ಯುವಸಂಸ್ಕೃತಿ ಬೆಳೆಯಲಿದೆ. ಯುವಸಮೂಹಕ್ಕೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುವುದು ಎಂದರು.
ಎಸ್.ಆರ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಡಾ. ಟಿ.ಎಸ್. ರವಿ ಮಾತನಾಡಿ, ಯುವಜನೋತ್ಸವದ ಮೂಲಕ ಶ್ರೀಮಠವು ಯುವಕರಿಗೆ ಅರಿವಿನ ದಾಸೋಹವನ್ನು ನೀಡುತ್ತಿದೆ. ವೈಜ್ಞಾನಿಕ ಯುಗದ ಪ್ರಸ್ತುತ ಬದುಕಿನಲ್ಲಿ ತಂತ್ರಜ್ಞಾನವು ಮೇಲುಗೈ ಸಾಧಿಸುವುದಕ್ಕೆ ಯುವಶಕ್ತಿ ಬಿಟ್ಟಲ್ಲಿ ಜಗತ್ತೇ ಮೂರ್ಖರ ಸಂತೆಯಾಗುತ್ತದೆ. ಹಾಗಾಗಿ ಯುವಶಕ್ತಿಯನ್ನು ಬಳಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಈ ಕಾರ್ಯಕ್ರಮಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಪೂಜ್ಯರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಕರೆಸುವಂತೆ ಸಲಹೆ ನೀಡಿದರು.

ಡಾ. ಸಂದೀಪ್ ಎಲ್., ಪ್ರಾಂಶುಪಾಲರು, ಸೇಂಟ್ ಮೇರಿಸ್ ಶಿಕ್ಷಣ ಮಹಾವಿದ್ಯಾಲಯ ಇವರು ಮಾತನಾಡಿ, ಕಾರ್ಯಕ್ರಮದಲ್ಲಿ ವಚನಸಾಹಿತ್ಯ ಸಾಂವಿಧಾನಿಕ ಆಶಯಗಳ ಕುರಿತು ಪ್ರಬಂಧ ಮತ್ತು ಚರ್ಚಾಸ್ಪರ್ಧೆಯನ್ನು ಏರ್ಪಡಿಸುವಂತೆ ಸಲಹೆ ನೀಡಿದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ರಾದ ಡಾ ಪ್ರಶಾಂತ್ ಜಿ., ಮಾತನಾಡಿ, ಹೃದಯರೋಗ ತಜ್ಞರಾದ ಡಾ ಸಿ.ಎನ್. ಮಂಜುನಾಥ್, ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ, ಮಾನಸಿಕ ಆರೋಗ್ಯ ತಜ್ಞರಾದ ಡಾ|| ಸಿ.ಆರ್. ಚಂದ್ರಶೇಖರ್, ಆಹಾರತಜ್ಞರಾದ ಡಾ ಕಿರಣ್‌ಸಾಗರ್ ಅವರನ್ನು ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಬೇಕೆಂದರು.

ಸಭೆಯಲ್ಲಿ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾರಘುನಾಥರೆಡ್ಡಿ, ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ.ಬಿ. ಭರತ್, ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ್ ಟಿ.ಎಸ್., ಎಸ್.ಜೆ.ಎಂ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ಎಸ್.ವಿ., ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ದಿನೇಶ್, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಡಾ. ಎ.ಜಿ. ಬಸವರಾಜು, ಶ್ರೀ ಸದ್ಗುರು ಕಬೀರಾನಂದ ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ್ ಟಿ., ವೆಸ್ಟçನ್ ಹಿಲ್ಸ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುಳಾ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷಿ, ಶ್ರೀಮತಿ ಹೇಮಾವತಿ ಕುವೆಂಪು ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಡಾ. ದಾಸಯ್ಯ ಜಿ., ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಉಷಾ ಎಸ್.ಆರ್., ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಪ್ರೊ. ಹನುಮಂತರಾಯ, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿಕಾಂತ್, ಡಾನ್‌ಬಾಸ್ಕೋ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಫಾದರ್ ಬೆನ್ನಿ, ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್.ಹೆಚ್. ಪಂಚಾಕ್ಷರಿ, ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಈಶ್ವರಪ್ಪ ಎಲ್., ಸಹಪ್ರಾಧ್ಯಾಪಕ ಡಾ. ಶಿವಣ್ಣ, ಉಪನ್ಯಾಸಕ ಡಾ. ಹನುಮಂತರೆಡ್ಡಿ, ಎನ್. ತಿಪ್ಪಣ್ಣ, ಪಿ. ವೀರೇಂದ್ರಕುಮಾರ್ ಮೊದಲಾದವರು ಭಾಗವಹಿಸಿದ್ದರು.

ಎಸ್.ಜೆ.ಎಂ. ವಿದ್ಯಾಪೀಠದ ಶೈಕ್ಷಣಿಕ ಕಾರ್ಯನಿರ್ವಣಾಧಿಕಾರಿ ಚಲುವರಾಜ್ ಎನ್. ಪ್ರಾರಂಭದಲ್ಲಿ ಸ್ವಾಗತ ಕೋರಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಪೂಜಿ ಶಿಕ್ಷಣ ಸಂಸ್ಥೆಯ ಡಾ. ಕೆ.ಎಂ. ವೀರೇಶ್ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *