ಅಕ್ಕಲಕೋಟ (ಮಹಾರಾಷ್ಟ್ರ)
ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ಶರಣ ಪರಂಪರೆ ಜನರ ಬದುಕಲ್ಲಿ ಹಾಸು ಹೊಕ್ಕಾಗಿದೆ. ಶರಣ ಚಳುವಳಿಯ ರೂವಾರಿ ಬಸವಣ್ಣನವರ ಕಾಯಕ ಆರಂಭವಾದದ್ದು ಸೊಲ್ಲಾಪುರ ಜಿಲ್ಲೆಯ ಮಂಗಳವೇಡೆಯಿಂದಲೇ ಎಂದು ಆಳಂದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಉಪನನ್ಯಾಸಕ ಸಂಜಯ ಪಾಟೀಲ ಅಭಿಪ್ರಾಯ ಪಟ್ಟರು.
ಗುರುವಾರ ಇಲ್ಲಿಯ ಪ್ರಿಯದರ್ಶಿನಿ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಆದರ್ಶ ಕನ್ನಡ ಬಳಗ ಮತ್ತು ಸೊಲ್ಲಾಪುರ ಜಿಲ್ಲೆಯ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಗಡಿನಾಡು ಸಾಹಿತ್ಯ -ಸಂಸ್ಕೃತಿ ಉತ್ಸವದ ‘ಗಡಿನಾಡಿನ ಶರಣ ಪರಂಪರೆ’ ಗೋಷ್ಠಿಯಲ್ಲಿ ‘ಶರಣರ ತತ್ವ -ಸಿದ್ದಾಂತಗಳು’ ಕುರಿತು ಮಾತನಾಡುತ್ತಿದ್ದ ಅವರು, ಸೊಲ್ಲಾಪುರದ ಸಿದ್ಧರಾಮ, ಅಮುಗೆದೇವ-ರಾಯಮ್ಮ, ಗಜೇಶ ಮಸಣ್ಣಯ್ಯ-ಮಸಣಮ್ಮ ದಂಪತಿ, ಹಾವಿನಾಳ ಕಲ್ಲಯ್ಯ, ಗುಡ್ಡಾಪುರದ ದಾನಮ್ಮ, ಉರಿಲಿಂಗಪೆದ್ದಿ ಮುಂತಾದ ಶರಣರೆಲ್ಲ ಮಹಾರಾಷ್ಟ್ರದ ಗಡಿಯವರು ಅವರು ಶರಣ ಚಳುವಳಿಗೆ ನೀಡಿದ ಕೊಡುಗೆ ಅಪಾರ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಕ ನೀಲಪ್ಪ ಕವಟಗಿ ‘ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು’ ಕುರಿತು ಮಾತನಾಡುತ್ತ, ಶರಣರ ವಚನಗಳೆಂದರೆ ಅವು ಜೀವನ ಮೌಲ್ಯಗಳ ಭಂಡಾರವಾಗಿದೆ. ಒಂದೊಂದು ವಚನಗಳು ಮನುಷ್ಯನ ಜೀವನ ಪರಿವರ್ತಿಸುತ್ತವೆ. ವಚನಗಳು ಓದಿ ಅವು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ, ಸೊಲ್ಲಾಪುರ ಜಿಲ್ಲೆ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಿವಾನಂದ ಗೋಗಾವ, ಕಲ್ಯಾಣದಲ್ಲಿ ನಡೆದ ಸಮಾಜೋಧಾರ್ಮಿಕ ಕ್ರಾಂತಿಯಲ್ಲಿ ಸೊಲ್ಲಾಪುರ ಜಿಲ್ಲೆಯ ಶರಣರ ಕೊಡುಗೆ ಅಪಾರವಾಗಿದ್ದು ಅದಕ್ಕೆ ಮುಂದಾಳತ್ವ ವಹಿಸಿದವರು ಸೊಲ್ಲಾಪುರದ ಸಿದ್ಧರಾಮ, ಕರ್ಮಯೋಗಿಯಿಂದ ಶಿವಯೋಗಿಯಾಗಿ ಎತ್ತರಕ್ಕೆ ಬೆಳೆದ ಸಿದ್ಧರಾಮರು ಇಂದು ಸೊಲ್ಲಾಪುರದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.

ಉತ್ಸವದ ಸರ್ವಾಧ್ಯಕ್ಷರಾದ ಎಸ್.ಕೆ. ಬಿರಾದಾರ, ಜ್ಞಾನ-ವಿಜ್ಞಾನ ಸಮಿತಿಯ ಕಾರ್ಯದರ್ಶಿ ಆರ್.ಎಸ್. ನಾಯಕ ವೇದಿಕೆಯಲ್ಲಿದ್ದರು.
ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ್ ಪ್ರಮಾಣಪತ್ರ ನೀಡಿ ಗೌರವಿಸಿದರು. ಚಿದಾನಂದ ಮಠಪತಿ ಕಾರ್ಯಕ್ರಮ ನಿರೂಪಿಸಿದರೆ, ಕಾಶಿನಾಥ ಧನಶೆಟ್ಟಿ ವಂದಿಸಿದರು.