ಹುನಗುಂದ
ನಗರದಲ್ಲಿ ವಿಜಯ ಮಹಾಂತ ಶಿವಯೋಗಿಗಳ ಪುರಾಣ ಮಂಗಲ ಮತ್ತು ಒಂದು ಕೋಟಿ ರೂಪಾಯಿ ಹಣದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ್ವರ ಶಿಲಾ ಮಂಟಪವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಮುಂಜಾನೆ ಬಸವಾದಿ ಶರಣರ ವಚನ ಕಟ್ಟುಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪುನರ್ ನಿರ್ಮಾಣಗೊಂಡ ಶ್ರೀ ವಿಜಯಮಹಾಂತೇಶ ಶಿಲಾಮಂಟಪ ಉದ್ಘಾಟನೆಗೆ ಹುನಗುಂದ ಸೇರಿದಂತೆ ಸುತ್ತಲಿನ ಗ್ರಾಮಗಳ ಅಪಾರ ಭಕ್ತರು ಸಾಕ್ಷಿಯಾದರು.

ಉದ್ಘಾಟಕರಾದ ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, “ಆಧುನಿಕ ಧಾವಂತದ ಬದುಕು ಮನುಷ್ಯನ ಸ್ವಾಸ್ಥ್ಯವನ್ನು ಕೆಡಿಸಿದೆ. ಸಮಾಜ ಅಹಮಿಕೆ ತೊರೆದು ಸಮಾಧಾನ ಸಂತೃಪ್ತಿ ಹಾದಿಯಲ್ಲಿ ಸಾಗಬೇಕು. ನಿಸರ್ಗದ ಇಚ್ಛೆಯ ವಿರುದ್ಧ ನಡೆಯಬಾರದು. ನಮ್ಮ ಅರಿವಿನ ವಿಸ್ತಾರ ಆಗಬೇಕು. ಇಂಥ ಅತ್ಯಾಧುನಿಕ ದಿನಮಾನದಲ್ಲಿ ಮೌಢ್ಯಾಚರಣೆ ಇನ್ನೂ ನಡೆಯುತ್ತಿರುವುದು ಖೇದದ ಸಂಗತಿ” ಎಂದರು.

“ಅನುಭಾವಿಗಳು ಮತ್ತು ದಾರ್ಶನಿಕರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸೌಖ್ಯ ಸಿಗುತ್ತದೆ. ಸನ್ಯಾಸದ ಶ್ರೇಷ್ಠತೆ ಹಾಗೂ ಘನತೆಗೆ ಕುಂದು ಬರಬಾರದು. ಸರಳತೆ ಮತ್ತು ನಿರಾಡಂಬರ ಸನ್ಯಾಸಿಗಳ ದಾರಿಗಳಾಗಿ ಭಕ್ತರ ಜೀವನ ಹಾದಿಯ ಬೆಳಕಾಗಬೇಕು. ಭಕ್ತರ ಮತ್ತು ಸಮಾಜದ ಉನ್ನತಿಗೆ ಮಠಗಳು ಶ್ರಮಿಸಬೇಕು” ಎಂದರು.

ಸಾನಿಧ್ಯ ವಹಿಸಿದ ಗುರುಮಹಾಂತ ಶ್ರೀಗಳು ಮಾತನಾಡಿ, “ಜಗತ್ತು ನೈಸರ್ಗಿಕ ಮತ್ತು ಸಾರ್ವತ್ರಿಕ ಪ್ರೇಮಕ್ಕೆ ಆದ್ಯತೆ ಕೊಡಬೇಕು. ಮಾನವೀಯತೆ ಹಾಗೂ ಸಮಾಜ ಸೂಕ್ಷ್ಮತೆಯ ಒಳಿತಿನ ಬೆಳಕು ನಮ್ಮ ಕಣ್ಮುಂದೆ ಇದ್ದಾಗ ಅದರಂತೆ ನಡೆಯಬೇಕು” ಎಂದರು.
ಬೆಳಗಾವಿ ಬೆಳವಿಯ ಶರಣಬಸವ ಅಪ್ಪಗಳು ಪ್ರವಚನ ಮಂಗಲ ಮಾಡಿದರು. ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಮೂರ್ತಿ ಅನಾವರಣ ನಡೆಯಿತು. ದಾಸೋಹಿಗಳನ್ನು ಸನ್ಮಾನಿಸಲಾಯಿತು.
ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳು, ಗುಳೇದಗುಡ್ಡ ಗುರುಸಿದ್ದೇಶ್ವರ ಶ್ರೀಗಳು, ಶಿರೂರ ಡಾ. ಬಸವಲಿಂಗ ಶ್ರೀಗಳು, ಲಿಂಗಸ್ಗೂರು ಸಿದ್ದಲಿಂಗ ಶ್ರೀಗಳು, ಸಂತೆಕೆಲೂರ ಶಿವಲಿಂಗ ಶರಣರು, ಮನಗೂಳಿ ವಿರತೀಶಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ವಿಜಯಮಹಾಂತೇಶ್ವರ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಬಸವ ಕೇಂದ್ರದ ಅಧ್ಯಕ್ಷ ಶಿವಪ್ಪ ನಾಗೂರ ಉಪಸ್ಥಿತರಿದ್ದರು.

ವೀರಣ್ಣ ಬಳೂಟಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಬೆಣಗಿ ಪರಿವಾರದಿಂದ ಪ್ರಾರ್ಥನೆ ನಡೆಯಿತು. ಸಂಗಮೇಶ ಹೊದ್ಲೂರ ನಿರೂಪಿಸಿದರು. ನಾಗರತ್ನ ಭಾವಿಕಟ್ಟಿ ವಂದಿಸಿದರು.
ಅಭಿನಂದನಿಯ.
ಬಸವಮಂಟಪ,
ವಚನಮಂಟಪ,
ವಚನಘೋಷ,
ಸಮಗ್ರ ವಚನ ಸಂಪುಟ ವಚನಗಳ ಕಂಠಪಾಠ ಸ್ಪರ್ಧೆಯಲ್ಲದೆ ಶ್ರಾವಣದಪ್ರವಚನವು ಬರುವದಿನಗಳಲ್ಲಿ ಪ್ರತಿ ಮಠದ ಭಾಗವಾದರೆ ಬಸವಾದಿಶರಣರ ವಚನಗಳನ್ನ ಉಸಿರಾಗಿಸಿಕೊಂಡು ಬಾಳಿದ ಶ್ರೀ ವಿಜಯ ಮಹಾಂತೇಶ್ವರರ ಆಶಯ ಇಡೇರಿಸಿದಂತಾಗುವುದು.
👏💐