ಕಲ್ಬುರ್ಗಿ ಹಂತಕರನ್ನು ಶಿಕ್ಷಿಸಿ ಸರಕಾರ ವಿಶ್ವಾಸ ಉಳಿಸಿಕೊಳ್ಳಲಿ: ಅಶೋಕ ಬರಗುಂಡಿ

ಸಿಂಧನೂರು

ಹಂತಕರು ಕಲ್ಬುರ್ಗಿಯವರನ್ನು ಹತ್ಯೆ ಮಾಡಿದ್ದಾರೆ ಅವರ ಸಿದ್ಧಾಂತವನ್ನಲ್ಲ. ಅವರ ವೈಚಾರಿಕತೆಯನ್ನಲ್ಲ. ಕಲ್ಬುರ್ಗಿ ಹಂತಕರಿಗೆ ಸರಕಾರ ಉಗ್ರವಾದ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದೆ ಹೋದರೆ ಸರಕಾರ ಬುದ್ಧಿಜೀವಿಗಳ, ಚಿಂತಕರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ. ಎಂದು ಚಿಂತಕ ಅಶೋಕ ಬರಗುಂಡಿ ಭಾನುವಾರ ಎಚ್ಚರಿಸಿದರು.

30 ದಿನ ನಡೆದ “ಮೌಡ್ಯಮುಕ್ತ ಬದುಕಿಗಾಗಿ ವಚನ ಶ್ರವಣ” ಕಾರ್ಯಕ್ರಮದ ಸಮಾರೋಪ ಹಾಗೂ “ಡಾ. ಎಂ.ಎಂ. ಕಲಬುರ್ಗಿ ಅವರ ನೆನಹು” ಕಾರ್ಯಕ್ರಮದಲ್ಲಿ ಕಲಬುರ್ಗಿಯವರ ಬದುಕು, ಬರಹ, ಸಾಧನೆ, ಲಿಂಗಾಯತ ಧರ್ಮಕ್ಕಾಗಿ ಅವರು ಕೊಟ್ಟಿರುವ ಕಾಣಿಕೆ ಹಾಗೂ ಎದುರಿಸಿರುವ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿದರು.

ಕೆಲಸ ಮಾಡುವ ಮನಸ್ಸು ಹಾಗೂ ಓದುವವನ ಮನಸ್ಸು ಸದಾ ನಿರ್ಮಲವಾಗಿರುತ್ತದೆ ಎಂಬ ಫ.ಗು. ಹಳಕಟ್ಟಿಯವರ ವಾಕ್ಯ ಕಲಬುರ್ಗಿ ಅವರ ಮೇಲೆ ಅಪಾರವಾದ ಪ್ರೇರಣೆಯನ್ನು ನೀಡಿತು. ಕಲ್ಬುರ್ಗಿಯವರು ತಮ್ಮ ಜೀವಮಾನದುದ್ದಕ್ಕೂ ಅವಿಶ್ರಾಂತವಾಗಿ ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಶರಣರ ಇತಿಹಾಸವನ್ನು ತಮ್ಮ ಅಪಾರ ಶಿಷ್ಯ ಬಳಗದ ಮೂಲಕ ನಾಡಿನಾದ್ಯಂತ ಸಂಚರಿಸಿ ಸಂಶೋಧನೆಯನ್ನು ಕೈಗೊಂಡರು.

ಅವರ ಸಂಶೋಧನಾತ್ಮಕ ಬರಹಗಳು ಹಾಗೂ ಪರಿಣಾಮಕಾರಿ ವಿಚಾರಗಳು ಮತೀಯವಾದಿಗಳಿಗೆ ನುಂಗಲಾರದ ತುತ್ತಾಯಿತು.

ಕಲ್ಬುರ್ಗಿಯವರು ನಮ್ಮಿಂದ ದೈಹಿಕವಾಗಿ ದೂರವಾಗಿ ಹತ್ತು ವರ್ಷ ಕಳೆದುವು, ಆದರೆ ಅವರು ನಿತ್ಯಸತ್ಯರಾಗಿದ್ದಾರೆ. ದೇಹಕ್ಕೆ ಸಾವಿದೆ ಅವರ ವಿಚಾರಗಳು, ಅವರ ಬರಹಗಳು ಸದಾ ಶಾಶ್ವತವಾಗಿರುತ್ತವೆ. ಅವರ ಬರಹಗಳ ಪ್ರೇರಣೆ ನಮ್ಮ ನಿಮ್ಮೆಲ್ಲರಿಗೆ ಮಾರ್ಗಸೂಚಿಗಳಾಗಬೇಕು. ನಾವು ಅವರ ಕನಸನ್ನು ಈಡೇರಿಸುವ ಕಡೆ ಸಾಗಬೇಕಾಗಿದೆ.

ವಚನದರ್ಶನ ಎಂಬ ಪ್ರತಿಗಾಮಿ ಪುಸ್ತಕ ಬಿಡುಗಡೆಯಾಯಿತು. ಅದಕ್ಕೆ ವಿರುದ್ಧವಾಗಿ ನಾವು ವಚನ ದರ್ಶನ ಮಿಥ್ಯ-ಸತ್ಯ ಪುಸ್ತಕ ಬಿಡುಗಡೆ ಮಾಡುವ ಮೂಲಕ ಸರಿಯಾದ ಉತ್ತರ ನೀಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಇಂತಹ ಕುಚೋದ್ಯದ ಕೃತ್ಯಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ಉತ್ತರ ಕೊಡಲು ನಾವು ಸದಾ ಸಿದ್ಧರಿರಬೇಕು, ಎಂದು ಬರಗುಂಡಿ ಹೇಳಿದರು.

ನಗರದ ಬಸವ ಕೇಂದ್ರ, ಮಹಿಳಾ, ಯುವ ಬಸವೇಂದ್ರ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತ ಮೌಢ್ಯಮುಕ್ತ ಬದುಕು ನಮ್ಮದಾಗಬೇಕಾದರೆ ಪ್ರತಿಯೊಬ್ಬರಲ್ಲಿ ಜ್ಞಾನದ ಬೆಳಕು ಮೂಡಬೇಕು. ಸಿಂಧನೂರಿನ ಎಲ್ಲಾ ಬಸವಪರ ಸಂಘಟನೆಯವರು ನಿರಂತರ ತಿಂಗಳು ಪರ್ಯಂತರ ಶರಣರ ವಿಚಾರಧಾರೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಚಲಿತ ಸಮಾಜ ಹೇಗೆ ಮೌಡ್ಯದಿಂದ ಹೊರಬರಬೇಕು ಎನ್ನುವುದರ ಕುರಿತು ಅನೇಕ ಅನುಭಾವಿಗಳನ್ನು ಕರೆದು ಕಾರ್ಯಕ್ರಮ ನಡೆಸಿದ್ದಾರೆ.

ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುವುದರಿಂದ ನಮ್ಮ ಮನದ ಮೈಲಿಗೆ ದೂರವಾಗಿ ಬದುಕು ಮೌಡ್ಯಮುಕ್ತವಾಗುತ್ತದೆ, ಎಂದು ಹೇಳಿದರು.

ನಗರದ ಖ್ಯಾತ ವೈದ್ಯರಾದ ಡಾ. ನಾಗರಾಜ ಪಾಟೀಲ ಮಾತನಾಡುತ್ತಾ, ದೈಹಿಕ ಆರೋಗ್ಯಕಿಂತ ಮಾನಸಿಕ ಆರೋಗ್ಯವೂ ಮುಖ್ಯವಾಗಿರುತ್ತದೆ. ನಾವು ಮಾನಸಿಕ ಆರೋಗ್ಯ ಪಡೆಯಬೇಕಾದರೆ ಆಧ್ಯಾತ್ಮದ ಮೊರೆ ಹೋಗಬೇಕಾಗುತ್ತದೆ. ವಚನಗಳನ್ನು ಬಿಟ್ಟು ಆಧ್ಯಾತ್ಮ ಇಲ್ಲ. ವಚನಗಳು ನಮ್ಮ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತವೆ ಎಂದು ನುಡಿದರು.

ನೇತೃತ್ವವನ್ನು ವಹಿಸಿ ಪೂಜ್ಯ ಸಿದ್ದಬಸವ ಮಹಾಸ್ವಾಮಿಗಳು ಮಾತನಾಡುತ್ತ, ಇಂದಿನ ಯುವಕರು ಲಿಂಗತತ್ವದಿಂದ ದೂರವಾಗುತ್ತಿದ್ದಾರೆ. ಪ್ರತಿಯೊಬ್ಬರು ಲಿಂಗಧಾರಿಗಳಾಗಿ ಲಿಂಗ ಪೂಜೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ಕೇವಲ ವಚನಗಳನ್ನ ಓದಿದರೆ ಸಾಲದು ಅವುಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆ ಮೂಲಕ ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ನುಡಿದರು.

ಸಾನಿಧ್ಯವನ್ನು ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ಯದ್ದಲದೊಡ್ಡಿ ವಹಿಸಿಕೊಂಡಿದ್ದರು.

ಒಂದು ನೂರು ವಚನಗಳನ್ನು ಹೇಳಿದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ 5000 ಬಹುಮಾನವನ್ನು ಘೋಷಿಸಿದರು.

ಪ್ರಾಸ್ತಾನಿಕವಾಗಿ ಬಸವಲಿಂಗಪ್ಪ ಬಾದರ್ಲಿ ಮಾತನಾಡುತ್ತ, ಮೌಢ್ಯ ಮುಕ್ತ ಬದುಕಿಗಾಗಿ ವಚನ ಶ್ರವಣ ಕಾರ್ಯಕ್ರಮ ನಡೆದ ಬಂದ ದಾರಿ ಹಾಗೂ ಕಾರ್ಯಕ್ರಮದಲ್ಲಿನ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಬಸವಕೇಂದ್ರದ ಅಧ್ಯಕ್ಷರಾದ ಕರೇಗೌಡ ಕುರುಕುಂದ ಸ್ವಾಗತಿಸಿದರು. ಚಂದ್ರೇಗೌಡ ಹರಟನೂರ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಶರಣಬಸಪ್ಪ ಸಾಹುಕಾರ, ಶರಣಪ್ಪ ತೆಂಗಿನಕಾಯಿ, ನಿಜಗುಣ ಹಡಪದ, ಸುಮಂಗಲ ಚಿಂಚರಕಿ, ಶರಣಪ್ಪ ಹೊಸಹಳ್ಳಿ ಉಪಸ್ಥಿತರಿದ್ದರು.

ಹಿರಿಯ ಶರಣರಾದ ಹೆಚ್ ಜಿ ಹಂಪಣ್ಣನವರು ಮೂವತ್ತು ದಿನದ ಕಾಯಕ್ರಮಗಳ ವಿಷಯಾಧಾರಿತ ಪ್ರಬಂಧ ಸ್ಪರ್ಧೆ ವಿಧ್ಯಾರ್ಥಿನಿಯರಿಗೆ ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ನೀಡಿದರು.

ಮುಖ್ಯಮಂತ್ರಿ ಪದಕ ಪಡೆದ ಸಿಪಿಐ ಶರಣಶ್ರೀ ಅಯ್ಯನಗೌಡ ಗುಂಜಳ್ಳಿ ಇವರನ್ನು ಗೌರವಿಸಲಾಯಿತು.

ನೂರಾರು ಬಸವ ಅನುಯಾಯಿಗಳು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
1 Comment

Leave a Reply

Your email address will not be published. Required fields are marked *