‘ಬಸವ ತತ್ವ ಅರಿತವರು ಮೌಢ್ಯದಿಂದ ದೂರ’

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳನ್ನು ಅರಿತು ಅನುಷ್ಠಾನಕ್ಕೆ ತಂದಲ್ಲಿ ಧಾರ್ಮಿಕ ಮೌಢ್ಯದಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ತಿಳಿಸಿದರು.

ನಗರದ ಕಾವೇರಿ ನಗರದಲ್ಲಿ ಬಸವ ಫೌಂಡೇಶನ್ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಡೆಯುತ್ತಿದ್ದ ಮನೆ ಮನಗಳಿಗೆ ಬಸವಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವರ ಹೆಸರಲ್ಲಿ ನಡೆಯುತ್ತಿರುವ ಶೋಷಣೆಗಳ ವಿರುದ್ಧ 12ನೇ ಶತಮಾನದಲ್ಲೇ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ನಡೆಸಿ ಸರ್ವರೂ ಸಮಾನರೆಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಕಾಯಕದಲ್ಲೇ ಕೈಲಾಸ ಕಾಣಬೇಕೆಂಬ ಅಣ್ಣನವರ ತತ್ವವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಯಾವುದೇ ಗುಡಿ ಗುಂಡಾರಗಳಿಗೆ ಸುತ್ತುವ ಅವಶ್ಯಕತೆ ಇಲ್ಲ ಎಂದರು.

900 ವರ್ಷಗಳ ಹಿಂದೆಯೇ ಅಘೋಷಿತ ಸಂವಿಧಾನವನ್ನು ಜಾರಿಗೊಳಿಸಿದ ಬಸವಣ್ಣನವರು ವಿಶ್ವ ಸಂವಿಧಾನ ಶಿಲ್ಪಿಯಾಗಿದ್ದಾರೆ. ಎಲ್ಲಾ ಜಾತಿ, ಧರ್ಮ, ವರ್ಗ, ವರ್ಣವನ್ನು ಶರಣ ಪರಂಪರೆಯ ಮೂಲಕ ಒಗ್ಗೂಡಿಸಿದ ಶಿವಶರಣರ ಆದರ್ಶಗಳನ್ನು ಅರಿತು ಮೌಢ್ಯಾಚರಣೆಯಿಂದ ಹೊರಬರಬೇಕೆಂದು ಅವರು ಮನವಿ ಮಾಡಿದರು.

ಬಸವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್ ಬೆಟ್ಟಹಳ್ಳಿ, ಇಂದಿನ ದಿನಮಾನಗಳಲ್ಲಿ ಬಸವೇಶ್ವರರನ್ನು ಮರೆಮಾಚುವ ಷಡ್ಯಂತ್ರಗಳು ಹೆಚ್ಚಾಗಿ ನಡೆಯುತ್ತಿರುವುದು ವಿಷಾದನೀಯ. ಸಮಸಮಾಜವನ್ನು ನಿರ್ಮಾಣ ಮಾಡಿದ ಮಹಾತ್ಮ ಬಸವಣ್ಣನವರು ಮಹಿಳೆಯರಿಗೂ ಸಮಾನತೆಯನ್ನು ಕೊಟ್ಟು ಅನುಭವ ಮಂಟಪದಲ್ಲಿ ಎಲ್ಲರೂ ಒಂದೇ ಎಂಬ ವಿಚಾರದಡಿಯಲ್ಲಿ ಕಟ್ಟಿದ ಶರಣ ಸಂಸ್ಕೃತಿ ಸೂರ್ಯ ಚಂದ್ರರಿರುವವರೆಗೂ ಅಜರಾಮರವಾಗಿ ಉಳಿಯಲಿದೆ ಎಂದರು.

ನಿವೃತ್ತ ಸೇವಾನಿ ಸುರೇಶ್ ಮಾತನಾಡಿ, ಇಡೀ ಜಗತ್ತಿಗೆ ಜ್ಯೋತಿಯಾಗಿ ಹೊರಹೊಮ್ಮಿದ ಶರಣರ ಕ್ಷೇತ್ರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಿ ಶರಣರ ಸಂದೇಶಗಳನ್ನು ಅರಿತಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಬಸವಣ್ಣನವರ ಬೆಳಕನ್ನು ಮನೆಮನೆಗಳಿಗೆ ತಲುಪಿಸಬೇಕಾದ ಮಹತ್ತರ ಕಾರ್ಯವನ್ನು ಬಸವ ಫೌಂಡೇಶನ್ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಬಸವ ಕೇಂದ್ರದ ಅಧ್ಯಕ್ಷ ಕಿರುಗಾವಲು ನಾಗರಾಜ್ ಮಾತನಾಡಿ, ಶ್ರಾವಣ ಮಾಸದಲ್ಲಿ ಬಸವ ಜ್ಯೋತಿಯನ್ನು ಶರಣರ ಕ್ಷೇತ್ರಗಳಿಂದ ತಂದು ಬಸವಭಕ್ತರ ಮನೆಮನಗಳಲ್ಲಿ ಬಸವೇಶ್ವರರ ಆದರ್ಶಗಳನ್ನು ಬಿತ್ತುವ ಮಹತ್ಕಾರ್ಯದಲ್ಲಿ ನಿರತರಾಗಿರುವ ಶರಣೆ ಅಪರ್ಣ ಶಿವಕುಮಾರ್ ಅವರ ಭಕ್ತಿಯ ಸೇವೆ ಆದರ್ಶನೀಯ. ಮತ್ತೆ ಕಲ್ಯಾಣದ ಕಡೆ ನಮ್ಮ ನಡೆ ಸಾಗಿದಾಗ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ. ಶಿವಕುಮಾರ್, ಯೋಗ ಶಿಕ್ಷಕರಾದ ಶಿವರುದ್ರಸ್ವಾಮಿ, ಮಲ್ಲಿಕಾರ್ಜುನಯ್ಯ, ಕಲಾವಿದ ಜೀಗುಂಡಿಪಟ್ಟಣ ಆರಾಧ್ಯ, ಮೆಣಸಗೆರೆ ಶಿವಲಿಂಗಯ್ಯ ಶರಣ ತತ್ವದ ತಮ್ಮ ಅನುಭಾವದ ನುಡಿಗಳನ್ನು ಹಂಚಿಕೊಂಡರು.

ಬಸರಾಳು ಬಸವರಾಜ, ಬಸವಲಿಂಗಯ್ಯ, ಕೆಂಚೇಗೌಡ, ಆದರ್ಶ, ಜಗದಾಂಭ ಪ್ರಕಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *