‘ಜಾತಿ ಕಾಲಂನಲ್ಲಿ ಎಲ್ಲಾ ಒಳಪಂಗಡಗಳಿಗೆ ‘ಲಿಂಗಾಯತ’ ಬರೆಸಲು ಅವಕಾಶವಿಲ್ಲ.
ಬೆಳಗಾವಿ
ಮುಂದಿನ ತಿಂಗಳು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ, ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ನಮೂದಿಸಬೇಕು. ಒಂದುವೇಳೆ ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ಬರೆಯಲು ಅವಕಾಶ ಕೊಡದಿದ್ದರೆ, ಧರ್ಮದ ಕಾಲಂನಲ್ಲಿ “ಇತರೆ ಅಥವಾ ಯಾವುದೂ ಇಲ್ಲ” ಎಂದು ನಮೂದಿಸಿ.
ಆಗ ಜಾತಿ ಕಾಲಂನಲ್ಲಿ “ಲಿಂಗಾಯತ” ಅಥವಾ “ಲಿಂಗಾಯತದ ಜೊತೆಗೆ ತಮ್ಮ ಜಾತಿ”ಯನ್ನು ನಮೂದಿಸುವಂತಾಗಬೇಕು ಅಥವಾ ಜಾತಿ ಕಾಲಂನಲ್ಲಿ “ಲಿಂಗಾಯತ” ಮಾತ್ರ ಮತ್ತು ಉಪಜಾತಿ ಕಾಲಂನಲ್ಲಿ” ತಮ್ಮ ಜಾತಿ/ಕುಲಕಸಬು/ಒಳಪಂಗಡ”ವನ್ನು ನಮೂದಿಸುವಂತಾಗಬೇಕು ಎಂದು ನ್ಯಾಯವಾದಿ ಸುನೀಲ ಸಾಣಿಕೊಪ್ಪ ಮನವಿ ಮಾಡಿದರು.
ಲಿಂಗಾಯತ ಸಂಘಟನೆ ವತಿಯಿಂದ, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ವಚನ ವಿಶ್ಲೇಷಣೆ ಸಾಮೂಹಿಕ ಪ್ರಾಥ೯ನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಲಿಂಗಾಯತ ಧರ್ಮ ಮತ್ತು ಜಾತಿ-ಸಮೀಕ್ಷೆ” ಕುರಿತು ಮಾತನಾಡಿ, ರಾಜ್ಯದಲ್ಲಿ 108 ಒಳಪಂಗಡಗಳನ್ನು ಹೊಂದಿರುವ ಲಿಂಗಾಯತ ಸಮುದಾಯವು ಬಹುದೊಡ್ಡ ಸಮಾಜವಾಗಿದ್ದರೂ ಕೂಡ ಜನಗಣತಿಯಲ್ಲಿ ಒಟ್ಟು ಜನಸಂಖ್ಯೆಯ ಕೇವಲ 11% ಮಾತ್ರ ಲಿಂಗಾಯತರು ಮತ್ತು ಕೇವಲ 10% ಮಾತ್ರ ಒಕ್ಕಲಿಗರು ಎಂದು ದಾಖಲಿಸಲಾಗಿದೆ ಎಂದು ತಿಳಿಸಿದರು.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಲು ಅವಕಾಶವಿಲ್ಲದ ಕಾರಣ ಬಹುತೇಕ ಜನರು ಧರ್ಮವನ್ನು “ಹಿಂದೂ” ಅಥವಾ “ಇತರರು” ಎಂದು ನಮೂದಿಸಿದ ಕಾರಣ, ಲಿಂಗಾಯತರ ನೈಜ ಜನಸಂಖ್ಯೆ ವರದಿಯಾಗುತ್ತಿಲ್ಲ.
ಜಾತಿ ಕಾಲಂನಲ್ಲಿ ಸಹ ಲಿಂಗಾಯತರ ಎಲ್ಲ ಒಳಪಂಗಡಗಳಿಗೆ ‘ಲಿಂಗಾಯತ’ ಎಂದು ಬರೆಸಲು ಅವಕಾಶವಿಲ್ಲ. ಹೀಗಾಗಿ ಧರ್ಮ, ಜಾತಿ ಮತ್ತು ಉಪಜಾತಿ ಕಾಲಂಗಳಲ್ಲಿ ಬಹುತೇಕ ಒಳಪಂಗಡಗಳಿಗೆ ‘ಲಿಂಗಾಯತ’ ಎಂದು ಬರೆಸಲು ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ ಅಂಕಿ-ಅಂಶಗಳ ಪ್ರಕಾರ, ಲಿಂಗಾಯತ ಸಮುದಾಯ ಕ್ಷೀಣಿಸುತ್ತಿದೆ.

ಆದ್ದರಿಂದ, ಲಿಂಗಾಯತ ಸಮುದಾಯಕ್ಕೆ ನ್ಯಾಯ ಸಿಗಬೇಕಾದರೆ ಸರ್ಕಾರವು ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ನಮೂದಿಸಲು ಲಿಂಗಾಯತರಿಗೆ ಅವಕಾಶ ಮಾಡಿಕೊಡಬೇಕು ಸಾಣಿಕೊಪ್ಪ ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈರಣ್ಣಾ ದೇಯಣ್ಣವರ ಮಾತನಾಡಿ, ಮೊನ್ನೆ ವೀರಶೈವ ಮಹಾಸಭಾದವರು ‘ಲಿಂಗಾಯತ ಅಥವಾ ವೀರಶೈವ’ ಎಂದು ನಮೂದಿಸಬೇಕೆಂದು ಗೊಂದಲದ ಹೇಳಿಕೆ ನೀಡಿದ್ದು ಅದು ಸರಿಯಲ್ಲ. ಅದನ್ನು ಲಿಂಗಾಯತ ಸಂಘಟನೆ ವಿರೋಧಿಸುತ್ತದೆ. ಲಿಂಗಾಯತರ ಜಾತಿಸಮೀಕ್ಷೆ ಕುರಿತು ಸರ್ಕಾರ ಸ್ಪಷ್ಟ ನಿಲುವನ್ನು ತಾಳಬೇಕು. ಲಿಂಗಾಯತರಿಗೆ ಸಮೀಕ್ಷೆಯಲ್ಲಿ ತಮ್ಮ ಧರ್ಮವನ್ನು ನಮೂದಿಸಲು ಅವಕಾಶ ಮಾಡಿಕೊಡಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಲಿಂಗಾಯತರನ್ನು ಗುರುತಿಸುವ ವ್ಯವಸ್ಥೆ ಮಾಡದೇ ಹೋದರೆ, ಜಾತಿಸಮೀಕ್ಷೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಾರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡಿಸಿಕೂಟ್ಟರು, ಸುರೇಶ ನರಗುಂದ, ಬಿ.ಪಿ. ಜೇವಣಿ, ಬಸಮ್ಮ ಮಠದ, ಬಸವರಾಜ ಬಿಜ್ಜರಗಿ, ಅಕ್ಕಮಹಾದೇವಿ, ಜಯಶ್ರೀ ಚಾವಲಗಿ, ವಿ.ಕೆ. ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು.
ಡಾ. ದಿವ್ಯ ಮತ್ತಿಕಟ್ಟಿ ದಾಸೋಹ ಸೇವೆ ಸಲ್ಲಿಸಿದರು, ಸದಾಶಿವ ದೇವರಮನಿ, ಬಸವರಾಜ ಕರಡಿಮಠ, ಗುರುಸಿದ್ದಪ್ಪ ರೇವಣ್ಣವರ, ಮಂಗಳಾ ಕಾಗತಿಕರ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಬಾಬಣ್ಣ ತಿಗಡಿ, ಶಿವಾನಂದ ತಲೢೂರ, ಮಲಗೌಡ ಪಾಟೀಲ, ಶೇಖರ ವಾಲಿಇಟಗಿ, ಬಸವರಾಜ ಮತ್ತಿಕಟ್ಟಿ, ಶ್ರದ್ಧಾ ಸದಾಶಿವಯ್ಯ, ಪ್ರೀತಿ ಮಠದ, ಆನಂದ ಕರಕಿ, ಪ.ಬ. ಕರಿಕಟ್ಟಿ, ಭಾಗವಹಿಸಿದ್ದರು. ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.