ಅಮೇರಿಕಾದಲ್ಲಿ ಶುರುವಾಗುತ್ತಿರುವ ವಚನ ಶಾಲೆಗೆ ಭಾರಿ ಪ್ರತಿಕ್ರಿಯೆ 

ಬಸವ ಮೀಡಿಯಾ
ಬಸವ ಮೀಡಿಯಾ

ನಾಲ್ಕು ಸೆಮಿಸ್ಟರುಗಳ ಕೋರ್ಸ್: ‘ಬಸವ ಬಲ್ಲ’, ‘ಅಕ್ಕ ಬಲ್ಲ’, ‘ಅಲ್ಲಮ ಬಲ್ಲ’, ‘ವಚನ ಬಲ್ಲ’

ಬೆಂಗಳೂರು 

ಅಮೇರಿಕಾದಲ್ಲಿ ಆಗಸ್ಟ್ 30ರಿಂದ 24 ಹವ್ಯಾಸಿ ಶಿಕ್ಷಕರೊಂದಿಗೆ ಶುರುವಾಗುತ್ತಿರುವ ಆನ್ಲೈನ್ ವಚನ ಶಾಲೆಗೆ ಭಾರಿ ಪ್ರತಿಕ್ರಿಯೆ ಬಂದಿದೆ. 

ಉತ್ತರ ಅಮೇರಿಕಾದ ವೀರಶೈವ ಸಮಾಜದ ವತಿಯಿಂದ ಶುರುವಾಗುತ್ತಿರುವ ವಚನ ಶಾಲೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 24 ಕಡೆಯ ದಿನವಾಗಿತ್ತು. ಆಯೋಜಕರು ಗರಿಷ್ಟ 90 ವಿದ್ಯಾರ್ಥಿಗಳನ್ನು ನಿರೀಕ್ಷಿಸಿದ್ದರೂ ನೋಂದಾಯಿಸಿಕೊಂಡ ಮಕ್ಕಳ ಸಂಖ್ಯೆ 99. 

ಈಗ ಈ ತಿಂಗಳಿಂದ ಶುರುವಾಗುವ ಕೋರ್ಸಿಗೆ ನೋಂದಣಿ ನಿಲ್ಲಿಸಲಾಗಿದೆ. 2026ರ ಜನವರಿ ತಿಂಗಳಿಂದ ಶುರುವಾಗುವ ಕೋರ್ಸಿಗೆ ಅರ್ಜಿಗಳನ್ನು ಕರೆಯಲಾಗಿದೆ. 

ಹರೀಶ್ ಹಿರೇಮಠ್

ಕೆಲವು ವರ್ಷಗಳಿಂದ ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಹರೀಶ್ ಹಿರೇಮಠ ಹಾಗೂ ಗದಿಗೆಪ್ಪ ದೊಡ್ಡಮನಿ ಅವರ ಮನಸಿನಲ್ಲಿದ್ದ ವಚನ ಶಾಲೆ ಈಗ ಬೆಳಕು ಕಾಣುತ್ತಿದೆ. 

“ಅಮೇರಿಕಾದಲ್ಲಿ ಬೆಳೆಯುವ ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷೆಯ ಪರಿಚಯ ಮಾಡಿಕೊಡುವುದು ವಚನ ಶಾಲೆಯ ಉದ್ದೇಶ. ಬಾಲ್ಯದಲ್ಲಿಯೇ ವಚನಗಳನ್ನು ಪರಿಚಯ ಮಾಡಿಕೊಟ್ಟರೆ ದೊಡ್ಡವರಾದ ಮೇಲೂ ನಮ್ಮ ಮೌಲ್ಯಗಳನ್ನು ಮಕ್ಕಳು ಉಳಿಸಿಕೊಳ್ಳುತ್ತಾರೆ,” ಎನ್ನುತ್ತಾರೆ ಹಿರೇಮಠ. 

ಎಂಟರಿಂದ ಹದಿನಾಲ್ಕರ ಮಕ್ಕಳನ್ನು ವಯಸ್ಸಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಬೇರೆ ಬೇರೆ ಸಮಯ ವಲಯದಲ್ಲಿರುವ ಮಕ್ಕಳ ಅನುಕೂಲಕ್ಕೆ ವಾರಕ್ಕೆ ಒಂದು ಗಂಟೆ ಅವಧಿಯ ತರಗತಿಗಳು ಶನಿವಾರ ಮತ್ತು ಭಾನುವಾರ ನಡೆಯುತ್ತದೆ. 

ಒಟ್ಟು ನಾಲ್ಕು ಸೆಮಿಸ್ಟರುಗಳ ಅಥವಾ ಎರಡು ವರ್ಷದ ವಚನಗಳ ಕೋರ್ಸ್ ಅನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಇವುಗಳಿಗೆ ‘ಬಸವ ಬಲ್ಲ’, ‘ಅಕ್ಕ ಬಲ್ಲ’, ‘ಅಲ್ಲಮ ಬಲ್ಲ’ ಮತ್ತು ‘ವಚನ ಬಲ್ಲ’ ಎಂಬ ಹೆಸರಿಡಲಾಗಿದೆ. 

‘ಬಸವ ಬಲ್ಲ’ ಸೆಮೆಸ್ಟರಿನಲ್ಲಿ ಮಕ್ಕಳು ಬಸವಣ್ಣನವರ ಆಯ್ದ ವಚನಗಳನ್ನು ಕಲಿಯುತ್ತಾರೆ. ನಂತರ ‘ಅಕ್ಕ ಬಲ್ಲ’, ‘ಅಲ್ಲಮ ಬಲ್ಲ’ ಕೋರ್ಸುಗಳಲ್ಲಿ ಅಕ್ಕನ, ಅಲ್ಲಮರ ಹಾಗೂ ಕೆಲವು ಆಯ್ದ ಶರಣರ ವಚನಗಳನ್ನು ಕಲಿಯುತ್ತಾರೆ. ಕೊನೆಯ ‘ವಚನ ಬಲ್ಲ’ ಕೋರ್ಸಿನಲ್ಲಿ ಮಿಕ್ಕ ಪ್ರಮುಖ ಶರಣರ ವಚನಗಳನ್ನು ಕಲಿಯುತ್ತಾರೆ. 

ಪ್ರತಿ ಸೆಮೆಸ್ಟರಿನಲ್ಲಿ 14 ತರಗತಿಗಳಿರುತ್ತವೆ. ಒಂದೊಂದು ತರಗತಿಯಲ್ಲಿ ಒಂದೊಂದು ವಚನಗಳನ್ನು ಕಲಿಸಲಾಗುವುದು. ಮೊದಲು ಸರಳ ರಾಗದಲ್ಲಿ ವಚನ ಹಾಡಲು ಕಲಿಸಿ, ಅರ್ಥ ವಿವರಿಸಲಾಗುವುದು. ನಂತರ ಸಂಬಂಧಿಸಿದ ಶರಣರ ಕಥೆಯನ್ನು ಹೇಳಿ, ಮಕ್ಕಳಿಂದಲೂ ವಚನ ಹೇಳಿಸಲಾಗುವುದು. ಮುಂದಿನ ವಾರ ಆ ವಚನವನ್ನು ಕಲಿತುಕೊಂಡು ಬರಲು ಹೇಳಲಾಗುವುದು. 

ಆಸಕ್ತಿ ತೋರಿಸಿ ಕರೆ ಮಾಡಿದ ಅನೇಕ ತಂದೆತಾಯಿಗಳು ವಚನ ಶಾಲೆಗೆ ಶುಲ್ಕವೆಷ್ಟು ಎಂದು ಕೇಳಿದರು. ಮಕ್ಕಳು ಮನೆಯಲ್ಲಿ ವಚನ ಕಲಿತು ಮುಂದಿನ ವಾರಕ್ಕೆ ಸಿದ್ದರಾಗಿ ಬರುವಂತೆ ನೋಡಿಕೊಳ್ಳಿ. ಅದೇ ನೀವು ಕೊಡಬೇಕಿರುವ ಶುಲ್ಕ, ಎಂದು ಅವರಿಗೆ ತಿಳಿಸಲಾಯಿತು. 

“ವಚನಗಳಿಂದ ಮಕ್ಕಳಲ್ಲಿ ಜಾಗೃತಿ ಮೂಡುತ್ತದೆ. ಕುಟುಂಬದೊಳಗಿನ ಬಾಂಧವ್ಯವೂ ಬೆಳೆಯುತ್ತದೆ. ವಚನ ಶಾಲೆಗೆ ಉತ್ತಮ ಪ್ರತಿಕ್ರಿಯೆ ಬರಲು ಇದು ಮುಖ್ಯ ಕಾರಣ,” ಎಂದು ಹಿರೇಮಠ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
18 Comments
  • ಬಹಳ ಸೊಗಸಾದ ಆಯೋಜನೆ ಹಿರೇಮಠ ಸರ್,
    ನಿಮಗೆ ಅಭಿನಂದನೆಗಳು. ನಮ್ಮ ಕನ್ನಡ ದ ಮಕ್ಕಳಿಗೆ ಮಾಡಲಾರದ ಕಾರ್ಯ ವನ್ನು ನೀವು ಮಾಡುತ್ತಿರುವುದು ಮಾದರಿಯಾಗಿದೆ, ಅನುಕರಣಿಯವಾಗಿದೆ. ಕೋರ್ಸ್ ಗಳು ಯಶಸ್ವಿಯಾಗಿ ನಡೆಯಲಿ, ಬಸವಾದಿ ಶರಣರ ಕೃಪೆ ಇರಲಿ. 💐🙏

    • ಆಯೋಜಕರಿಗೆ ಅನಂತ ಧನ್ಯವಾದ. ಭಾರತದ ಬಸವನಿಂದ ವಿಶ್ವದ ಬವಣೆಗಳು ನಿವಾರಿಸುವ ಮಂತ್ರಗಳು ವಚನದಲ್ಲಿ ಅಡಕವಾಗಿವೆ. ಅಂತಹ ವಚನಗಳನ್ನ ವಿಶ್ವಮಟ್ಟದಲ್ಲಿ ತಲುಪಿಸುತ್ತಿರುವುದು ಬಹಳ ಸಂತೋಷದ ವಿಷಯ. ನಿಮಗೆ ಶರಣು ಶರಣು ಶರಣಾರ್ಥಿಗಳು

      • ಹಿರೇಮಠ ಗುರುಗಳ ದೂರದ್ರೖಷ್ಟಿಗೆ ಶರಣು ಶರಣಾರ್ಥಿಗಳು. ಎಲ್ಲರೂ ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ವಿಶ್ವಮಾನ್ಯ ಬಸವಾದಿ ಶರಣರನ್ನು ದೂರಿಕರಿಸುವ ಈ ಸಂದರ್ಭದಲ್ಲಿ ತಾವು ವಚನಸಾಹಿತ್ಯಕ್ಕೆ ಆಧ್ಯತೆ ಕೊಟ್ಟಿರುವುದು ಶ್ಲಾಘನೀಯ. ಶರಣು, ಶರಣಾರ್ಥಿಗಳು 🙏🙏

    • 12 ನೆಯ ಶತಮಾನದ ಸವಿನೆನಪನ್ನು ಅಮೇರಿಕಾದಲ್ಲಿ 21 ನೆಯ ಶತಮಾನದಲ್ಲಿ ನೆನಪಿಸಿದ್ದು ಸ್ತುತ್ಯಾರ್ಹ. ಬಸವಣ್ಣನವರ ಅನುಭವ ಮಂಟಪದ ಮರುಸ್ಥಾಪನೆ ಕಾಲ ದೂರವಿಲ್ಲ. ಇದರ ಎಲ್ಲ ರೂವಾರಿಗಳಿಗೆ ಅನಂತ ಕೋಟಿ ಶರಣು. ನಮ್ಮಿಂದ ಏನಾದರೂ ಸೇವೆ ಸಲ್ಲಿಸಲಿಕ್ಕೆ ಸಾಧ್ಯವಾದರೆ ನಾವೂ ಧನ್ಯರೇ. ಅಮೇರಿಕಾದಲ್ಲಿ ವಚನದ ಕಂಪು ಹರಡಲಿ. ಜೈ ಬಸವೇಶ. 🌹🙏

  • ಭಾರತದಲ್ಲಿ ಮಾಡಲಾರದ ವಚನ ಸಾಹಿತ್ಯ ಚಳುವಳಿ ತಾವು ಮಾಡುತ್ತಿರುವುದು ತುಂಬ ಸ್ಲಾಘನೀಯ. ಮಕ್ಕಳನ್ನು ಪ್ರೇರೇಪಿಸಿ ಅವರ ಸೇವೆಗಾಗಿ ಧನ್ಯವಾದಗಳು. ಎಲ್ಲರಿಗೂ ಶುಭವಾಗಲಿ. ಬಸವಣ್ಣನವರ ಆಶೀರ್ವಾದ ತಮ್ಮ ಮೇಲೆ ಇರಲಿ ಎಂದು ಹಾರೈಸುವ.

  • ಬಹಳ ಅದ್ಭುತ ಕೆಲಸ ಮಾಡುತ್ತಿದ್ದೀರಿ ಗುರುಗಳೇ ಅಭಿನಂದನೆಗಳು

    • ಅದ್ಭುತವಾದ ಕಾರ್ಯ…
      ಶುಭವಾಗಲಿ…
      ಶರಣಾರ್ಥಿ…👏🏻👏🏻👏🏻💐💐💐

  • ಧನ್ಯವಾದಗಳು 🌹🙏.
    ಅದ್ಭುತವಾದ ಕೆಲಸ. ಭಾರತದಲ್ಲಿಯೂ ಮಾಡುವ ಯೋಚನೆ ಮಾಡಬೇಕು.

  • ಕನ್ನಡದ ವಚನ ಸಾಹಿತ್ಯ ಅಮೆರಿಕಾ ಮಕ್ಕಳಿಗೆ ‌ಪರಿಚಯಿಸುತ್ತಿರುವುದು. ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಪ್ರಪಂಚದಾದ್ಯಂತ ವಚನ ಸಾಹಿತ್ಯ ಪಸರಿಸಲಿ.ಎಲ್ಲೆಲ್ಲೂ ವಚನಗಳ ಮಾಧುರ್ಯ ನಿನಾದ.ರಿಂಗುಣಿಸಲಿ.ಕಾಯಕ,ದಾಸೋಹ, ಭಕ್ತಿ, ಶರಣ ತತ್ವ ಮಾನವೀಯತೆ ಮೆರೆಯಲಿ

    • Ee kelasa yavagalo aagabekagittu tadavadaroo paravagilla tamma ee yatnakke tumba dhanyavadagalu sir. Sharanu.

  • ಬಹಳ ಉತ್ತಮವಾದ ಕೆಲಸ ಮಾಡುತ್ತಿದ್ದೀರಿ ಇದು
    ಉಳಿದ ದೇಶದಲ್ಲಿ ಮತ್ತು ನಿಮ್ಮ ದೇಶದ ಮಕ್ಕಳಿಗೆ
    ಬಸವ ತತ್ವ ಪ್ರಸಾರಕರಿಗೆ ಮಾದರಿಯಾಗಲಿ
    ಅಮೇರಿಕದ ಎಲ್ಲಾ ಬಸವಾಭಿಮಾನಿಗಳಿಗೆ
    ತುಂಬು ಹೃದಯದ ಧನ್ಯವಾದಗಳು 🙏🙏

  • ಒಳ್ಳೆಯ ಕೆಲಸಕ್ಕೆ ನನ್ನದೊಂದು ನಮಸ್ಕಾರ. ಇಂತಹ ಒಳ್ಳೆಯ ಪ್ರಯತ್ನಗಳು ನಡೆದರೆ ಒಳ್ಳೆಯ ಸಮಾಜ ಹಾಗೂ ಒಳ್ಳೆಯ ಮುಂದಿನ ನಾಗರಿಕರನ್ನು ಸೃಷ್ಟಿ ಮಾಡಬಹುದು.

  • ನೀವು ಪ್ರಾರಂಭಿಸುತ್ತಿರುವ ” ವಚನ ಶಾಲೆ ” ಪಶ್ಚಿಮದ ಜಗತ್ತಿಗೆ ಅರಿವು – ಅನುಭಾವದ ಬೆಳಕು ಪಸರಿಸುವ “ಪಂಜು ” ಆಗಲೆಂದು ಹಾರೈಕೆ.
    ಕಲ್ಯಾಣ ಕ್ರಾಂತಿಯ ನಂತರ ಅಮೂಲ್ಯ ವಚನ ಸಾಹಿತ್ಯ ದ ಸಂರಕ್ಷಕರಾದ ಚನ್ನಬಸವಣ್ಣರ ಶರಣ ಬಳಗದ ಒಂದು ಗುಂಪಾದರೂ ಕಾರವಾರ -ಗೋವಾ ದಿಂದ ಹಡಗನ್ನ ತ್ತಿ ವಚನ ಓಲೆ ಗರಿಗಳನ್ನು ಪಶ್ಚಿಮಕ್ಕೆ ತಲುಪಿಸುವ ಅವಕಾಶ ಅಂದು ಸಿಕ್ಕಿದ್ದಾರೆ, ಪ್ರಸ್ತುತ ಜಗತ್ತಿನ ವಿದ್ಯಾಮಾನಗಳು ಎಗಿರುತ್ತಿದ್ದವೆಂಬುದು ಕಲ್ಪನೆ ಗೆ ಬಿಟ್ಟ ವಿಚಾರ…..

  • ವೀರಶೈವ ಸಮಾಜದ ಹಿರೇಮಠ ಅನ್ನುವುದು ಅಷ್ಟೊಂದು ಸಮಂಜಸ ಅಲ್ಲ.
    ಲಿಂಗಾಯತ ಧರ್ಮದ ಹಿರೇಮಠ ಅನ್ನುವುದು ಸೂಕ್ತ

  • ಭಾರತದಲ್ಲಿ ಅಷ್ಟೇ ಏಕೆ ಕರ್ನಾಟಕದಲ್ಲೂ . ಸಾಧ್ಯವಾಗದಂತ ವಚನ ಸಾಹಿತ್ಯ ಚಳುವಳಿ ತಾವು ಮಾಡುತ್ತಿರುವುದು ತುಂಬ ಶ್ಲಾಘನೀಯ. ತಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೇ ಧನ್ಯವಾದಗಳು. ಎಲ್ಲರಿಗೂ ಶುಭವಾಗಲಿ. ಬಸವಣ್ಣನವರ ಪರಿಚಯ ,ವಚನ ಸಾಹಿತ್ಯ ಇಡೀ ವಿಶ್ವದಲ್ಲಿ ಪಸರಿಸಲಿ ಎಂದು ಹಾರೈಸುವೆ.
    ನಿಮ್ಮ ಈ ಸಾಧನೆಗೆ ಅಧ್ಭುತ ಯಶಸ್ಸುಗಳಿಸಲಿ.🙏🙏

Leave a Reply

Your email address will not be published. Required fields are marked *