ಇಷ್ಟಲಿಂಗ ಪೂಜೆ, ಶರಣರ ಸಂಗದಿಂದ ಶಾಶ್ವತ ಆಂತರಿಕ ಸುಖ: ಸಿದ್ಧರಾಮೇಶ್ವರ ಶ್ರೀ

ಬಾಗಲಕೋಟೆ


“ಮಾನವ ಯಾವಾಗಲೂ ಸುಖದ ಅನ್ವೇಷಣೆಯಲ್ಲಿರುತ್ತಾನೆ. ಭೌತಿಕ ಸುಖ ಶಾಶ್ವತವಲ್ಲ, ಆಂತರಿಕ ಸುಖ ಶಾಶ್ವತವಾದದ್ದು. ಅದನ್ನು ಇಷ್ಟಲಿಂಗ ಪೂಜೆ, ಶರಣರ ಸಂಗದಿಂದ ಪಡೆಯಬಹುದು” ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶರಣಬಸವಾಶ್ರಮದಲ್ಲಿ ಶನಿವಾರ ಜರುಗಿದ ಶ್ರಾವಣ ಪ್ರವಚನ ವಿಶೇಷ ಉಪನ್ಯಾಸ ಮಾಲಿಕೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, “ದೇಹ, ಮನಸ್ಸು, ಬುದ್ಧಿ ಈ ಎಲ್ಲಾ ಅಂಶಗಳು ಒಗ್ಗೂಡಿ ಶಿವಯೋಗದಲ್ಲಿ ಲೀನವಾದಾಗಲೇ ನಿಜಸುಖ ಸಿಗುತ್ತದೆ. ಮನಸ್ಸನ್ನು ಬಹಿರ್ಮುಖವಾಗಿಸುವ ಬದಲು ಅಂತರ್ಮುಖವಾಗಿಸಿ ಶಿವನಲ್ಲಿ ತೊಡಗಿಸಿ, ಆನಂದ ಮತ್ತು ಶಾಂತಿಗೆ ಮೂಲವಾಗುವುದೇ ಶಿವಯೋಗ ಸಾಧನೆ” ಎಂದರು.

ಬಸವಕಲ್ಯಾಣದ ಸತ್ಯದೇವಿ ತಾಯಿ ಮಾತನಾಡಿ, “ಮನುಷ್ಯ ಜನ್ಮದ ಗುರಿ ಉದ್ದೇಶ ಅರಿಯುವ ಪ್ರಯತ್ನವೇ ಶ್ರಾವಣ ಪ್ರವಚನ. ಪರಮಾತ್ಮನ ಅಂಶವೇ ಆತ್ಮ. ಶರಣರ ಸತ್ಸಂಗವೇ ಸಂಸ್ಕಾರ. ಶರಣರ ವಿಚಾರಗಳನ್ನು ಕೇಳಿ ಅವರಂತೆ ರೂಪ ತಾಳುವುದೇ ಪರಿವರ್ತನೆ” ಎಂದು ಹೇಳಿದರು.

ತುರುವೆಕೆರೆ ಅಲ್ಲಮಪ್ರಭು ಮಠದ ತಿಪ್ಪೇರುದ್ರ ಶ್ರೀಗಳು ಮಾತನಾಡಿ, “ಶರಣರ ವಿಚಾರಧಾರೆಗಳು ಬದುಕಿನ ನಂದಾದೀಪವಿದ್ದಂತೆ. ಒಳ್ಳೆಯ ಹಾಗೂ ಕೆಟ್ಟ ವಿಚಾರಗಳಿಗೆ ಮನವೇ ಕಾರಣ. ಮನ ಶಿವಮನವಾದರೆ ಮಾತ್ರ ಸೃಷ್ಟಿ ಶಿವಮಯವಾಗುತ್ತದೆ. ಗುರುವಿನ ಮೂಲಕ ಸಂಸ್ಕಾರ ಪಡೆದು ಮುಕ್ತಿ ಪಡೆಯಬೇಕು” ಎಂದು ಹೇಳಿದರು.

ಬಸವ ಮಹಾಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ರಾಚಯ್ಯ ಶಾಸ್ತ್ರಿಗಳು ಪ್ರವಚನ ನೀಡಿದರು. ಮಹಾಂತೇಶ ಹಾಗೂ ನರಸಪ್ಪ ಸಂಗೀತ ಸೇವೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *