ಬಸವನಬಾಗೇವಾಡಿ
“೧೨ ನೇ ಶತಮಾನದ ಬಸವ ಸಂಸ್ಕ್ರತಿ ಅನನ್ಯವಾಗಿದೆ. ಒಂಬೈನೂರು ವರ್ಷಗಳಾದರೂ ಬಸವ ಸಂಸ್ಕ್ರತಿ ನಾಡಿನಲ್ಲಿ ಎಲ್ಲರೂ ಸಾಮರಸ್ಯ, ಸಮಾನತೆಯಿಂದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ” ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಸಿಬಿಎಸ್ಸಿ ಶಾಲಾ ಆವರಣದಲ್ಲಿ ಬಸವ ಸಂಸ್ಕ್ರತಿ ಪ್ರವಚನದ ಮಂಗಲ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬಸವಣ್ಣನವರು ಜಗತ್ತಿಗೆ ಕಾಯಕ, ದಾಸೋಹ, ಸಮಾನತೆ ತತ್ವ ನೀಡುವ ಮೂಲಕ ಎಲ್ಲರೂ ಜಾತ್ಯತೀತರಾಗಿ ಸಾಮರಸ್ಯದಿಂದ ಜೀವನ ಸಾಗಿಸಬೇಕೆಂಬ ಸಂದೇಶ ಸಾರಿದ್ದಾರೆ. ರಾಜ್ಯ ಸರ್ಕಾರ ಬಸವೇಶ್ವರರನ್ನು ರಾಜ್ಯದ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ” ಎಂದರು.
“ನಾಡಿನಲ್ಲಿ ಬಸವ ಸಂಸ್ಕ್ರುತಿಯನ್ನು ಜಾಗೃತಿ ಮೂಡಿಸುವ ಸದುದ್ದೇಶದಿಂದ ಸೆ.೧ ರಿಂದ ಅ.5 ರವರೆಗೆ ನಾಡಿನ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಬಸವ ಸಂಸ್ಕ್ರತಿ ಅಭಿಯಾನ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವದು ಸ್ವಾಗತಾರ್ಹ. ಸೆ.೧ ರಂದು ಬಸವೇಶ್ವರರು ಜನಿಸಿದ ಬಸವನಬಾಗೇವಾಡಿಯಿಂದ ಈ ಅಭಿಯಾನ ಚಾಲನೆಯಾಗಲಿದೆ. ಸೆ.೧ ರಂದು ಬಸವನಬಾಗೇವಾಡಿಯಲ್ಲಿ ನಡೆಯುವ ಬಸವ ಸಂಸ್ಕ್ರತಿ ಅಭಿಯಾನವು ಐತಿಹಾಸಿಕವಾಗಲಿದೆ” ಎಂದರು.
“ಸೆ.೧ ರಂದು ನಡೆಯುವ ಕಾರ್ಯಕ್ರಮಕ್ಕೆ ದಾಸೋಹ, ಪೆಂಡಾಲ್ ವ್ಯವಸ್ಥೆಯ ಸೇವೆ ನಾನು ಮಾಡುತ್ತಿದ್ದು. ಕಾರ್ಯಕ್ರಮಕ್ಕೆ ಬರುವ ನಾಡಿನ ಅನೇಕ ಶ್ರೀಗಳ ವಾಸ್ತವ್ಯ, ಪ್ರಸಾದ ವ್ಯವಸ್ಥೆ ಇಲ್ಲಿನ ಜನರು ಅಚ್ಚುಕಟ್ಟಾಗಿ ಮಾಡಬೇಕಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಜನರಿಗೆ ಗೌರವಾತಿಥ್ಯ ಸರಿಯಾಗಿ ನಡೆಯುವಂತೆ ಎಲ್ಲ ಜನರು ನೋಡಿಕೊಳ್ಳುವ ಜವಾಬ್ದಾರಿಯಿದೆ. ಈ ನಾಡಿನ ಬಸವ ಸಂಸ್ಕ್ರತಿಯನ್ನು ನಾಡಿಗೆ ತೋರಿಸುವ ಅವಕಾಶ ಸಿಕ್ಕಿದೆ. ಈ ಅಭಿಯಾನದ ಯಶಸ್ವಿಗೆ ನಾನು ನಿಮ್ಮೊಂದಿಗೆ ಸದಾ ಇರುವುದಾಗಿ” ಹೇಳಿದರು.

ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, “ಸೆ.೧ ರಂದು ನಡೆಯುವ ಬಸವ ಸಂಸ್ಕ್ರತಿ ಅಭಿಯಾನಕ್ಕಾಗಿ ವಿಶಾಲವಾದ ವೇದಿಕೆ, ಪೆಂಡಾಲ್ ವ್ಯವಸ್ಥೆ, ಕಾರ್ಯಕ್ರಮಕ್ಕೆ ಬರುವ ಎಲ್ಲ ಜನರಿಗೂ ಪ್ರಸಾದ ವ್ಯವಸ್ಥೆಯನ್ನು ಸಚಿವರಿಂದ ನಡೆಯಲಿದೆ. ೧೧೦೦ ಮಹಿಳೆಯರು ವಚನಗ್ರಂಥ ತಲೆ ಮೇಲೆ ಹೊತ್ತು, ೭೭೦ ಜನರು ಕೈಯಲ್ಲಿ ಬಸವ ಧ್ವಜ ಹಿಡಿದು ಬಸವ ಸಂಸ್ಕ್ರತಿ ಅಭಿಯಾನದ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ” ಎಂದರು.
“ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಬಸವೇಶ್ವರ ಸೇವಾ ಸಮಿತಿಯಿಂದ ಟೊಪ್ಪಿಗೆ ವಿತರಿಸಲಾಗುವದು. ಈ ಕಾರ್ಯಕ್ರಮ ಯಶಸ್ವಿ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದನ್ನು ನ ಭೂತೋ ನ ಭವಿಷ್ಯತೋ ಅನ್ನುವ ರೀತಿಯಲ್ಲಿ ಮಾಡೋಣ” ಎಂದರು.
ಪ್ರವಚನಕಾರ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, “ವಿಶ್ವಗುರು ಬಸವೇಶ್ವರರು ಮಾನವನ ಘನತೆ, ಸಮಾಜದಲ್ಲಿ ಸಮಾನತೆ, ಭಾವೈಕ್ಯತೆ ಜಾರಿಗೆ ತರುವ ಮೂಲಕ ಕಲ್ಯಾಣ ಸಮಾಜ ನಿರ್ಮಾಣಕ್ಕೆ ಅನೇಕ ಶರಣ ಬಳಗದೊಂದಿಗೆ ಶ್ರಮಿಸಿದರು. ಸರ್ವರಿಗೂ ಸಮಬಾಳು, ಸಮಪಾಲು ಸಿಗಬೇಕೆಂಬ ಆಶಯ ಬಸವಣ್ಣನವರದು. ಇವರು ನುಡಿದಂತೆ ನಡೆದರು. ಅನೇಕ ಶರಣರು ರಚಿಸಿದ್ದ ವಚನ ಸಾಹಿತ್ಯ ಇಡೀ ಮನುಕುಲಕ್ಕೆ ಉಳಿಯಬೇಕೆಂಬ ಸದುದ್ದೇಶದಿಂದ ಅನೇಕ ಶರಣರು ವಚನ ಸಾಹಿತ್ಯ ಸಂರಕ್ಷಣೆಗಾಗಿ ತಮ್ಮ ಜೀವನ ತ್ಯಾಗ ಮಾಡಿದರು” ಎಂದರು.

ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ ಮಾತನಾಡಿ, “ಕಡುಬಡತನದ ಲಂಬಾಣಿ ಜನಾಂಗಕ್ಕೆ ಸೇರಿದ ನನ್ನನ್ನು ಈ ವರ್ಷದ ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಪಟ್ಟಣದ ಎಲ್ಲ ಹಿರಿಯರು ಆಯ್ಕೆ ಮಾಡಿದ್ದು ನನಗೆ ತುಂಬಾ ಸಂತಸ ತಂದಿದೆ. ಎಲ್ಲರ ಸಹಕಾರದಿಂದ ಈ ವರ್ಷದ ಬಸವೇಶ್ವರ ಜಾತ್ರೆಯು ಚೆನ್ನಾಗಿ ಜರುಗಿತು” ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ಆಪ್ತಸಹಾಯಕ ರಾಜು ಇವಣಗಿ, ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಸಮಿತಿ ಕಾರ್ಯದರ್ಶಿ ಬಸವರಾಜ ಗೊಳಸಂಗಿ, ಸಮಿತಿಯ ಸದಸ್ಯರಾದ ಅನಿಲ ಅಗರವಾಲ, ಮಹಾದೇವಿ ಬಿರಾದಾರ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳಾದ ರಮೇಶ ಮಸಬಿನಾಳ, ಸಿದ್ರಾಮ ಪಾತ್ರೋಟಿ, ಮಹೇಶ ಹಿರೇಕುರಬರ, ಲಾಳೇಸಾ ಕೊರಬು, ನಂದೀಶ ಪಾಟೀಲ, ಮಂಜು ಜಾಲಗೇರಿ ಇತರರು ಇದ್ದರು.
ಶಂಕರಗೌಡ ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು. ಎಂ.ಬಿ.ತೋಟದ ಸ್ವಾಗತಿಸಿದರು. ಎಚ್.ಬಿ. ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಎಂ.ಜಿ. ಆದಿಗೊಂಡ ವಂದಿಸಿದರು. ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು.