ಗಜೇಂದ್ರಗಡ
ಸೆಪ್ಟಂಬರ್ 9ರಂದು ಗದಗ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿಯಾಗಿ ತಾಲ್ಲೂಕ ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ತಾಲ್ಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸಾಂಸ್ಕೃತಿಕ ನಾಯಕ ಬಸವಣ್ಣನವರು’ ವಿಷಯವಾಗಿ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುತ್ತಿದೆ.
ಸೋಮವಾರ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಲ್ಲಿ ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಿರಹಟ್ಟಿಯ ಉಪನ್ಯಾಸಕಿ ಅಂಜನಾದೇವಿ ಮ್ಯಾಗೇರಿ ಅವರು ಮಾತನಾಡಿ, “ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ 12ನೇ ಶತಮಾನದ ಬಸವಾದಿ ಶಿವಶರಣರ ಕೊಡುಗೆ ತುಂಬಾ ಅಪಾರವಾಗಿದೆ. ಪ್ರಮುಖರಾದ ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣನವರ ವಿಚಾರಗಳು ಎಲ್ಲರಿಗೂ, ಎಲ್ಲಕಾಲಕ್ಕೂ ಸಮ್ಮತವಾದವುದಗಳು. ಹೀಗಾಗಿ ನಮ್ಮ ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡುವ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟಿರುವುದು ತುಂಬಾ ಹೆಮ್ಮೆಯ ಸಂಗತಿ” ಎಂದರು.
“ಮಹಿಳೆಯರನ್ನು ಅಸ್ಪೃಶ್ಯರಂತೆ ಕಾಣುವ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದರು. ಹೀಗಾಗಿ ಸುಮಾರು 36 ಶರಣೆಯರು ತಮ್ಮ ಅನುಭಾವದ ನುಡಿಗಳನ್ನು ವಚನ ರೂಪದಲ್ಲಿ ಜನರಲ್ಲಿ ಅರಿವನ್ನು ಮೂಡಿಸಿದರು” ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ರಮೇಶ ಮರಾಠಿ ಅವರು ಮಾತನಾಡಿ, “ವಿಶ್ವಗುರು ಬಸವಣ್ಣನವರ ವಿಚಾರಗಳಿಗೆ ಮಾರುಹೋಗಿ ದೇಶದ ಮೂಲೆ ಮೂಲೆಗಳಿಂದ ಏಳುನೂರಾ ಎಪ್ಪತ್ತೇಳು ಅಮರಗಣಂಗಳು ಅನುಭವ ಮಂಟಪದಲ್ಲಿ ಪಾಲ್ಗೊಂಡರು. ಅನುಭವ ಮಂಟಪ ಸ್ಥಾಪನೆ ಮಾಡುವ ಮೂಲಕ ಇಡೀ ವಿಶ್ವಕ್ಕೆ ಪಾರ್ಲಿಮೆಂಟಿನ ಕಲ್ಪನೆ ಮೂಡಿಸಿದ ಕೀರ್ತಿ 12ನೇ ಶತಮಾನದ ಶಿವಶರಣರಿಗೆ ಸಲ್ಲುತ್ತದೆ” ಎಂದರು.
ಕಾರ್ಯ ಕ್ರಮದಲ್ಲಿ ಗಜೇಂದ್ರಗಡ ತಾಲೂಕಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಗುರುಲಿಂಗಯ್ಯ ಓದಸುಮಠ, ಕಾರ್ಯದರ್ಶಿ ಬಸವರಾಜ ಅಂಗಡಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಕೊಟಗಿ, ಕಾರ್ಯದರ್ಶಿ ಕಳಕಯ್ಯ ಸಾಲಿಮಠ, ಎಮ್. ಎಸ್. ಹಡಪದ, ಶರಣು ಪೂಜಾರ, ಎಂ.ಬಿ. ಸೋಂಪೂರ, ಶಾರದಾ ಸೋಂಪೂರ, ಸುರೇಶ ಪತ್ತಾರ, ಶಂಕರ ಕಲ್ಲಿಗನೂರ ಶಿವು ಚವ್ಹಾಣ, ಕಾಲೇಜಿನ ಉಪನ್ಯಾಸಕರಾದ ಬಸಪ್ಪ ಜಿ, ರಮೇಶ ರಾಯಕರ ಮತ್ತಿತರರು ಇದ್ದರು.
ಆರಂಭದಲ್ಲಿ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ಮಾಡಿದರು. ಮಹಾಂತೇಶ ಕಡಗದ ಅವರು ಶರಣು ಸಮರ್ಪಣೆ ಸಲ್ಲಿಸಿದರು.