ತೆಲಂಗಾಣ (ಜಹಿರಾಬಾದ)
ನಗರದ ಬಸವ ಮಂಟಪದಲ್ಲಿ ಒಂದು ತಿಂಗಳ ಪರ್ಯಂತ ನಡೆದ ಬಸವ ತತ್ವ ದರ್ಶನ ಪ್ರವಚನದ ಮುಕ್ತಾಯ ಸಮಾರಂಭ ಜರುಗಿತು.
ತಾಲೂಕಾ ರಾ. ಬ. ದಳದ ಅಧ್ಯಕ್ಷರು ಯು. ಅಶೋಕಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, “ಶ್ರಾವಣ ಮಾಸದ ಪ್ರಯುಕ್ತ ಆಧ್ಯಾತ್ಮ ಪ್ರವಚನ ತುಂಬಾ ಚೆನ್ನಾಗಿ ನಡೆದಿದೆ. ಒಂದು ತಿಂಗಳ ಪರ್ಯಂತ ಬಸವಗೀತಾ ತಾಯಿಯವರು ಬಸವ ಧರ್ಮದ ಬಗ್ಗೆ ಅತ್ಯುತ್ತಮವಾದ ತಿಳುವಳಿಕೆಯನ್ನು ನೀಡಿದ್ದಾರೆ. ಮಾನವ ಜೀವನದ ಗುರಿಯನ್ನು ಸ್ಪಷ್ಟಗೊಳಿಸಿದ್ದಾರೆ” ಎಂದರು.

ಪ್ರವಚನಕಾರರಾದ ಬಸವಗೀತಾ ತಾಯಿಯವರು ಮಾತನಾಡಿ, “ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿಯವರು ನನ್ನ ಗುರುಗಳು ಅವರು ಹೇಳ್ತಾ ಇದ್ದರು, ನಿನ್ನ ಪ್ರವಚನ ಮುಕ್ತಾಯಕ್ಕೆ ನಾನು ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಅದು ಈಡೇರಲಿಲ್ಲ, ಬದಲಿಗೆ ಪೂಜ್ಯ ಗಂಗಾ ಮಾತಾಜಿಯವರು ಈ ಸಮಾರಂಭಕ್ಕೆ ಆಗಮಿಸಿದ್ದು ನನಗೆ ತುಂಬಾ ಸಂತೋಷವಾಯಿತು” ಎಂದು ಭಾವುಕರಾದರು.
“ಬಸವಣ್ಣನವರ ನೈಜ ವ್ಯಕ್ತಿತ್ವವನ್ನು ತೋರಿಸಿಕೊಟ್ಟವರೇ ಪೂಜ್ಯ ಲಿಂಗಾನಂದ ಅಪ್ಪಾಜಿಯವರು. ಬಸವ ತತ್ವ ಎಂದರೆ ಸಮುದ್ರ ಇದ್ದಂತೆ, ಅದರ ಬಗ್ಗೆ ಮಾತನಾಡಲು ಕೇವಲ ತಿಂಗಳು ಅಲ್ಲಾ ವರ್ಷಗಳಾದರೂ ಸಾಲದು. ಸಾಗರದಾಚೆಗೂ ಜನ ಅವರನ್ನು ಒಪ್ಪಿ-ಅಪ್ಪಿ ಓಲಾಡುತ್ತಿದ್ದಾರೆ. ವಿದ್ಯೆಯೊಂದೇ ದೇವನೊಲಿಸುವ ಸಾಧನವಲ್ಲ, ವಿದ್ಯೆಗಿಂತಲೂ ಮಿಗಿಲಾಗಿ ಉದ್ಯೋಗವೂ ದೇವನೊಲಿಸುವ ಸಾಧನ ಎಂದು ಹೇಳಿ ಕಾಯಕಕ್ಕೆ ಪಟ್ಟ ಕಟ್ಟಿದವರು ಬಸವಣ್ಣನವರು. ತತ್ವದ ಆಚರಣೆಗಳನ್ನು ಜಾರಿಗೆ ತರಬೇಕು, ಮಕ್ಕಳಿಗೆ ಸಂಸ್ಕಾರ ಕೊಡಬೇಕು” ಎಂದರು.
ಬಸವೇಶ್ವರಿ ಮಾತಾಜಿ ಮಾತನಾಡಿ, “ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ ಎಂಬ ಕುವೆಂಪುರವರ ಮಾತಿನಂತೆ ವಿಶ್ವಗುರು ಬಸವಣ್ಣನವರು ಎಲ್ಲರನ್ನೂ ಉದ್ಧರಿಸಲಿಕ್ಕೆ ಬಂದರು. ಲಿಂಗ, ಜಾತಿ, ವರ್ಣ, ಶ್ರೇಣೀಕೃತ ಪದ್ಧತಿಗಳನ್ನು ತೊಡೆದು ಹಾಕಿದರು. ನಮ್ಮ ದೇವರನ್ನು ನಾವೇ ಪೂಜೆ ಮಾಡುವ ಅವಕಾಶವನ್ನು ಒದಗಿಸಿಕೊಟ್ಟ ಮಹಾಪುರುಷ ಅವರು. ಪೂಜ್ಯ ಲಿಂಗಾನಂದ ಸ್ವಾಮೀಜಿಗಳು ಹೇಳುತ್ತಿದ್ದರು. ಬಸವಣ್ಣನವರಿಗಿರುವ ಎಲ್ಲಾ ಗುಣಗಳನ್ನು ಬೇರೆ ಯಾವುದಾದರೂ ಧರ್ಮಗುರುವಿನಲ್ಲಿ ತೋರಿಸಿಬಿಟ್ಟರೆ, ನಾನೂ ಆ ಧರ್ಮಕ್ಕೆ ಮತಾಂತರವಾಗುತ್ತೇನೆ ಎಂದು. ಆದರೆ ಅವರು ಬದುಕಿರುವವರೆಗೂ ಯಾರೂ ಅದನ್ನು ಸಾಬೀತು ಮಾಡಲಿಲ್ಲ. ನಿತ್ಯ ಲಿಂಗಾರ್ಚನೆಯಿಂದ ನಮ್ಮ ಬದುಕಿನ ಬೇಕು ಬೇಡಗಳನ್ನು ಈಡೇರಿಸಿಕೊಳ್ಳುವ ಶಕ್ತಿ ದೊರೆಯುತ್ತದೆ” ಎಂದರು.
ನಾಗನೂರು ಗುರುಬಸವ ಮಠದ ಬಸವಪ್ರಕಾಶ ಸ್ವಾಮೀಜಿ ಮಾತನಾಡಿ, “ನಿರಾಕಾರ ದೇವನನ್ನು ಕಂಡುಕೊಳ್ಳಬೇಕೆಂದರೆ, ಲಿಂಗಾನುಸಂಧಾನ ಮಾಡಬೇಕು. ಒಬ್ಬರ ಮನವ ನೋಯಿಸಿ, ಒಬ್ಬರ ಮನೆಯ ಘಾತವ ಮಾಡಿ ಬದುಕುವದಕ್ಕಿಂತ ಯಾರಿಗೂ ನೋವಾಗದಂತೆ ಬದುಕುವುದನ್ನು ಹೇಳಿ ಕೊಡುವುದೇ ಬಸವಧರ್ಮ. ಇದರ ಅನುಕರಣೆ ತುಂಬಾ ಮುಖ್ಯವಾದದ್ದು” ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಗಂಗಾ ಮಾತಾಜಿ ಮಾತನಾಡಿ, “ಲಿಂಗಾಯತ ಸಮಾಜದಲ್ಲಿ ಬಸವೇಶ್ವರಿ ಮಾತಾಜಿ, ಇಲ್ಲಿ ಬಸವಗೀತಾ ಮಾತಾಜಿ ಪ್ರವಚನ ಮಾಡಿದ್ದಾರೆ. ಒಂದೇ ಊರಿನಲ್ಲಿ ಇಬ್ಬರೂ ಬಸವ ಧರ್ಮ ಪೀಠದಲ್ಲಿ ಬೆಳೆದ ಮಕ್ಕಳು ನೋಡಿ ತುಂಬಾ ಖುಷಿಯಾಯಿತು. ಅಪ್ಪಾಜಿ ನೆನಪನ್ನು ತೆಗೆದು ಸಭೆಯನ್ನು ಭಾವುಕಗೊಳಿಸಿದರು” ಎಂದರು.
” ಕರ್ನಾಟಕದಲ್ಲಿ ಸೆ. 1ರಿಂದ ಬಸವ ಸಂಸ್ಕೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನೀವೆಲ್ಲರೂ ನಿಮ್ಮ ಹತ್ತಿರದ ಜಿಲ್ಲೆಗಳಾದ ಬೀದರ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಬರುವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸಬೇಕು. ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಮಠಾಧೀಶರೂ ಒಟ್ಟಿಗೆ ಸೇರಿ ಮಾಡುತ್ತಿರುವ ಮೊದಲ ಅಭಿಯಾನವಾಗಿದೆ” ಎಂದರು.
“ಲಿಂಗಾನಂದ ಅಪ್ಪಾಜಿಯವರು ಹೇಳುತ್ತಿದ್ದರು. ನೀವೆಲ್ಲೇ ಹೋಗಿ ಸ್ವತಂತ್ರವಾಗಿ ಬದುಕಿ, ನೀವು ನಮ್ಮನ್ನು ಮರೆತರೂ ಚಿಂತೆಯಿಲ್ಲ ಆದರೆ ಬಸವಣ್ಣನವರನ್ನು ಮರೆಯದಿರಿ ಎಂದು ಹೇಳುತ್ತಿದ್ದರು. ಅಂತೆಯೇ ಈ ದಿನಗಳಲ್ಲಿ ಬಸವಣ್ಣನವರ ಬಗ್ಗೆ ಇದ್ದ ಸತ್ಯವನ್ನು ಇದ್ದ ಹಾಗೆ ಹೇಳುವ ಗಟ್ಟಿತನ ಕೇವಲ ಬಸವ ಧರ್ಮ ಪೀಠದವರಿಗೆ ಮಾತ್ರವೇ ಇದೆ” ಎಂದರು.

ರಾ. ಬ. ದಳದ ರಾಜ್ಯಾಧ್ಯಕ್ಷರಾದ ಶಂಕರಪ್ಪ ಪಾಟೀಲ ಸ್ವಾಗತಿಸಿದರು. ಅಣುವೀರಪ್ಪ ನಿರೂಪಿಸಿದರು. ಸಭೆಯಲ್ಲಿ ತಿಂಗಳು ಪರ್ಯಂತ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ವಿಶೇಷವಾಗಿ ಮಾತಾಜಿತ್ರಯರ ಪಾದಪೂಜೆಯನ್ನು ಒಟ್ಟಿಗೇ ನೆರವೇರಿಸಲಾಯಿತು. ಬಹಳ ಸಂಭ್ರಮದಿಂದ ಎಲ್ಲ ಶರಣ-ಶರಣೆಯರು ಸೇರಿ ಪ್ರವಚನ ಮಂಗಲವನ್ನು ನೆರವೇರಿಸಿದರು.