ಯಲಬುರ್ಗಾ
ಶರಣಗ್ರಾಮ ಗುಳೆ ಮತ್ತು ವನಜಭಾವಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ ‘ಮನೆಯಿಂದ ಮನೆಗೆ ಮನದಿಂದ ಮನಕ್ಕೆ ವಚನ ಜ್ಯೋತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ರವಿವಾರ ನಡೆಯಿತು.
ಸೆಪ್ಟೆಂಬರ್ 29 ರಂದು ವಿಶ್ವಗುರು ಬಸವ ಮಂಟಪದಿಂದ ಪ್ರಾರಂಭಗೊಂಡು ಅಗಸ್ಟ್ 23 ರವರೆಗೆ ಸಾಗಿಬಂದ ವಚನ ಜ್ಯೋತಿ ಕಾರ್ಯಕ್ರಮ 30 ನೇ ದಿನ ಶರಣ ದಂಪತಿ ಬಸಮ್ಮ ಬಸವರಾಜ ಹೂಗಾರ ಇವರ ಮನೆಯಿಂದ ವಿಶ್ವಗುರು ಬಸವ ಮಂಟಪಕ್ಕೆ ಕಳಸ ಕನ್ನಡಿ, ತಾಳ ಮೇಳದೊಂದಿಗೆ ವಿಶ್ವಗುರು ಬಸವ ಮಂಟಪಕ್ಕೆ ತೆರಳಿತು.
ಪ್ರಥಮಲ್ಲಿ ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಪೂಜೆ, ನಂತರ ವಚನ ಪಠಣದೊಂದಿಗೆ ಅನುಭಾವ ಕಾರ್ಯ ನಡೆಯಿತು.

ಪೂಜ್ಯ ಶ್ರೀ ಶರಣಬಸವ ಸ್ವಾಮೀಜಿಯವರು ಅನುಭಾವ ನೀಡುತ್ತ, “ಈ ಜೀವನದ ಬದುಕು ಭವಬಂಧನಕ್ಕೆ ಸಿಲುಕಿಸದೆ, ಸಂಸಾರದಲ್ಲೆ ಸದ್ಗತಿಯನ್ನು ಕಾಣಬೇಕು. ಸಂಸಾರ ಎನ್ನುವಂತದ್ದು ಗಾಳಿಯಲ್ಲಿ ಹಚ್ಚಿಟ್ಟ ದೀಪದಂತೆ, ಅದು ಯಾವಾಗ ಹಾರಿ ಹೋಗುತ್ತದೊ ಏನೋ ಗೊತ್ತಿಲ್ಲ. ಆ ಗಾಳಿಯ ದೀಪದಂತೆ ನಮ್ಮ ಕಾಯದಲ್ಲಿ ಜ್ಯೋತಿಯಂತಿರುವ ಆತ್ಮವು ಕೂಡ ಯಾವ ಸಮಯದಲ್ಲಾದರು ಹಾರಿ ಹೋಗುತ್ತದೆ. ಸಿರಿತನ ಇರಲಿ, ಬಡತನ ಇರಲಿ ಈ ಎರಡನ್ನು ಶಾಶ್ವತ ಎಂದು ಭಾವಿಸದೆ, ಬಸವ ಭಾವನೆಗಳನ್ನ ಮನದಲ್ಲಿ ಅರಿತುಕೊಂಡು, ಬಸವ (ಶಿವ)ನಾಮ ಸ್ಮರಣೆಯ ಜೊತೆಗೆ ನಿರಂತರ ಕಾಯಕ ಮಾಡುತ್ತ ಸಾಗಿದಾಗ ಮಾತ್ರ ಸದ್ಗತಿ ಕಾಣಲು ಸಾದ್ಯ” ಎಂದರು.
“ಶ್ರಾವಣ ಮಾಸ ಪಾವನ ಮಾಸವಾಗಿದ್ದು, ವಚನ ಶ್ರವಣ ಮಾಡುವುದು ಮತ್ತು ವಚನಗಳಂತೆ ನಾವು ಸಂಸ್ಕೃತಿ ಸಂಸ್ಕಾರ ಕಲಿಯುವದೇ ಈ ಕಾರ್ಯಕ್ರಮದ ಉದ್ದೇಶ ಆಗಿದೆ. ಪ್ರತಿದಿನ ಮನೆಯಿಂದ ಮನೆಗೆ ತೆರಳಿ ಬಸವಾದಿ ಶರಣರ ವಿಚಾರವನ್ನು ಮನವರಿಕೆ ಮಾಡಿ, ಅವರು ಬಾಳಿ ಬದುಕಿದಂತೆ ಬದುಕು ತಟ್ಟಿಕೊಳ್ಳಲು ಕಲಿಸುವ ಪ್ರಯತ್ನ ಮಾಡಿದ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದೆ” ಎಂದರು.
“ಬಸವ ಸಂಸ್ಕೃತಿ ಅತ್ಯಂತ ಅಮೂಲ್ಯವಾದದ್ದು. ನಮ್ಮ ಮನದ ಮೈಲಿಗೆ ಕಳೆದುಕೊಳ್ಳಬೇಕಾದರೆ ಗುರು ಬಸವಣ್ಣನವರು ಕೊಟ್ಟ ವಚನ ಸಾಹಿತ್ಯ ಮನವರಿಕೆ ಮಾಡಿಕೊಂಡು ಬದುಕಿದಾಗ ಮಾತ್ರ ಮನದ ಮೈಲಿಗೆ ಕಳೆದುಕೊಳ್ಳಲು ಸಾದ್ಯ. ದುಶ್ಚಟಗಳನ್ನ ದೂರ ಮಾಡಿಕೊಳ್ಳಲು ವಚನ ಸಾಹಿತ್ಯವೆ ಮನೆ ಮದ್ದಾಗಿದೆ. ಒಟ್ಟಾರೆಯಾಗಿ ನಾವು ದಿನನಿತ್ಯ ಸತ್ಯ ಶುದ್ಧ ಕಾಯಕ ಮಾಡುತ್ತ, ಮೌಢ್ಯಾಚರಣೆಗೆ ಒಳಗಾಗದೆ , ಮಹಾತ್ಮರ ವಿಚಾರವನ್ನ ಮೈಗೂಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ” ಎಂದರು.

ಶರಣಪ್ಪ ಹೊಸಳ್ಳಿ ಇವರು ಪ್ರಾಸ್ತಾವಿಕ ಮಾತನಾಡಿದರು. ಬಸವನಗೌಡ ಪೋಲಿಸ್ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಭೀಮನಗೌಡ ಜಾಲಿಹಾಳ ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇವಪ್ಪ ಕೋಳೂರು ಗೌರವಾಧ್ಯಕ್ಷರು ವನಜಭಾವಿ, ಗಿರಿಮಲ್ಲಪ್ಪ ಪರಂಗಿ ಅಧ್ಯಕ್ಷರು, ಹಲವಾರು ಶರಣ-ಶರಣೆಯರು ಪಾಲ್ಗೊಂಡಿದ್ದರು.
ಶರಣ ದಂಪತಿಗಳಾದ ಬಸಮ್ಮ ಗಂಡ ಬಸವರಾಜ ಹೂಗಾರ ದಾಸೋಹ ಸೇವೆ ಗೈದರು. ಬಸವರಾಜ ಹೂಗಾರ ನಿರೂಪಿಸಿದರು.