ಬೀದರ
“ಕ್ಷಣಿಕ ಜೀವನದಲ್ಲಿ ಶಾಶ್ವತ ಸುಖ ಪಡೆಯಬೇಕಾದರೆ ಶರಣರ ವಚನಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಲಿಂಗಾಯತ ಮಹಾಮಠ ಗೊರಟ ಗ್ರಾಮದ ಪೂಜ್ಯ ಪ್ರಭುದೇವ ಸ್ವಾಮೀಜಿ ನುಡಿದರು.
ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಪರಿಯಂತರ ನೀಲಮ್ಮನ ಬಳಗದ ವತಿಯಿಂದ ನಡೆದ ಶರಣರ ಜೀವನ ದರ್ಶನ ಪ್ರವಚನದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
“ದೇವರು ಕೊಟ್ಟಿರುವ ಅಮೂಲ್ಯ ಸಂಪತ್ತು ಎಂದರೆ ನಮ್ಮ ಶರೀರ. ಅದನ್ನು ಹಾಳು ಮಾಡಿಕೊಳ್ಳದೆ ಉಳಿಸಿಕೊಳ್ಳಬೇಕು. ಕೂಡಲಸಂಗಮದೇವರ ಒಲಿಸಬಂದ ಪ್ರಸಾದ ಕಾಯವ ಕೆಡಿಸಲಾಗದು ಎನ್ನುತ್ತಾರೆ ಗುರು ಬಸವಣ್ಣನವರು”.
“ಸತ್ಯದ ಅರಿವಾಗಬೇಕಾದರೆ ಶರಣರ ಸಂಗದಲ್ಲಿರಬೇಕು. ಶರಣರ ಬರುವಿಕೆಗಾಗಿ ಬಸವಣ್ಣನವರು ಗಿಳಿಯ ಹಂಜರವಿಟ್ಟು, ದೀಪಕ್ಕೆ ಎಣ್ಣೆಯ ಸುರಿದು ಕಾಯುತ್ತಿದ್ದರು.ಆದರೆ ಇಂದು ಭೌತಿಕ ಸಂಪತ್ತು ಹೆಚ್ಚಾದಂತೆಲ್ಲ ಪ್ರೇಮದ ಕೊರತೆ ಎದ್ದು ಕಾಣುತ್ತಿದೆ. ಕುಟುಂಬದಲ್ಲಿ ಕಲಹ, ವ್ಯಕ್ತಿ- ವ್ಯಕ್ತಿಗಳ ಮಧ್ಯೆ ದ್ವೇಷ, ಅಸೂಯೆ, ಮನಸ್ತಾಪ ಎದ್ದು ತೋರುತ್ತಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶರಣ ಚನ್ನಬಸಪ್ಪ ಪತಂಗೆಯವರು, “ಇಂದಿನ ಯುವ ಪೀಳಿಗೆಯವರು ಸಂಸ್ಕಾರವಿಲ್ಲದೆ ದುರ್ವರ್ತನೆಯಿಂದ ವರ್ತಿಸುತ್ತಿದ್ದಾರೆ. ಬಸವಾದಿ ಶರಣರ ವಚನಗಳು ನಮಗೆ ನಡೆ- ನುಡಿಯನ್ನು ಕಲಿಸುತ್ತವೆ. ವಚನ ಸಾಹಿತ್ಯದ ಎಳೆವಿಡಿದು ನೀಲಮ್ಮನ ಬಳಗದ ಶರಣೆಯರು ಒಂದು ತಿಂಗಳ ಪರಿಯಂತರ ಚಿಂತನೆ ಗೈದಿರುವುದು ಒಂದು ಇತಿಹಾಸವೇ ಸರಿ, ಇಂತಹ ಆದರ್ಶಮಯ ಕಾರ್ಯ ಮಾಡಲು ಪ್ರೇರಣೆ ನೀಡಿರುವ ಪೂಜ್ಯ ಪ್ರಭುದೇವ ಸ್ವಾಮೀಜಿಯವರಿಗೆ ನಾವೆಲ್ಲರೂ ಚಿರಋಣಿ” ಎಂದು ತಿಳಿಸಿದರು.
ಮೀರಾ ಮಾಲಿ ಪಾಟೀಲ ಮಾತನಾಡಿ, ಪೂಜ್ಯರು ಮಾತೃ ಹೃದಯದವರು. ಮಹಿಳೆ, ಮಕ್ಕಳು, ಮುದುಕರು, ಎನ್ನದೆ ಎಲ್ಲರಿಗೂ ವೇದಿಕೆ ಕಲ್ಪಿಸಿಕೊಟ್ಟು ಮಾತನಾಡಲು ಪ್ರೇರಣೆ ನೀಡಿರುವುದು ನಮ್ಮೆಲ್ಲರ ಸೌಭಾಗ್ಯ. ಇಂತಹ ಗುರುಗಳನ್ನೇ ಪಡೆದಿರುವ ನಾವೆಲ್ಲ ಧನ್ಯರು ಎಂದು ತಿಳಿಸಿದರು.
ಕವಿತಾ ರಾಜೊಳೆ, ವಿಮಲಾಬಾಯಿ ಪಾಟೀಲ, ಸಂಗಮ ಬಿರಾದರ, ಮಾತನಾಡಿದರು. ಚಂದ್ರಕಾಂತ ಕಣಜೆ, ಮಂದಾಕಿನಿ ಕಾದೆಪೊರೆ, ಶ್ರೀಮಂತಪ್ಪ ರಾಜೇಶ್ವರೆ ವಚನ ಗಾಯನ ಮಾಡಿದರು. ಗೋದಾವರಿ ರಾಜೊಳೆ ನಿರೂಪಣೆ ಮಾಡಿದರು. ಪ್ರಜ್ವಲ ರಾಜೊಳೆ ಸ್ವರಚಿತ ಕವನ ಹಾಡಿದರು.
ಇದೇ ಸಂದರ್ಭದಲ್ಲಿ ಒಂದು ತಿಂಗಳ ಪರಿಯಂತರ ಚಿಂತನೆಗೈದ ನೀಲಮ್ಮನ ಬಳಗದ ಶರಣೆಯರಿಗೆ ಅಭಿನಂದಿಸಿ ಆಶೀರ್ವದಿಸಲಾಯಿತು.