ಶಹಾಪುರ
ಜಾತಿ ಧರ್ಮ ದೇವರುಗಳ ಬಗೆಗೆ ಖಚಿತವಾದ ಅರಿವನ್ನು ತಂದುಕೊಳ್ಳದೆ ತೀರಾ ಕೊಳಕಾದ ವ್ಯವಸ್ಥೆಯಲ್ಲಿ ಉಸಿರಾಡುತ್ತಿದ್ದೇವೆ. ಸತ್ಯ ನ್ಯಾಯ ನೀತಿ ಧರ್ಮ ಅಂತ ಮಾತಾಡಿದರೆ ಐ.ಪಿ.ಸಿ. ಸೆಕ್ಷನ್ ಪ್ರಕಾರ ಬಂಧಿಸುವ ದುರಿತ ಕಾಲದಲ್ಲಿ ನಾವಿದ್ದೇವೆ. ಆದರೆ ಬಸವಣ್ಣನವರು ಒಂಬೈನೂರು ವರ್ಷಗಳ ಹಿಂದೆ ಇದಕ್ಕಿಂತಲೂ ತೀರಾ ಕೆಳಮಟ್ಟಕ್ಕಿದ್ದ ಸಾಮಾಜಿಕ ತಲ್ಲಣದ ಸ್ಥಿತಿಯಲ್ಲಿ ಜಾತಿ ಮತ ಭೇದವನ್ನು ಧಿಕ್ಕರಿಸಿ ಆರು ಮುನಿದು ನಮ್ಮನೇನ ಮಾಡುವರು ? ಎಂದು ಜಡ ವ್ಯವಸ್ಥೆಯನ್ನು ಪ್ರಶ್ನಿಸಿ ಶೋಷಿತ ಸಮುದಾಯದಲ್ಲಿ ಪ್ರಜ್ಞೆಯನ್ನುಂಟು ಮಾಡಿದರು ಎಂದು ಏಕಂದಡಿ ಮಠದ ಪೂಜ್ಯ ಡಾ. ಅಜೇಂದ್ರಸ್ವಾಮೀಜಿ ನುಡಿದರು.
ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಏಜುಕೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ತಿಂಗಳ ಬಸವ ಬೆಳಕು -೨೨೬ ಸಮಾರಂಭದ ಸಭೆಯಲ್ಲಿ ಬಸವಣ್ಣನಿಂದ ಬದುಕಿತ್ತಿ ಲೋಕವೆಲ್ಲ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಮಹಾತ್ಮ ಬಸವಣ್ಣನವರು ತಂತ್ರಜ್ಞಾನ, ಸಮೂಹ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ತಮ್ಮ ನಡೆ ನುಡಿ ಸಿದ್ಧಾಂತದ ಮೂಲಕ ಇಡೀ ಭಾರತದ ಮೂಲೆ ಮೂಲೆಗೂ ಪರಿಚಯಗೊಂಡರು. ಬಸವಣ್ಣನವರು ಕಟ್ಟಿದ ಅನುಭವ ಮಂಟಪದ ಹಿರಿಮೆ ಗರಿಮೆಯನ್ನು ಹೆಚ್ಚಿಸಲು ಶೋಷಿತ ಸಮುದಾಯ ನೀರಿನಂತೆ ಕಲ್ಯಾಣಕ್ಕೆ ಹರಿದು ಬಂದಿತು. ವಚನ ಜ್ಞಾನದ ಬೆಳಕು ಪಸರಿಸುತ್ತಿದ್ದಂತೆ ಪಟ್ಟಭದ್ರರ ಕೊಳೆಯೆಲ್ಲ ಸ್ಪಷ್ಟವಾಗಿ ಗೋಚಗೊಂಡಿತು. ಶರಣರೆಲ್ಲ ಸೇರಿ ಬೆಂಕಿ ಉಂಡೆಯಂತೆ ಮಡಿವಂತಿಕೆಯ, ಮೌಡ್ಯಗಳ ವಿರುದ್ಧ ಸ್ಪೋಟಕ ಶಕ್ತಿಯಾಗಿ ಹೊರಹೊಮ್ಮಿದರು ಎಂದವರು ವಿವರಿಸಿದರು.
ಪರಿಶುಭ್ರ ನುಡಿಯ, ನೇರ ನಡೆಯ, ಸರಳ ಸ್ವಭಾವದ ಸದ್ಭಾವಿ ಬಸವಣ್ಣನವರು ಅಧಿಕಾರ ಹೊಂದಿದ್ದರೂ ಅದ್ಯಾವುದಕ್ಕೆ ಬೆಲೆ ಕೊಡದೆ ನೊಂದವರ ನೋವಿಗೆ ಮಿಡಿವ ಸಹೃದಯಿಗಳಾಗಿದ್ದರು. ಭಾರತದ ಸಮಾಜೋಧಾರ್ಮಿಕ ನಭೋ ಮಂಡಲದಲ್ಲಿ ಬಸವಣ್ಣ ಇಂದಿಗೂ ನಕ್ಷತ್ರವಾಗಿ ಮಿನುಗುತ್ತಿದ್ದಾರೆ. ಹನ್ನೆರಡನೆಯ ಶತಮಾನದಿಂದ ಇಲ್ಲಿಯವರೆಗೆ ವಚನಗಳ ಕುರಿತು ಸಾಕಷ್ಟು ಹೇಳಿದರೂ ಇನ್ನೂ ಹೇಳುವುದು ಮುಗಿದಿಲ್ಲವೆಂದರೆ ಆ ವಚನಗಳ ವಿಚಾರಗಳಲ್ಲಿ ಜನ ಬದುಕುವ ಶಕ್ತಿ ಇದೆ. ಅಂಧಕಾರ ಮೌಡ್ಯಗಳು ಸಮಾಜವನ್ನು ಬೆಳೆಸುವುದಿಲ್ಲ. ಬಸವಣ್ಣನವರ ವಿಚಾರಗಳನ್ನು ಎತ್ತಿಕೊಂಡು ಮುನ್ನಡೆದರೆ ಖಂಡಿತವಾಗಿಯೂ ಲೋಕ ಬದುಕುತ್ತದೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಲಿಂಗಾಯತ ವಿರಕ್ತ ಪರಂಪರೆಯ ಮಠಗಳು ಬಸವಣ್ಣನವರ ಅರಿವು ಮೈಗೂಡಿಸಿಕೊಂಡಿದ್ದರಿಂದ ಅನ್ನ ಅರಿವೆ ಹಾಗೂ ವಸತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಿವೆ. ಕರ್ನಾಟಕದ ಶೈಕ್ಷಣಿಕ ಕ್ರಾಂತಿಗೆ ಮಠಗಳು ಬಹುದೊಡ್ಡ ಕೊಡುಗೆ ನೀಡಿವೆ. ಕಲಬುರ್ಗಿಯ ಶರಣ ಬಸವೇಶ್ವರರು ಸಹ ಶರಣರ ದಾಸೋಹ ತತ್ವವನ್ನು ಇಂಬಿಟ್ಟುಕೊಂಡು ಮುನ್ನಡೆದವರು. ಶರಣರ ಬಗೆಗೆ ಅಪಾರವಾದ ಪ್ರೀತಿ ಇದ್ದುದರಿಂದಲೆ ದೆಹಲಿಯ ಪಾರ್ಲಿಮೆಂಟ್ ಮುಂದುಗಡೆ ಬಸವಣ್ಣನವರ ಪ್ರತಿಮೆಯನ್ನು ಯಾವ ಸದ್ದಿಲ್ಲದೆ ಸ್ಥಾಪಿಸಿದರು. ಶರಣ ಪರಂಪರೆಗೆ ಅನುಗುಣವಾಗಿ ಪೂಜ್ಯ ಡಾ. ಶರಣಬಸ್ಸಪ್ಪ ಅಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡಿ, ಜಾಗೃತ ಸಮಾಜದ ಸೃಷ್ಟಿಗೆ ಕಾರಣವಾಗಿದ್ದಾರೆ ಎಂದು ಲಿಂಗೈಕ್ಯ ಅಪ್ಪ ಅವರ ಜೀವಮಾನದ ಸಾಧನೆಗಳ
ಕುರಿತು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯೂಸೂಫ್ ಸಿದ್ಧಿಕಿ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಸಂತೋಷ ಸತ್ಯಂಪೇಟೆಯವರನ್ನು ಸನ್ಮಾನಿಸಲಾಯಿತು. ಬಸವರಾಜ ಅರುಣಿ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ಷಣ್ಮುಖಪ್ಪ ಜೈನ ಅಣಬಿ ವಂದನಾರ್ಪಣೆ
ಮಾಡಿದರು.
ಸಭೆಯಲ್ಲಿ ತಿಪ್ಪಣ್ಣ ಜಮಾದಾರ, ಶಿವಲೀಲಾ ವಡಿಗೇರಿ, ಶರಣಪ್ಪ ಯಡ್ರಾಮಿ, ಶಿವಯೋಗಪ್ಪ ಮುಡಬೂಳ, ಅಡಿವೆಪ್ಪ ಜಾಕಾ, ವಿರೂಪಾಕ್ಷಿ ಸಿಂಪಿ, ದೇವಿಂದ್ರಪ್ಪ ಬಡಿಗೇರ, ಸಿದ್ಧರಾಮ ಹೊನ್ಕಲ್ಲ, ನಾಗರತ್ನ ಯಕ್ಷಿಂತಿ, ರಕ್ಷಿತಾ ಅರವಿಂದ ರಡ್ಡೆ, ಶರಣಪ್ಪ ಕೆ.ಇ.ಬಿ., ರಾಜಕುಮಾರ ಜಾಲವಾದಿ, ಚೇತನ ಪಾಟೀಲ, ಭೀಮಣ್ಣ ಪಾಡಮುಖಿ, ಶಿವಕುಮಾರ ಆವಂಟಿ, ಶರಾವತಿ ಸತ್ಯಂಪೇಟೆ, ಚೆನ್ನಪ್ಪ ಸಂಗಮ್ಮ ಹರನೂರ ಮೊದಲಾದವರು ಹಾಜರಿದ್ದರು.