ತಿಂಗಳ ಕಾಲ ನಡೆದ ಇಷ್ಟಲಿಂಗ ಯೋಗದ ಮಂಗಲ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಇಷ್ಟಲಿಂಗ ಪೂಜೆಯಿಂದ ಅಂತರಂಗದ ಅರಿವು ವಿಸ್ತರಿಸಿ ಶರೀರ ಗುಣಗಳೆಲ್ಲ ಲಿಂಗಗುಣಗಳಾಗಿ ಪರಿವರ್ತನೆ ಆಗುತ್ತವೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅಂರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಒಂದು ತಿಂಗಳ ಪರ್ಯಂತರ ಮನೆ ಮನೆಗಳಲ್ಲಿ ನಡೆದ ಇಷ್ಟಲಿಂಗ ಪೂಜಾಯೋಗದ ಮಂಗಲ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಮತನಾಡಿದರು.

ಇಷ್ಟಲಿಂಗ ಅರಿವಿನ ಕುರುಹು ಆಚಾರದ ಪ್ರತೀಕ, ಸಮಾನತೆಯ ಸಂಕೇತವಾಗಿದೆ. ಇಷ್ಟಲಿಂಗವು ನಮ್ಮೊಳಗಿನ ದೇವರ ಪ್ರತೀಕವಾಗಿದೆ. ಇಷ್ಟಲಿಂಗ ಪೂಜೆಯೆಂಬುದು ಅರಿವಿನ ಪೂಜೆ, ನಮ್ಮೊಳಗಿನ ಅರಿವೇ ಗುರು, ಆ ಗುರುವೇ ದೇವರು, ಅಷ್ಟಾವರಣಗಳು ಮನುಷ್ಯನ ಬದುಕಿಗೆ ಪ್ರೇರಣೆಯಾಗಿವೆ ಎಂದು ಅಕ್ಕ ನುಡಿದರು.

ನೇತೃತ್ವ ವಹಿಸಿದ ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಮಾತನಾಡಿ, ಮನುಷ್ಯನ ಸಕಲ ಅನಿಷ್ಟಗಳನ್ನು ದೂರ ಮಾಡುವ ಹಾಗೂ ಸರ್ವ ಇಷ್ಟಾರ್ಥಗಳನ್ನು ಪೂರ್ಣ ಮಾಡುವುದೇ ಇಷ್ಟಲಿಂಗ. ಇಷ್ಟಲಿಂಗವನ್ನು ಸದಾ ಎದೆಯ ಮೇಲೆ ಧರಿಸಿ ಪ್ರತಿದಿನ ಪೂಜಿಸಬೇಕು. ಶರಣರ ವಚನ ಸಂದೇಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾತ್ವಿಕ ಬದುಕು ನಡೆಸಬೇಕೆಂದರು.

ಬಸವತತ್ವ ನಿಷ್ಠರಾದ ಸಂಗಮೇಶ ತೋಗರಖೇಡೆ ಮಾತನಾಡಿ, ನಿತ್ಯ ಧ್ಯಾನ, ಪೂಜೆ, ಇಷ್ಟಲಿಂಗ ಸಚಿಧಾನವನ್ನು ಮಾಡುವ ಮೂಲಕ ದೇಹವೇ ದೇವಾಲಯವಾಗಿಸಿಕೊಳ್ಳಬೇಕು. ಸಮರ್ಪಣೆ ಭಾವದಿಂದ ಪೂಜಿಸಿ, ಧ್ಯಾನಿಸಿದರೆ ದೈವಿಕಾರುಣ್ಯ ಇಳಿದು ಬರುತ್ತದೆ, ಕಾರಣ ಪ್ರತಿದಿನ ಇಷ್ಟಲಿಂಗ ಪೂಜಿಸಬೇಕು. ಯುವಕರನ್ನು ಇಷ್ಟಲಿಂಗ ಪೂಜಾಯೋಗದ ಕಡೆ ತರುವ ಯೋಜನೆ ಹಾಕಿಕೊಳ್ಳಬೇಕು ಎಂದರು.

ಗಣಪತಿ ಕಾಸ್ತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಬಸವತತ್ವ ಪ್ರಸಾರ ಕೇಂದ್ರ ಅಧ್ಯಕ್ಷ ಜಯಪ್ರಕಾಶ ಸಂದಾನಂದೆ ಕಾಸ್ತೆ, ಸುಲೋಚನಾ ಗುದಗೆ, ಜಯಶ್ರೀ ಬಿರಾದಾರ ಇಷ್ಟಲಿಂಗ ಪೂಜೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಬೀದರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಅಧ್ಯಕ್ಷರಾದ ಉಷಾ ಮಿರ್ಚೆ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ಮೀನಾ ಜಾಧವ ಧ್ವಜಾರೋಹಣಗೈದರು. ಸಂತೋಷ ಮಡಿವಾಳ ಸ್ವಾಗತಿಸಿದರು.

೨೨ ಸೆಪ್ಟೆಂಬರ್ ೨೦೨೫ ರಿಂದ ೨ ಅಕ್ಟೋಬರ ೨೦೨೫ ರವರೆಗೆ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ

೧೨ನೇ ಶತಮಾನದಲ್ಲಿ ಜಗತ್ತು ಹಿಂದೆಂದು ಕಾಣದಂಥ ಲೋಕ ಕಲ್ಯಾಣದ ಕ್ರಾಂತಿ ಬಸವಣ್ಣನವರ ನೇತೃತ್ವದಲ್ಲಿ ಅಸಂಖ್ಯ ಶರಣರು ತಮ್ಮ ಬಲಿದಾನ ಕೊಟ್ಟು ಲಿಂಗಾಯತ ಧರ್ಮ ರಕ್ಷಿಸಿದರು. ಈ ಕ್ರಾಂತಿಯಿಂದಾಗಿ ಜಗತ್ತಿಗೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆಗಳಾದವು.

ಸಾವಿರಾರು ಸಂಖ್ಯೆಯಲ್ಲಿ ಹುತಾತ್ಮರಾದ ಶರಣರ ಸ್ಮರಣೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಲ್ಲಿನ ಹರಳಯ್ಯನವರ ಗವಿಯಲ್ಲಿ ೨೨ ಸೆಪ್ಟೆಂಬರ್ ೨೦೨೫ ರಿಂದ ೨ ಅಕ್ಟೋಬರ ೨೦೨೫ ರವರೆಗೆ ಆಯೋಜಿಸಲು ನಿರ್ಧರಿಸಲಾಗಿದ್ದು, ಅನುಭಾವ ಗೋಷ್ಠಿ, ಸಾಮೂಹಿಕ ಇಷ್ಟಲಿಂಗಯೋಗ, ವಚನ ಸಂಗೀತ, ವಚನ ನೃತ್ಯ, ನಾಟಕ, ರೂಪಕ, ಭಜನೆ, ಶರಣ ವಿಜಯ ಪ್ರಶಸ್ತಿ ಪ್ರದಾನ, ಮೆರವಣಿಗೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಅರ್ಥಪೂರ್ಣ ಮತ್ತು ವೈವಿಧ್ಯಮಯವಾಗಿ ಆಯೋಜಿಸಲಾಗುವುದು. ಆದ್ದರಿಂದ ಶರಣ ಬಂಧುಗಳು ಪ್ರತಿದಿನ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *