ಬೀದರ
ಅಕ್ಟೋಬರ್ ತಿಂಗಳ 11 ಹಾಗೂ 12 ರಂದು ಬಸವಕಲ್ಯಾಣದ ಹೊರವಲಯದಲ್ಲಿರುವ ಸಸ್ತಾಪುರ ಬಂಗ್ಲಾದಲ್ಲಿರುವ ಎಂ.ಎಂ. ಬೇಗ್ ಸಭಾಮಂಟಪದಲ್ಲಿ 4ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷ ಸಹ ಅರ್ಥಪೂರ್ಣವಾಗಿ ಅಷ್ಟೇ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.
ಬೀದರ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಮಹಾರಾಷ್ಟ್ರದ ಲಾತೂರ, ಉದಗೀರ, ನಾಂದೆಡ, ಉಸ್ಮಾನಾಬಾದ, ಭೀಡ್, ಪರಭಣಿ, ಸಾಂಗ್ಲಿ, ಸತಾರಾ, ಪುಣೆ, ನಾಸಿಕ್ ಜಿಲ್ಲೆಗಳಿಂದ ಹಾಗೂ ತೆಲಂಗಾಣದ ಜಹಿರಾಬಾದ, ನಾರಾಯಣಖೇಡ, ನಿಜಾಮಬಾದ, ಮೆದಕ್, ಸಂಗಾರೆಡ್ಡಿ, ಹೈದರಾಬಾದ ಇತ್ಯಾದಿ ಕಡೆಗಳಿಂದ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಹಲವು ಹಲವು ರಾಜ್ಯ ಹಾಗೂ ಜಿಲ್ಲೆಗಳಿಂದ ಸುಮಾರು ೨೫ ಸಾವಿರ ಬಸವ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊರಗಿನಿಂದ ಬರುವ ಭಕ್ತರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಇರುತ್ತದೆ. ಆದ್ದರಿಂದ ಈ ಅರ್ಥಪೂರ್ಣ ಹಾಗೂ ಭಕ್ತಿಭಾವದಿಂದ ಕೂಡಿರುವ ನಾಲ್ಕನೇ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಬಸವಾನುಯಾಯಿಗಳು, ಬಸವಭಕ್ತರು, ಬಸವ ನಿಷ್ಠರು, ಬಸವತತ್ವ ಪ್ರಚಾರಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಕಳೆ ಹೆಚ್ಚಿಸಬೇಕೆಂದು ಪೂಜ್ಯರು ಕರೆ ಕೊಟ್ಟರು.
ಪತ್ರಿಕಾ ಗೋಷ್ಠಿಯಲ್ಲಿ ಬಸವ ಮಂಟಪದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿ, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಪರ್ವಕ್ಕೆ ಆಹ್ವಾನ ನೀಡಿದರು. ಇದೇ ವೇಳೆ ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಪ್ರಮುಖರಾದ ಬಸವಂತರಾವ ಬಿರಾದಾರ, ಮಲ್ಲಿಕಾರ್ಜುನ ಜೈಲರ್, ಗಿರಿಜಮ್ಮ ಧಾರವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.