ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದ ಮೂರನೇ ಪೂರ್ವಭಾವಿ ಸಭೆ ರಾಜಾಜಿನಗರದ ಬಸವ ಮಂಟಪದಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಿ ಸಮಾರೋಪ ಸಮಾರಂಭದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಸಲಾಯಿತು. ಇನ್ನೊಂದು ವಾರದಲ್ಲಿ ಬಸವ ಮಂಟಪದಲ್ಲಿಯೇ ಸಮಾರೋಪ ಸಮಾರಂಭದ ಕಾರ್ಯಾಲಯವನ್ನು ಉದ್ಘಾಟಿಸಲು ನಿರ್ಣಯಿಸಲಾಯಿತು.

ಸಮಾರೋಪದ ಬಗ್ಗೆ ರಾಜಧಾನಿಯ ವಿವಿಧ ಭಾಗಗಳಲ್ಲಿ ಮನೆ ಮನೆ ಪ್ರಚಾರ ಮಾಡುವ ಜವಾಬ್ದಾರಿಯನ್ನು ರಾಷ್ಟ್ರೀಯ ಬಸವದಳಕ್ಕೆ ವಹಿಸಲಾಯಿತು.
“ರಾಜಾಜಿನಗರ, ಬಸವೇಶ್ವರನಗರ, ವಿಜಯನಗರಗಳಲ್ಲಿ ಪ್ರಚಾರ ಕೆಲಸ ಶುರು ಮಾಡುತ್ತೇವೆ. ಇಂದು ಸಂಜೆ ಗೂಗಲ್ ಮೀಟ್ ಮಾಡಿ ಕಾರ್ಯಕರ್ತರ ತಂಡಗಳನ್ನು ರಚಿಸಲಾಗುವುದು. ಸೋಶಿಯಲ್ ಮೀಡಿಯಾದಲ್ಲಿಯೂ ಜಾಗೃತಿ ಮೂಡಿಸಲಾಗುವುದು,” ಎಂದು ರಾಷ್ಟ್ರೀಯ ಬಸವದಳದ ಕಿರಣ್ ಬೆಲ್ಲದ್ ಹೇಳಿದರು.

ಜೊತೆಗೆ ರಾಷ್ಟ್ರೀಯ ಬಸವದಳಕ್ಕೆ ಇಡೀ ದಿನದ ಪ್ರಸಾದ ವ್ಯವಸ್ಥೆಯ ಜವಾಬ್ದಾರಿಯನ್ನು ನಿಭಾಯಿಸುವ ಜವಾಬ್ದಾರಿ ನೀಡಲಾಗಿದೆ.
ಮಾಜಿ ಮೇಯರ್ ಪುಟ್ಟರಾಜು, ರಾಜಕೀಯ ಮುಖಂಡ ಬಿ ಮಲ್ಲಿಕಾರ್ಜುನ ಅವರಿಗೆ ಸಮಾರೋಪದ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ.
ಬಸವರಾಜ ಧನ್ನೂರ ಕಲ್ಯಾಣ ಕರ್ನಾಟಕದಿಂದ ಹಾಗೂ ಬಸವರಾಜ ರೊಟ್ಟಿ ಕಿತ್ತೂರು ಕರ್ನಾಟಕದಿಂದ ಜನರನ್ನು ಕರೆ ತರುವ ಜವಾಬ್ದಾರಿ ವಹಿವಹಿಸಿಕೊಂಡಿದ್ದಾರೆ.

ಗುರುವಣ್ಣದೇವರ ಮಠದ ಸ್ವಾಮೀಜಿ, ನಿಜಗುಣ ಮಠದ ಸ್ವಾಮೀಜಿ, ಬಸವ ಮಂಟಪದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ವಹಿಸಿದ್ದರು.
ಸಭೆಯಲ್ಲಿ ಹಲವಾರು ಬಸವಪರ ಸಂಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭ ಅರಮನೆ ಮೈದಾನದಲ್ಲಿ ಅಕ್ಟೊಬರ್ 5 ನಡೆಯಲಿದೆ.