ಧರ್ಮದ ಕಲಂನಲ್ಲಿ ‘ಲಿಂಗಾಯತ’ ಬರೆಸಿ: ಜಾಲಿಮ ಉಪಾಧ್ಯಕ್ಷ ಬಸವರಾಜ ಬುಳ್ಳ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಈ ತಿಂಗಳಿನಲ್ಲಿ ನಡೆಯಲಿರುವ ಜಾತಿಗಣತಿಯಲ್ಲಿ ಎಲ್ಲರೂ ಇತರೆ ಧರ್ಮ ಎನ್ನುವ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಿಸಿ, ಜಾತಿ-ಉಪಜಾತಿ ಕಲಂಗಳಲ್ಲಿ ಜಾತಿಗಳನ್ನು ಬರೆಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಬುಳ್ಳ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1871ರಲ್ಲಿ ನಡೆದ ದೇಶದ ಪ್ರಥಮ ಜನಗಣತಿ ಲಿಂಗಾಯತ ಒಂದು ಧರ್ಮ ಎಂದು ಗುರುತಿಸಿತ್ತು. ಆದರೆ ಮುಂಬರುವ ದಿನದಲ್ಲಿ ಮೈಸೂರ ರಾಜ್ಯದ ದಿವಾನರು ಲಿಂಗಾಯತ ಧರ್ಮವನ್ನು ಮರೆಮಾಚಿದ್ದಾರೆ ಎಂದರು.

ಈ ಹಿಂದೆ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆ ಸಮಾಜದ ಸಚಿವ, ಶಾಸಕರ ಹಾಗೂ ಗಣ್ಯರ ಸಭೆ ನಡೆಸಿ ಧರ್ಮದ ಕಲಂ ನಲ್ಲಿ ‘ವೀರಶೈವ ಲಿಂಗಾಯತ’ ಅಥವಾ ‘ಲಿಂಗಾಯತ’ ಯಾವುದನ್ನಾದರೂ ಬರೆಸಬಹುದೆಂದು ಒಮ್ಮತದಿಂದ ತೀರ್ಮಾನ ಮಾಡಿದ್ದರು.

ಆದರೆ ಇದೀಗ ಮಹಾಸಭಾ ವತಿಯಿಂದ ಹೇಳಿಕೆ ನೀಡಿ, ‘ವೀರಶೈವ ಲಿಂಗಾಯತ’ ಧರ್ಮ ಎಂದು ಬರೆಸಬೇಕೆಂದು ಹೇಳಿದ್ದಾರೆ. ಇದು ಲಿಂಗಾಯತರಿಗೆ ಮಾಡುತ್ತಿರುವ ದ್ರೋಹ ಮತ್ತು ಈ ದ್ವಂದ್ವ ನಿಲುವಿನಿಂದ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದೆ. ಈ ಗೊಂದಲಕ್ಕೆ ವೀರಶೈವ ಮಹಾಸಭಾ ಕಾರಣವಾಗಿದೆ ಎಂದು ಅವರು ದೂರಿದರು.

ಲಿಂಗಾಯತರು ಯಾವುದೇ ಗೊಂದಲಕ್ಕೆ ಒಳಗಾಗದೇ, ಸರಕಾರ ನಡೆಸಲಿರುವ ಗಣತಿ ಕಾರ್ಯಕ್ರಮದಲ್ಲಿ ಧರ್ಮದ ಕಾಲಂನಲ್ಲಿ ಇತರೆ ಧರ್ಮವೆನ್ನುವ ಸ್ಥಳದಲ್ಲಿ ‘ಲಿಂಗಾಯತ’ ಎಂದು ಬರೆಸಬೇಕು ಎಂದು ಬಸವರಾಜ್ ಬುಳ್ಳ ಕರೆ ನೀಡಿದರು.

ದಿಂಗಾಲೇಶ ಶ್ರೀ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತರನ್ನು ಒಗ್ಗೂಡಿಸಲು ಏಕತಾ ಸಮಾವೇಶ ಮಾಡುತ್ತಿದ್ದಾರೆ. ಬಸವಣ್ಣನವರನ್ನು ಧರ್ಮಗುರು ಮತ್ತು ವಚನ ಸಾಹಿತ್ಯ ಧರ್ಮ ಗ್ರಂಥ ಎಂದು ಒಪ್ಪಿಕೊಂಡಲ್ಲಿ ಎಲ್ಲರೂ ಒಂದಾಗಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರಾದ ಮಹದೇವಪ್ಪ, ಸಂಜೀವ್ ಕಡಗದ, ವೀರಭದ್ರಪ್ಪ, ನಿಜಗುಣ ಮೂರ್ತಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *