ಬೆಂಗಳೂರು
ಏಕತಾ ಸಮಾವೇಶ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ವೀರಶೈವ ಮಹಾಸಭಾ ಖಂಡಿಸಿದೆ.
ಇಂದು ಗದಗದಲ್ಲಿ ಮಾತನಾಡಿದ ಬೊಮ್ಮಾಯಿ ಜಾತಿ ಸಮೀಕ್ಷೆ ಹೆಸರಿನಲ್ಲಿ ಸರ್ಕಾರ ವೀರಶೈವ ಲಿಂಗಾಯತ ಸಮಾಜ ಒಡೆಯುವ ಹುನ್ನಾರ ನಡೆಸಿದೆ ಎಂದು ಅಪಾದಿಸಿದ್ದರು. ಇದರ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಬಂದಿರುವ ಮಹಾಸಭಾದ ಪ್ರಕಟಣೆಯೊಂದು ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಅನಾವಶ್ಯಕ ಗೊಂದಲಗಳಿಗೆ ಎಡೆಮಾಡಿಕೊಡಬಾರದೆಂದು ತಿಳಿಸಿದೆ.
“ಕೆಲವರು ಈ ಐತಿಹಾಸಿಕ ಸಮಾವೇಶದ ಬಗ್ಗೆ ಇಲ್ಲಸಲ್ಲದ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿ, ಸಮಾಜದಲ್ಲಿ ಗೊಂದಲವನ್ನು ಉಂಟು ಮಾಡುತ್ತಿರುವುದನ್ನು ಮಹಾಸಭೆ ಖಂಡಿಸುತ್ತದೆ. ಈ ಸಮಾವೇಶ ಯಾವುದೇ ಧರ್ಮ, ಜಾತಿ ಅಥವಾ ಸರ್ಕಾರದ ವಿರುದ್ಧದ ಸಮಾವೇಶವಲ್ಲ. ಕೂಡಲೇ ಇಂಥಹ ಹೇಳಿಕೆಗಳನ್ನು ನಿಲ್ಲಿಸಿ ನಾಳೆ ನಡೆಯಲಿರುವ ಐತಿಹಾಸಿಕ ಸಮಾವೇಶದಲ್ಲಿ ಪಾಲ್ಗೊಂಡು ಸಮಾಜದ ಒಗ್ಗಟ್ಟು ಪ್ರದರ್ಶಿಸುವುದು ಆದ್ಯ ಕರ್ತವ್ಯವಾಗಿದೆ,” ಎಂದು ಕರೆ ನೀಡಿದೆ.