ಬೆಳಗಾವಿ
ಶಿಕ್ಷಕರ ವೃತ್ತಿ ಪವಿತ್ರವಾದದ್ದು, ಕಾಯಕ ತತ್ವದಡಿ ಸಮಾಜ ಕಟ್ಟುವ ಗುರುತರ ಜವಾಬ್ದಾರಿ ಇರುವ ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕನ ಕೈಯಲ್ಲಿದೆ ಎಂದು ಬಿಆರ್ಸಿ ಮಹಾದೇವ ಮೇದಾರ ಹೇಳಿದರು.
ಲಿಂಗಾಯತ ಸಂಘಟನೆ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ
ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡಿದರು.
ಶಿಕ್ಷಣ ಎಂಬುದು ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಲು ಸಹಕಾರಿ. ಆ ನಿಟ್ಟಿನಲ್ಲಿ ಶ್ರಮಿಸಿದಾಗ ಮಾತ್ರ ಅದರ ಫಲ ಸಿಗುತ್ತದೆ ಎಂದರು.
ಎಷ್ಟೋ ಶಿಕ್ಷಕರು ಶ್ರಮವಹಿಸಿ ಮಕ್ಕಳ ಏಳಿಗೆಗಾಗಿ ದುಡಿದರೂ ಅವರಿಗೆ ಸಲ್ಲಬೇಕಾದ ಗೌರವ ಸನ್ಮಾನ ಈಗಿನ ಸಮಾಜದಲ್ಲಿ ಸಿಗುತ್ತಿಲ್ಲ. ತೆರೆಮರೆಯಲ್ಲಿ ಸೇವೆ ಮಾಡುತ್ತಿರುವ ಪ್ರತಿಭಾನ್ವಿತ ಶಿಕ್ಷಕರ ಸೇವೆ ಗುರುತಿಸಿ ಅವರನ್ನು ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸುತ್ತಿರುವುದು ನಿಜಕ್ಕೂ ಕಾಯಕ ನಿಷ್ಠೆಗೆ ಸಲ್ಲಿಸುತ್ತಿರುವ ಗೌರವ. ಆ ನಿಟ್ಟಿನಲ್ಲಿ ಶಿಕ್ಷಕರ ನಿಷ್ಠಾಪೂರಕ ಮನೋಧರ್ಮವು ವೃದ್ಧಿಯಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಂಘಟನೆ ವತಿಯಿಂದ ಶಿಕ್ಷಣ ಇಲಾಖೆಯಲ್ಲಿ ವಿಶೇಷ ಸೇವೆಗೈಯುತ್ತಿರುವ ಡಾ. ಸುನಿಲ ಪರಿಟ್, ರಶ್ಮಿ ತಳೇಕರ್, ವಾಣಿಶ್ರೀ ಜೋಗಳೇಕರ, ರೇವಕ್ಕ ಹತ್ತಿ, ಎಸ್.ಎಂ. ನಾಶಿ, ಬಿ.ಜಿ. ಸೊಪ್ಪಿಮಠ, ಎಸ್.ಜಿ. ಮಡಿವಾಳರ, ಎಂ.ಬಿ. ನಿಲಜಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಶಿಕ್ಷಕಿ ವಾಣಿಶ್ರೀ ಜೋಗುಳೇಕರ್ ಮಾತನಾಡಿ, ಕಾಯಕವೇ ಕೈಲಾಸ ಎಂದು ನಿಷ್ಠೆಯಿಂದ ಸೇವೆ ಮಾಡುತ್ತಿರುವ ನಮ್ಮಂತವರ ಸಾಧನೆ ಗಮನಿಸಿದ್ದು ನಿಜಕ್ಕೂ ನಮ್ಮ ಕಾಯಕ ನಿಷ್ಠೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಈರಣ್ಣ ದೇಯನ್ನವರ ಮಾತನಾಡಿ ವೃತ್ತಿ ಗೌರವ ಹೆಚ್ಚಿಸುತ್ತಿರುವ ಶಿಕ್ಷಕರ ಸೇವೆ ಸದಾ ಸ್ಮರಣೀಯವಾದದ್ದು. ಸಮಾಜ ಆರೋಗ್ಯಯುತವಾಗಿ ಇರಬೇಕಾದರೆ ನಿಷ್ಠೆಯ ಕಾಯಕವೂ ಸಹ ಪ್ರಮುಖವಾಗಿದೆ, ಅದರ ಗೌರವವನ್ನು ಕಾಪಾಡುತ್ತಾ ಮುಂದೆ ಸಾಗಿ ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಸದಾಶಿವ ದೇವರಮನಿ, ಶಂಕರ ಗುಡಸ, ಬಸವರಾಜ ಬಿಜ್ಜರಗಿ, ಅಕ್ಕಮಹಾದೇವಿ ತೆಗ್ಗಿ, ಸುಶೀಲಾ ಗುರವ, ಕಮಲಾ ಗಣಾಚಾರಿ, ವಿ. ಕೆ ಪಾಟೀಲ, ಶಶಿಭೂಷಣ ಪಾಟೀಲ, ನಿಂಗಪ್ಪ ವಾರಿಮನಿ, ಚನ್ನಬಸಪ್ಪ ವಾಲಿಟಗಿ, ಸುರೇಶ ನರಗುಂದ, ಮಹಾಂತೇಶ ತೋರಣಗಟ್ಟಿ, ಶಿವಾನಂದ ನಾಯಕ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಹಾದೇವಿ ಅರಳಿ ಪ್ರಾರ್ಥಿಸಿದರು. ಮಹಾಂತೇಶ ಮೆಣಸಿನಕಾಯಿ ಸ್ವಾಗತಿಸಿದರು. ಶಿವಾನಂದ ತಲ್ಲೂರ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.