ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮ: ಭಾಲ್ಕಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಉಡುಪಿ
ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ, ಹಿಂದು ಧರ್ಮದ ಒಂದು ಭಾಗವೂ ಅಲ್ಲ, ಸನಾತನ ಧರ್ಮದ ಭಾಗವೂ ಅಲ್ಲ. ಇದೊಂದು ಸ್ವತಂತ್ರ ಧರ್ಮ. ಇಲ್ಲಿ ಬಸವಣ್ಣನೇ ಧರ್ಮಗುರು, ಶರಣರ ವಚನ ಸಾಹಿತ್ಯವೇ ಧರ್ಮಗ್ರಂಥ. ಹೀಗಾಗಿ ಬಸವಣ್ಣ ಸ್ಥಾಪಿಸಿದ ಧರ್ಮವೇ ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಹೇಳಿದ್ದಾರೆ.

ಶುದ್ಧ ಬಸವತತ್ವವನ್ನು ಪ್ರಚಾರ, ಪ್ರಸಾರ ಹಾಗೂ ಅನುಷ್ಠಾನ ಮಾಡುವ ಆಶಯದೊಂದಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಸೆ.1ರಿಂದ ಅ.5 ರವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಗುರುವಾರ ಉಡುಪಿಗೆ ಆಗಮಿಸಿ ಪುರಭವನದಲ್ಲಿ ಉಡುಪಿಯ ಕಾಲೇಜು ವಿದಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆಸಿದ ವಚನ ಸಂವಾದ ಕಾರ್ಯಕ್ರಮದಲ್ಲಿ ದಸಂಸಯ ಮುಖಂಡ ಸುಂದರ್ ಮಾಸ್ತರ್ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತಿದ್ದರು.

ಯಾವುದೇ ಧರ್ಮ, ಧರ್ಮ ಅನಿಸಿಕೊಳ್ಳಲು ತನ್ನದೇ ಆದ ಸಿದ್ಧಾಂತ, ಸಾಧನೆ, ಧರ್ಮಗುರು, ಧರ್ಮಗ್ರಂಥ, ನೀತಿ ನಿಯಮಗಳನ್ನು ಹೊಂದಿರುತ್ತದೆ. ಹೀಗಾಗಿಯೇ ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮ. ಬುದ್ಧ ಸ್ಥಾಪಿಸಿದ್ದು ಬೌದ್ಧ ಧರ್ಮವಾದರೆ, ಮಹಾವೀರರದು ಜೈನ. ಗುರುನಾನಕ್ ಪ್ರಾರಂಭಿಸಿದ್ದು ಸಿಖ್ ಧರ್ಮವಾಗಿದ್ದು, ಏಸು ಕ್ರಿಸ್ತರದ್ದು ಕ್ರೈಸ್ತ ಧರ್ಮ. ಅದೇ ರೀತಿ ಬಸವಣ್ಣ ಕೊಟ್ಟಿದ್ದು ಬಸವಧರ್ಮ. ಅದನ್ನು ನಾವಿಂದು ಲಿಂಗಾಯತ ಧರ್ಮ ಎಂದು ಕರೆಯುತ್ತೇವೆ ಎಂದರು.

ಇದು ಹಿಂದು ಧರ್ಮವಾಗಲೀ, ಸನಾತನ ಧರ್ಮದ ಭಾಗವೇ ಅಲ್ಲ. ಇದನ್ನು ಸ್ವತಂತ್ರ ಧರ್ಮ ಎಂದೇ ತಿಳಿದುಕೊಳ್ಳಬೇಕು ಎಂದವರು ಉತ್ತರಿಸಿದರು.

ಬಿಲ್ಲವ ಮಹಾಮಂಡಳಿಯ ಮಹಿಳಾ ಅಧ್ಯಕ್ಷೆಯಾಗಿರುವ ಗೀತಾಂಜಲಿ ಸುವರ್ಣ ಕೇಳಿದ ಲಿಂಗಾಯತ – ವೀರಶೈವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಆದರೂ ತಾನು ಉತ್ತರಿಸುವುದಾಗಿ ತಿಳಿಸಿದರು. ಬಸವಣ್ಣನವರ ಕಾಲದಲ್ಲಿ ಅನೇಕರು ಬಸವಣ್ಣನವರಲ್ಲಿ ವಿಲೀನರಾದರು. ಅವರಲ್ಲಿ ವೀರಶೈವವೂ ಒಂದು. ಬಸವ ಧರ್ಮದಲ್ಲಿ ವಿಲೀನಗೊಂಡ ವೀರಶೈವರು ಇಷ್ಟಲಿಂಗ ಉಪಾಸನೆ ತೆಗೆದುಕೊಂಡು ತತ್ವವನ್ನು ಪಾಲಿಸುತಿದ್ದರು. ವೀರಶೈವ ಎಂಬುದು ಶೈವದ ಒಂದು ಭಾಗ ಎಂದವರು ವಿವರಿಸಿದರು.

ಶೈವರೂ ಇದರಲ್ಲಿ ಬಂದು ವಿಲೀನವಾದರು. ಆದರೆ ಅವರು ನಾವು ಲಿಂಗಾಯತರು ಎಂದು ಹೇಳಬೇಕಾಗಿತ್ತು. ಆದರೆ ಅವರು ತಾವು ವೀರಶೈವರು ಎಂದು ಹೇಳುತಿದ್ದಾರೆ. ಅಲ್ಲದೇ ಈಗವರು ಬಸವಣ್ಣರನ್ನು ಗುರುಗಳೆಂದು ಒಪ್ಪಿಕೊಳ್ಳುವುದಿಲ್ಲ. ವಚನ ಸಾಹಿತ್ಯವನ್ನು ಧರ್ಮಗ್ರಂಥ ಎಂದು ಹೇಳುವುದಿಲ್ಲ. ಒಪ್ಪಿಕೊಳ್ಳದ ಕಾರಣ ಅವರ ಮತ್ತು ನಮ್ಮ ನಡುವೆ ಸ್ವಲ್ಪ ವ್ಯತ್ಯಾಸವಿದೆ. ಬಹಳ ವ್ಯತ್ಯಾಸವಿಲ್ಲದಿದ್ದರೂ ವ್ಯತ್ಯಾಸವಂತೂ ಉಳಿದು ಕೊಂಡಿದೆ. ಬಸವಣ್ಣರನ್ನು ಹಾಗೂ ವಚನ ಸಾಹಿತ್ಯವನ್ನು ಅವರು ಒಪ್ಪಿಕೊಂಡರೆ ಅವರೂ ನಮ್ಮವರೇ. ನಾವೆಲ್ಲರೂ ಒಂದೇ. ನಮ್ಮಲ್ಲಿ ಏನೂ ಬೇಧಭಾವ ಇಲ್ಲ ಎಂದರು.

ಸಮಾಜದಲ್ಲಿ ಸಾಮರಸ್ಯ ಮೂಡಲು ಮೊದಲು ಧರ್ಮದ ಗುರುಗಳಲ್ಲಿ ಸಾಮರಸ್ಯ ಮೂಡಬೇಕು ಎಂದು ಕಾಂಗ್ರೆಸ್ ನಾಯಕ ರಮೇಶ್ ಕಾಂಚನ್‌ರ ಪ್ರಶ್ನೆಗೆ ಹಂದಿಗುಂದ ಮಠದ ಶಿವಾನಂದ ಮಹಾಸ್ವಾಮಿಗಳು ಉತ್ತರಿಸಿದರು. ತಾತ್ವಿಕ ಭಿನ್ನಾಭಿಪ್ರಾಯಗಳು ತಾತ್ವಿಕವಾಗಿರಬೇಕು. ತಾನು ಹೇಳಿದ್ದೇ ಸತ್ಯ ಎಂದು ಹಠ ಹಿಡಿಯಬಾರದು. ಎಲ್ಲರೂ ಸತ್ಯವನ್ನು ನಂಬಿದರೆ, ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು.

ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಯೊಬ್ಬರ ಲಿಂಗಾಯತ ಧರ್ಮದ ಮಾನ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಜೈನ ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮದಂತೆ ಲಿಂಗಾಯತ ಧರ್ಮವೂ ಪ್ರತ್ಯೇಕವಾದ ಧರ್ಮವಾಗಿದೆ. ಇದಕ್ಕೆ ಸಂವಿಧಾನಬದ್ಧವಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕಾಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಹಕ್ಕಿನ ಮಾನ್ಯತೆಯನ್ನು ನಾವು ಕೇಳುತಿದ್ದೇವೆ ಎಂದು ಉತ್ತರಿಸಿದರು.

ಉಡುಪಿ ಆಸುಪಾಸಿನ ಎಂಟಕ್ಕೂ ಅಧಿಕ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಇಂದಿನ ಸಂವಾದದಲ್ಲಿ ಉತ್ಸಾಹದಿಂದ ಭಾಗವಹಿಸಿ, ಧರ್ಮವೂ ಸೇರಿದಂತೆ ಹಲವು ವಿಷಯಗಳ ಕುರಿತು ಕೆಲವು ದಿಟ್ಟ, ನೇರ ಪ್ರಶ್ನೆ ಗಳನ್ನು ಕೇಳಿದರೆ, ಡಾ. ಪಟ್ಟದೇವರು ಹಾಗೂ ಶಿವಾನಂದ ಮಹಾಸ್ವಾಮಿಗಳು ಅತ್ಯಂತ ಜಾಣ್ಮೆಯಿಂದ ಉತ್ತರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *