‘ಏಕತಾ ಸಮಾವೇಶ ಅರ್ಥಹೀನ, ಅಜ್ಞಾನದ ಪರಮಾವಧಿ’

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ

ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶ ಅರ್ಥಹೀನ ಸಮಾವೇಶವಾಗಿದ್ದು, ಇದು ಅಜ್ಞಾನದ ಪರಮಾವಧಿ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಸಮಾಜಕ್ಕೆ ಇಂಥ ಸಮಾವೇಶದ ಅವಶ್ಯಕತೆಯಿಲ್ಲ. ಇದರಿಂದ ಸಮಾಜದ ಜನರಲ್ಲಿ ಅನಗತ್ಯ ಗೊಂದಲ ನಿರ್ಮಾಣವಾಗುತ್ತದೆ. ಜಾತಿ ಸಮೀಕ್ಷೆ ಆರಂಭಗೊಳ್ಳುವ ಸಂದರ್ಭದಲ್ಲಿ ಸಮಾಜ ಬಾಂಧವರು ಗೊಂದಲಕ್ಕೀಡಾಗದೇ ಒಮ್ಮತದ ನಿರ್ಧಾರ ಕೈಗೊಳ್ಳಬೇಕು. ಸರಕಾರ ನಡೆಸುವ ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕಲ್ಲದೇ ಉಪಜಾತಿ ಕಾಲಂನಲ್ಲಿ ನಿಮ್ಮ ವೃತ್ತಿ ಆಧಾರಿತ ಉಪಜಾತಿ ನಮೂದಿಸಬೇಕು ಎಂದರು.

ಕೆಲ ದಿನಗಳ ಹಿಂದೆ ಪಂಚಮಸಾಲಿ ಸಮಾಜದ ಸಭೆಯಲ್ಲಿ ನಮ್ಮನ್ನು ಆಹ್ವಾನಿಸಲಾಗಿತ್ತು, ನಾವು ಪಾಲ್ಗೊಂಡಿದ್ದೆವು. ಅಲ್ಲಿ, ಜಾತಿ ಗಣತಿ ಸಮೀಕ್ಷೆ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ಬರೆಸುವಂತೆ ಹಾಗೂ ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಅದು ಒಮ್ಮತದ ನಿರ್ಣಯವಾಗಿರಲಿಲ್ಲ. ನಾವು ಹಾಗೂ ಬಸವಕುಮಾರ ಸ್ವಾಮೀಜಿ ಅದಕ್ಕೆ ಬೆಂಬಲಿಸಿರಲಿಲ್ಲ. ಆದರ ಇದಕ್ಕೆ ನಮ್ಮ ಬೆಂಬಲವಿದೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಾವು ಹೋರಾಟ ಮಾಡುತ್ತಿದ್ದು, ಜಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಬಸವಧರ್ಮ ಪೀಠದ ಬಸವಕುಮಾರ ಸ್ವಾಮೀಜಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಾವೆಲ್ಲ ಸಂಘಟಿತರಾಗಬೇಕಿದೆ. ವೀರಶೈವ-ಲಿಂಗಾಯತ ಧರ್ಮ ಎಂದು ಕೇಂದ್ರಕ್ಕೆ 4 ಬಾರಿ ಪ್ರಸ್ತಾವನೆ ಕಳಿಸಿದರೂ ಅದನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಆದ್ದರಿಂದ ಲಿಂಗಾಯತ ಧರ್ಮ ಎಂದು ನಮೂದಿಸಿ ಪ್ರಸ್ತಾವನೆ ಕಳಿಸಬೇಕಿದೆ. ಈ ದಿಸೆಯಲ್ಲಿ ನಿಯೋಗ ಮಾಡಿಕೊಂಡು ಕೇಂದ್ರ ಸರಕಾರದ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಧರ್ಮಕ್ಕೆ ಮಾನ್ಯತೆ ಪಡೆಯುವುದು ಅವಶ್ಯಕವಾಗಿದೆ. ಕೇಂದ್ರ ಸರಕಾರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ವಿಶ್ವಾಸವಿದೆ. ಲಿಂಗಾಯತ ಧರ್ಮ ಮಾನ್ಯತೆ ಪಡೆಯುವ ದಿಸೆಯಲ್ಲಿ ನಮ್ಮ ಸಮಾಜ ಬಾಂಧವರು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *