ಅಭಿಯಾನ ಅನುಭವ: ಬಸವ ಸಂಘಟನೆಗಳ ಬಲ ಹೆಚ್ಚಿಸಿದ ಬಸವ ಸಂಸ್ಕೃತಿ ಅಭಿಯಾನ

ಗದಗ

(ವಿವಿಧ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ. ಗದಗದಿಂದ ಬಸವದಳದ ಶಿವಾನಂದ ಎ. ಮುಗದ ಮತ್ತು ನಿಂಗನಗೌಡ ಹಿರೇಸಕ್ಕರಗೌಡ್ರ ತಮ್ಮ ಅನುಭವ ಹಂಚಿಕೊಂಡಿದ್ದಾರೆ.)

ಶಿವಾನಂದ ಎ. ಮುಗದ

1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ?

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ‘ಬಸವ ಸಂಸ್ಕೃತಿಯ ಅಭಿಯಾನ’ ವನ್ನು ನಮ್ಮ ಜಿಲ್ಲೆಗೆ ಬರಮಾಡಿಕೊಳ್ಳಲು ಅತ್ಯಂತ ಉತ್ಸಾಹಗೊಂಡಿದ್ದರು.

ಹಾಗಾಗಿ ತಮ್ಮ ಸಂಘಟನೆಯ ಜೊತೆಗೆ ಎಲ್ಲ ಬಸವಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಸಂಚರಿಸಿ ಬಸವಾದಿ ಶರಣರ ಪರವಾದ ಎಲ್ಲ ಸಂಘಟನೆಗಳನ್ನು ಸಂಪರ್ಕಿಸಿ, ಅಭಿಯಾನದ ಕುರಿತು ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೇಳಿಕೊಂಡರು.

ಹಾಗೆಯೇ ಜಿಲ್ಲಾ ಕೇಂದ್ರದ ಹಲವಾರು ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಅಭಿಯಾನದಲ್ಲಿ ಭಾಗವಹಿಸಿ ಶರಣರ ಸಂದೇಶಗಳನ್ನು ಪ್ರಸಾರ ಮಾಡುವಲ್ಲಿ ಸಹಕರಿಸುವಂತೆ ಮನವಿ ಮಾಡಿದ್ದರು.

ಅಲ್ಲದೆ ಜಿಲ್ಲೆಯ ಹಲವಾರು ಪದವಿ ಕಾಲೇಜುಗಳಿಗೆ ಬೇಟಿ ನೀಡಿ ಕರ್ನಾಟಕ ಸರಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಏಕೆ ಘೋಷಣೆ ಮಾಡಿದ್ದಾರೆ ಎಂಬುದರ ಕುರಿತು ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶರಣರ ವಿಚಾರಧಾರೆಗಳನ್ನು ತಿಳಿಸುತ್ತಾ ಅವರಿಗೂ ಕೂಡ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಂಡಿದ್ದರು.

ಹೀಗಾಗಿ ಜಿಲ್ಲೆಯ ಬಸವಪರ ಮಹಿಳಾ ಸಂಘಟನೆಗಳು ಹಾಗೂ ಯುವಕರಾದಿಯಾಗಿ ಜಿಲ್ಲೆಯ ಜನರು ಸಾಗರೋಪಾದಿಯಲ್ಲಿ ಬಂದು ಭಾಗವಹಿಸಿದರು ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

2) ಜನರ ಸ್ಪಂದನೆ ಹೇಗಿತ್ತು?

ಅಭಿಯಾನಕ್ಕೆ ಸಾಕಷ್ಟು ಜನ ತಮ್ಮ ತನು ಮನ ಧನದ ದಾಸೋಹ ಮತ್ತು ಸಹಕಾರವನ್ನು ನೀಡುವುದರ ಜೊತೆಗೆ ಅತ್ಯಂತ ಉತ್ಸಾಹದಿಂದ ಸ್ಪಂದಿಸಿದ್ದಾರೆ.

3) ಅಭಿಯಾನದ ಬಗ್ಗೆ ಅವರ ನೀರಿಕ್ಷೆ ಏನಿತ್ತು. ನಿಮ್ಮ ನೀರಿಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ಅಭಿಯಾನವು ನಿರೀಕ್ಷೆಗೆ ತಕ್ಕಂತೆ ನಡೆದಿದೆ. ಶರಣರ ಸಂದೇಶಗಳನ್ನು ನೀಡುವ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಲಾಗಿದೆ.

4) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಅಭಿಯಾನದಲ್ಲಿ ಕಾಲೇಜು ವಿಧ್ಯಾರ್ಥಿಗಳೊಂದಿಗೆ ಏರ್ಪಡಿಸಿದ ಸಂವಾದ ಕಾರ್ಯಕ್ರಮವು ನಮ್ಮ ಗಮನವನ್ನು ಸೆಳೆಯಿತು ಮತ್ತು ಅತ್ಯಂತ ಸಂತೋಷ ನೀಡಿತು.

5) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

ಶರಣರು ಕೊಡಮಾಡಿರುವ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವೆಂದು ಕಂಡುಬಂದಿತು, ಮುಖ್ಯವಾಗಿ ಸ್ತ್ರೀ ಸಮಾನತೆ, ಶರಣರ ಜಾತ್ಯಾತೀತ ಪರಿಕಲ್ಪನೆಯ ಜೊತೆಗೆ ಅವರ ಭೇದವಿಲ್ಲದ ಬದುಕಿನ ಕುರಿತು ತಿಳುವಳಿಕೆಯನ್ನು ಬಹಳ ಚೆನ್ನಾಗಿ ನೀಡಲಾಯಿತು.

6) ಅಭಿಯಾನ ಜನರ ಮೇಲೆ, ಬಸವ ಸಂಘಟನೆಗಳ ಮೇಲೆ ಮಾಡಿರುವ ಪರಿಣಾಮವೇನು

ಅಭಿಯಾನವು ‘ಲಿಂಗಾಯತ’ ಎಂಬುದು ಜಾತಿಯಲ್ಲ ಅದೊಂದು ಸರ್ವ ಕಾಯಕ ಜೀವಿಗಳಿಂದ ಈ ಕನ್ನಡ ನೆಲದಲ್ಲಿ, ಕನ್ನಡ ಭಾಷೆಯಲ್ಲಿ ಉದಯಿಸಿದ ಕನ್ನಡಿಗರ ಶ್ರೇಷ್ಠ ಧರ್ಮವೆಂಬ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.

ಅಭಿಯಾನವು ಸಮಾಜಕ್ಕೆ ಬಹುದೊಡ್ಡ ಸಂದೇಶವನ್ನು ನೀಡಿದೆ. ಶರಣರ ಪರವಾಗಿರುವ ನೂರಾರು ಪೂಜ್ಯ ಮಠಾಧೀಶರು, ಸ್ವಾಮೀಜಿಗಳು, ಹಾಗೂ ಅನೇಕ ಅನುಭಾವಿಗಳು ಒಟ್ಟಿಗೆ ಶರಣರ ಸಂದೇಶಗಳನ್ನು ಹೊತ್ತು ತಿರುಗುತ್ತಿರುವುದು ಶರಣರ ಪರವಾದ ಸಂಘಟನೆಗಳ ಮನೋಬಲ ನೂರ್ಮಡಿಯಾದ ಅನುಭವ ನೀಡಿದೆ.

7) ಅಭಿಯಾನದಲ್ಲಿ ಮಠಾಧೀಶರ ಒಕ್ಕೊಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?

ಮಠಾಧೀಶರ ಒಕ್ಕೂಟದಿಂದ ಎಲ್ಲ ಬಸವಪರ ಸಂಘಟನೆಗಳನ್ನೊಳಗೊಂಡು ಸಂಘಟಿಸಿರುವ ಈ ಅಭಿಯಾನದ ಕಾರ್ಯಕ್ರಮವು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಮೂಡಿಬರುತ್ತಿರುವದರಲ್ಲಿ ಯಾವುದೇ ಸಂಶಯವಿಲ್ಲ.

8) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?

ಪ್ರತಿ ವರ್ಷವೂ ಹೊಸ ಹೊಸ ರೂಪಗಳಲ್ಲಿ ಇಂತಹ ಕಾರ್ಯಕ್ರಮಗಳು ಶರಣರ ಸಂದೇಶಗಳನ್ನು ಜನಮಾನಸಕ್ಕೆ ಮುಟ್ಟಿಸುವಂತೆ ನಡೆದರೆ ಒಳಿತು.

ನಿಂಗನಗೌಡ ಹಿರೇಸಕ್ಕರಗೌಡ್ರ

1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ

ಪೂರ್ವಭಾವಿ ಸಿದ್ಧತೆಗಳು ತುಂಬ ಚೆನ್ನಾಗಿದ್ದವು. ಸ್ವಾಮೀಜಿಗಳ ಒಕ್ಕೂಟ ಟೊಂಕಕಟ್ಟಿ ಸಿದ್ಧವಾಗಿತ್ತು. ಜಾಗತಿಕ ಲಿಂಗಾಯತ ಮಹಾಸಭಾದ ಜನ, ಚುರುಕಾಗಿ ಅಭಿಯಾನ ಬರುವ ಪೂರ್ವದಲ್ಲಿಯೇ ಆಯಾ ಜಿಲ್ಲೆಯಲ್ಲಿದ್ದ ಕಾಲೇಜುಗಳ ಅಧ್ಯಾಪಕರ ಸಹಾಯದಿಂದ, ಮಕ್ಕಳಲ್ಲಿ ಈ ಕುರಿತು ಮಾಹಿತಿಯನ್ನೂ, ಕೇಳಬೇಕಾದ ಪ್ರಶ್ನೋತ್ತರಗಳ ಅರಿವು ನೀಡಿದ್ದರು. ಅಲ್ಲಲ್ಲಿ ದೊಡ್ಡ ದೊಡ್ಡ ಬ್ಯಾನರ್ ಹಾಕಿ, ಕೆಲ ಆಟೋಗಳಲ್ಲಿ ಸ್ಪೀಕರ್ ಹಚ್ಚಿ ಅಭಿಯಾನದ ಬಗ್ಗೆ ಪ್ರಚಾರ ಮಾಡಿ ಜನ ಸಮೂಹಕ್ಕೂ ತಿಳಿವಳಿಕೆ ಕೊಟ್ಟಿದ್ದರು. ಹೀಗೆ ಸಂಘಟನೆಯು ಜೋರಾಗಿತ್ತು.

2) ಜನರಿಂದ ನೆರವು/ಸ್ಪಂದನೆ ಹೇಗಿತ್ತು?

ಜನರಿಂದ ನಿರೀಕ್ಷೆ ಮೀರಿ ತನು ಮನ ಧನ ದಾಸೋಹ ದೊರಕಿದೆ.

3) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಅಭಿಯಾನ ಜನರಲ್ಲಿ ಬಹಳ ಜಾಗೃತಿ ಉಂಟು ಮಾಡಿವೆ. ಕೆಲ ವಿರಕ್ತ ಮಠದವರಿಗೆ ಕಸಿವಿಸಿ ಆಗಿದೆ. ಸ್ವಲ್ಪ ಆಗದ ಜನರಿಂದ ತೊಡಕುಗಳೂ ಆಗಿವೆ. ಅಂಥವುಗಳನ್ನು ಸ್ವಾಮಿಗಳೆಲ್ಲರೂ ಜಾಣ್ಮೆಯಿಂದ ನಿರ್ವಹಿಸಿದ್ದಾರೆ. ಎಲ್ಲ ಕಡೆ ‘ಜಾಗತಿಕ ಲಿಂಗಾಯತ ಮಹಾ ಸಭಾ’ದ ಜನ ಮತ್ತು ಬಸವಪರ ಸಂಘಟನೆಗಳು ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಹುತೇಕ ಎಲ್ಲ ಕಡೆ ಬಹಳ ಜನರು ಮತ್ತು ವಿದ್ಯಾರ್ಥಿಗಳು ಹುರುಪಿನಿಂದ ಭಾಗವಹಿಸಿದ್ದಾರೆ. ಅಭಿಯಾನ ಜಯದ ಕಡೆ ವಿಶ್ವಾಸದಿಂದ ದಾಪುಗಾಲು ಹಾಕುತ್ತಿದೆ. ಬಸವ ಬಳಗ ಬೆಳೆಯುತ್ತಲೇ ಇದೆ.

8) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು

ಪ್ರಬಂಧಗಳನ್ನು ಬರೆಯಲು, ಸಣ್ಣ ಸಣ್ಣ ನಾಟಕಗಳನ್ನು, ವಚನಗಳ ರೂಢಿಸುವ -ಪ್ರೇರೇಪಿಸುವ ಕೆಲವಾದರೂ ಕಾರ್ಯಕ್ರಮ ಜರುಗಿಸಬೇಕು. ಅದರ ಮುಖಾಂತರ ಈ ವಿಷಯ ಬತ್ತಿ ಹೋಗದಂತೆ ಕೊನೆಗೆ ಎರಡು ತಿಂಗಳಿಗೊಮ್ಮೆಯಾದರೂ ನೆನಪಿಸುವ ಕಲಾಪಗಳು ನಡೆಯಬೇಕು. ಇಲ್ಲವಾದಲ್ಲಿ ಬೋರ್ಗಲ್ಲ ಮೇಲೆ ಮಳೆ ಸುರಿದಂತೆ ಆಗುತ್ತದೆ.

ಸಾಮಾನ್ಯರಲ್ಲಿ, ವಿದ್ಯಾರ್ಥಿಯರಲ್ಲಿ ‘ಬಸವ ಬೀಜ’ ಬಿತ್ತಿದ್ದು ಸರಿ. ಅದರ ಫಲ ಏನಾಗಿದೆ ಎಂಬುದರ ಕಡೆ ಈ ಅಭಿಯಾನ ಯೋಚಿಸಬೇಕಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *