ಚಿಕ್ಕೋಡಿ
ಬಸವಣ್ಣನವರು ಹಿಂದೂ ಸಮಾಜದಲ್ಲಿ ಮೌಢ್ಯಗಳ ವಿರುದ್ಧ ಹೋರಾಡಿದ್ದಾರೆಯೇ ಹೊರತು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಲ್ಲ, ಕೆಲವು ಕಂಪನಿಗಳು ಅದನ್ನು ತಯಾರು ಮಾಡಿಕೊಂಡಿವೆ, ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶನಿವಾರ ಹೇಳಿದರು.
ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿಯಲ್ಲಿ ಪಂಚಮಸಾಲಿ ಮೀಸಲಾತಿ ಎಂಟನೇ ಹಂತದ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಮಠಾಧೀಶರು ವೀರಶೈವ ಲಿಂಗಾಯತ ಎಂದು ಜಾತಿಗಣತಿಯಲ್ಲಿ ಉಲ್ಲೇಖಿಸುವಂತೆ ಹೇಳುತ್ತಿದ್ದಾರೆ. ಆದರೆ ಎಲ್ಲಿಯವರೆಗೆ ಕೇಂದ್ರ ಸರ್ಕಾರ ವೀರಶೈವ ಲಿಂಗಾಯತ ಎಂದು ಅಧಿಕೃತವಾಗಿ ಘೋಷಣೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಈ ರೀತಿ ನಾವು ಬರೆಸಿದರೆ ಯಾವುದೇ ಅರ್ಥವಿಲ್ಲ. ಕೆಲವು ಮೂರ್ಖರು ಲಿಂಗಾಯತ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ ಎಂದು ಯತ್ನಾಳ್ ಹರಿಹಾಯ್ದರು.
ಧರ್ಮ ಎಂದಲ್ಲಿ ಹಿಂದೂ ಎಂದೇ ಬರೆಸಬೇಕು, ಜಾತಿ ಕಾಲಂನಲ್ಲಿ ಲಿಂಗಾಯತ, ಪಂಚಮಸಾಲಿ ಏನಿದೆಯೋ ಅದನ್ನು ಬರೆಸಬೇಕು, ಸರ್ಕಾರದ ಮೀಸಲಾತಿಯಲ್ಲಿ ವೀರಶೈವ ಲಿಂಗಾಯತ ಎಂಬುದೇ ಇಲ್ಲ, ಆರು ಧರ್ಮಕ್ಕೆ ಮಾತ್ರ ನಮ್ಮ ಸಂವಿಧಾನದಲ್ಲಿ ಅವಕಾಶ ಇದೆ. ಧರ್ಮ ಎಂದು ಘೋಷಿಸದಿರುವುದನ್ನು ಸೇರಿಸಿ ಭವಿಷ್ಯದ ನಮ್ಮ ಮಕ್ಕಳನ್ನು ಕೊಲೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ವೀರಶೈವ ಲಿಂಗಾಯತ ಎಂದು ಬರೆಸಿದರೆ ಮೀಸಲಾತಿ ಸಿಗುವುದಿಲ್ಲ. ಹಿಂದೂ ಲಿಂಗಾಯತ ಪಂಚಮಸಾಲಿ ಎಂದು ಬರೆಸಿದರೆ ಮೀಸಲಾತಿ ಸಿಗುತ್ತದೆ. ಕೆಲವು ಲಿಂಗಾಯತರು 2ಎದಲ್ಲಿ ಸೇರಿದ್ದಾರೆ. ಸರ್ಕಾರದಲ್ಲಿ ಮೀಸಲಾತಿಗೆ ಸೇರಿದವರು ಹಿಂದೂ ಎಂದು ಉಲ್ಲೇಖಿಸಿ ತಮ್ಮ ಉಪಜಾತಿಯನ್ನು ಬರೆಸಿದ್ದಾರೆ. ವೀರಶೈವ ಲಿಂಗಾಯತವನ್ನು ಧರ್ಮ ಅಂತ ಕೇಂದ್ರ ಸರ್ಕಾರ ಅನುಮೋದನೆಯೇ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಹಿಂದೂ ಧರ್ಮದ ದ್ವೇಷದಿಂದ ಜನ ರೊಚ್ಚಿಗೆದ್ದಿದ್ದಾರೆ. ನಾನು ಹಿಂದೂ ಧರ್ಮದ ಪರವಾಗಿರುವುದರಿಂದ ರಾಯಚೂರು ಮತ್ತು ಮದ್ದೂರಿನಲ್ಲಿ ಲಿಂಗಾಯತರನ್ನು ಹೊರತುಪಡಿಸಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ, ಜನಕ್ಕೆ ಹಿಂದೂತ್ವ ಬೇಕಾಗಿದೆ, ಈ ಸರ್ಕಾರ ಜಾತಿ ಜಾತಿಗಳ ನಡುವೆ ಸಂಘರ್ಷ ಎಡೆಮಾಡಿಕೊಡುತ್ತಿದೆ. ನನ್ನ ಸಲುವಾಗಿ ಅಲ್ಲಿ ಜನ ಸೇರಲ್ಲ, ಹಿಂದುತ್ವಕೋಸ್ಕರ ಅಲ್ಲಿ ಜನ ಸೇರಿದ್ದರು ಎಂದು ತಿಳಿಸಿದ್ದಾರೆ.