ಗುಳೇದಗುಡ್ಡ
ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಶರಣ ಹುಚ್ಚೇಶ ಸಿಂದಗಿ, ತಿಪ್ಪಾಪೇಟೆ ಅವರ ಮನೆಯಲ್ಲಿ ಜರುಗಿತು.
ಚಿಂತನೆಗಾಗಿ ಆಯ್ದುಕೊಂಡ ವಚನ –
ಈಶ! ನಿಮ್ಮ ಪೂಜಿಸಿದ ಬಳಿಕ
ಅನ್ಯ ದೈವಂಗಳಿಗೆ ಹೇಸಲೇ ಬೇಕು.
ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ
ಅವ ನಮ್ಮ ಈಶ್ವರಂಗೆ ಹೊರಗು.
ದೋಷರಹಿತ ಭಕ್ತರು ಅವಂಗೆ ಕುಲವೆಂದು
ಕೂಸ ಕೊಟ್ಟು ಕೂಡುಂಡಡೆ
ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ! ರಾಮನಾಥ.
ಆದ್ಯ ವಚನಕಾರ ಶರಣ ಜೇಡರ ದಾಸಿಮಯ್ಯನವರ ಈ ವಚನವನ್ನು ಪ್ರಾರಂಭದಲ್ಲಿ ಚಿಂತನೆಗೆ ಎತ್ತಿಕೊಂಡ ಪ್ರೊ. ಸುರೇಶ ರಾಜನಾಳ ಅವರು, ಸಂಕ್ಷಿಪ್ತದಲ್ಲಿ ಜೇಡರ ದಾಸಿಮಯ್ಯನವರ ಜೀವನವನ್ನು ತಿಳಿಸಿ, ಇಲ್ಲಿ ಲಿಂಗಾಯತರ ಶಿವನನ್ನು ಕುರಿತು ಆತ ವೈದಿಕರ ಶಿವನಲ್ಲ. ಆತ ಅಗಮ್ಯ, ಅಗೋಚರ, ಅಪ್ರತಿಮವಾದ ಚೈತನ್ಯದ ಮಹಾಬೆಳಕು. ಅದನ್ನೇ ಸ್ವರೂಪದಲ್ಲಿ ಶಿವನೆಂದು ತಿಳಿದುಕೊಂಡಿದ್ದೇವೆ. ಆತನಿಗೆ ನಾಮ ರೂಪಾದಿಗಳಿಲ್ಲ. ನಮಗೆ ಇಷ್ಠಲಿಂಗವೇ ಪ್ರಾಧಾನ್ಯ. ಅದನ್ನು ಬಿಟ್ಟು ಅನ್ಯದೈವವಿಲ್ಲ. ಅನ್ಯದೈವಕ್ಕೆ ಮೊರೆಹೋದರೆ ಅಂಥ ಅಧರ್ಮಿಯೊಂದಿಗೆ ಯಾವ ಕಾಲಕ್ಕೂ ಕೊಡಕೊಳ್ಳುವ ಸಂಬಂಧವನ್ನು ಶರಣರಾದವರು ಮಾಡಬಾರದು. ಇಂದು ದಾಸಿಮಯ್ಯನವರು ಸ್ಪಷ್ಟವಾಗಿ ಈ ವಚನದಲ್ಲಿ ಹೇಳಿದ್ದಾರೆ ಎಂದು ಹೇಳಿದರು.
ವಚನದ ವಿಶ್ಲೇಷಣೆಯ ಮುಂದುವರೆದ ಭಾಗವಾಗಿ ಶರಣ ಮಹಾಂತೇಶ ಸಿಂದಗಿಯವರು ಮಾತನಾಡುತ್ತ, ‘ಈ ಸೃಷ್ಟಿಗೆ ಕಾರಣವಾದ ಆ ಪರಾತ್ಪರವಾದ ಬಯಲು, ಶೂನ್ಯವಾದ ಶಿವನೇ ಬೇರೆ, ಪೌರಾಣಿಕವಾದ ಶಿವನೇ ಬೇರೆ. ಅದನ್ನು ಸ್ಪಷ್ಟಪಡಿಸಲೆಂದು ಶರಣ ಜೇಡರ ದಾಸಿಮಯ್ಯನವರು ಈ ವಚನವನ್ನು ಬರೆದಿರುವುದು ಸುಸ್ಪಷ್ಟ. ಅಷ್ಟಕ್ಕೂ ನಮ್ಮಲ್ಲಿ ಪೂಜೆ ಇಲ್ಲ ಅನುಸಂಧಾನವಿದೆ. ಸಾಕಾರ ಶಿವನನ್ನು ಯಾವ ಶರಣರೂ ಒಪ್ಪಿಲ್ಲ. ನಿರಾಕಾರಿ, ನಿರಾಭಾರಿಯಾದ ಶಿವನನ್ನು ಇಷ್ಠಲಿಂಗದಲ್ಲಿ ಕಾಣುವದು. ಅದರೊಂದಿಗೆ ಅನುಸಂಧಾನ ಮಾಡುವುದು ಶರಣರ ಪದ್ಧತಿ ಅದರಲ್ಲಿಯೇ ಲೀನವಾಗುವದು ಅವರ ಗುರಿ’ ಎಂದರು.

ಕೊನೆಯಲ್ಲಿ ಈ ವಚನವನ್ನು ಚಿಂತನಕ್ಕೆ ಒಳಪಡಿಸಿದ ಶರಣ ಸಿದ್ಧಲಿಂಗಪ್ಪ ಬ. ಬರಗುಂಡಿಯವರು, ಶರಣರು ಮುಖ್ಯವಾಗಿ ಏಕದೇವೋಪಾಸನೆಗೆ ಒತ್ತು ಕೊಟ್ಟರು. ಅದಕ್ಕಾಗಿ ಅವರು ಆಯ್ದುಕೊಂಡಿದ್ದು ಅಪ್ಪ ಬಸವಣ್ಣನವರು ನೀಡಿದ ಇಷ್ಟಲಿಂಗವನ್ನು ಇಡೀ ವಿಶ್ವ ಚೈತನ್ಯವೇ ಈ ಇಷ್ಟಲಿಂಗದಲ್ಲಿದೆ. ಜಗದಗಲ ಮುಗಿಲಗಲವಾಗಿರುವ ಆ ವಿಶ್ವ ಚೈತನ್ಯವೇ ಚುಳುಕಾಗಿ ಈ ಇಷ್ಠಲಿಂಗವಾಗಿದೆ. ಹಾಗೂ ಅದು ನಮ್ಮ ಕರಸ್ಥಲಕ್ಕೆ ಕೈಸೇರಿದೆ ಇದೆ ನಮ್ಮ ದೇವರು. ಇದನ್ನು ಬಿಟ್ಟು ನಮಗೆ ಅನ್ಯದೈವವಿಲ್ಲ. ಈ ದೇವರನ್ನೇ ಶಿವನೆಂದು ಕರೆದಿದ್ದುದುಂಟು.
ಒಮ್ಮೆ ಇಷ್ಟಲಿಂಗವನ್ನು ಧರಿಸಿಯಾದ ಮೇಲೆ ಅನ್ಯದೈವಕ್ಕೆ ಎಳಿಸುವುದನ್ನು ಶರಣರು ಒಪ್ಪುವುದಿಲ್ಲ. ಅದನ್ನು ಸ್ಪಷ್ಟವಾಗಿ ಖಂಡಿಸುವುದಕ್ಕೂ ಅವರು ಹೇಸುವುದಿಲ್ಲ. ಅದನ್ನೇ ಈ ವಚನದಲ್ಲಿ ಕಾಣುತ್ತೇವೆ. ಇದಕ್ಕೂ ಮುಂದೆ ಹೋದ ದಾಸಿಮಯ್ಯನವರು ‘ಅಂಥ ಧರ್ಮಬಾಹಿರ ಭವಿಗಳೊಂದಿಗೆ ಸಂಬಂಧ ಬೆಳೆಸುವುದನ್ನಾಗಲೀ, ಕೂಡಿ ಊಟಮಾಡುವುದನ್ನಾಗಲೀ ಒಪ್ಪುವದಿಲ್ಲ. ಇಂತಹ ಸ್ಥಿತಿಯನ್ನು ಮೀಸಲು ಅಡುಗೆಯನ್ನು ನಾಯಿ ತಿಂದಂತೆ ಆಗುತ್ತದೆಯೆಂದು ಬಣ್ಣಿಸುತ್ತಾರೆ.
ಇಷ್ಠಲಿಂಗದಲ್ಲಿಯೇ ಇಡೀ ವಿಶ್ವವೆಲ್ಲ ತುಂಬಿರುವಾಗ ಅನ್ಯ ನಾಮ ರೂಪಾದಿಗಳನ್ನು ಹೊಂದಿದ ದೈವವನ್ನು ಪೂಜಿಸುವುದು ಹೊಲ್ಲ ಎನ್ನುವದು ಶರಣರ ಆಶಯವಾಗಿತ್ತು ಎಂದು ಬರಗುಂಡಿಯವರು ತಿಳಿಸಿದರು.

ವಚನದೊಂದಿಗೆ ಮಂಗಲವಾಯಿತು. ಪ್ರಾರಂಭದಲ್ಲಿ ಕುಮಾರಿ ದಾನಮ್ಮ ಕುಂದರಗಿ, ಜಯಶ್ರೀ ಬರಗುಂಡಿಯವರು ವಚನ ಪ್ರಾರ್ಥನೆಗೈದರು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಎಲ್ಲರನ್ನು ಸ್ವಾಗತಿಸಿ, ಕೊನೆಯಲ್ಲಿ ಶರಣು ಸಮರ್ಪಣೆಯನ್ನು ಗೈದರು.
ಮಹಾಮನೆ ಕಾರ್ಯಕ್ರಮದಲ್ಲಿ ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಶಿವಾನಂದ ಸಿಂದಗಿ, ಜಿರ್ಲಿ, ಚಂದ್ರಶೇಖರ ತೆಗ್ಗಿ, ಬಸವರಾಜ ಖಂಡಿ, ಪ್ರೊ. ಶಿವಕುಮಾರ ಶೀಪ್ರಿ, ರಾಚಣ್ಣ ಕೆರೂರ, ಸುರೇಖಾ ಗೆದ್ದಲಮರಿ, ದಾಕ್ಷಾಯಣಿ ತೆಗ್ಗಿ, ಚಿಂದಿ ಕುಟುಂಬದರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.