ಪ್ರವಾಸಿ ಮಂದಿರದಿಂದ ಕಲಾಮಂದಿರದವರೆಗೆ ಜಾಥಾ: ವಿದ್ಯಾರ್ಥಿಗಳೊಂದಿಗೆ ಸಂವಾದ
ಮಂಡ್ಯ
ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಸಂಚರಿಸುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ರಥ ಸೆ.25ರಂದು ಮಂಡ್ಯನಗರಕ್ಕೆ ಆಗಮಿಸುತ್ತಿದೆ ಎಂದು ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶಿವಬಸವಸ್ವಾಮೀಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದ ಪ್ರವಾಸಿಮಂದಿರದಿಂದ ಸಾಮರಸ್ಯ ನಡಿಗೆ ರಥಯಾತ್ರೆ ಹೊರಟು ಸಂಜಯವೃತ್ತ, ಮಹಾವೀರ ವೃತ್ತದ ಮೂಲಕ ಕಲಾಮಂದಿರ ತಲುಪಲಿದೆ ಎಂದರು.
ಕಲಾಮಂದಿರದಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರಂಭವನ್ನು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿವಿಧ ಮಠಗಳ ಪೀಠಾದ್ಯಕ್ಷರು ಉದ್ಘಾಟಿಸಲಿದ್ದಾರೆ.

ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದದೇವರು, ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಗಳ ಪೀಠಾಧ್ಯಕ್ಷರು ಹಾಗೂ ಬಸವಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಉಪನ್ಯಾಸ : ಸ್ವರ್ಗ-ನರಕ ಕುರಿತು ಕಲ್ಬುರ್ಗಿಯ ಅಕ್ಕಮಹಾದೇವಿ ಆಶ್ರಮದ ಮಾತೆ ಪ್ರಭುತಾಯಿ ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭೆಯ ಪ್ರದಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ್ ಉಪನ್ಯಾಸ ನೀಡಲಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸಂವಾದ, ಅಪರೂಪದ ಜಂಗಮದೆಡೆಗೆ ನಾಟಕ ನಡೆಯಲಿದ್ದು, ಆಗಮಿಸುವ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ವಿನೂತನ ವಿಶಿಷ್ಟ ಸಮಾರಂಭ ಯಶಸ್ವಿಗೊಳಿಸಲು ಎಲ್ಲಾ ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾದ್ಯಕ್ಷ ಎಂ.ಎಸ್. ಮಂಜುನಾಥ, ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್ ಟ್ರಸ್ಟಿ ಮಲ್ಲಿಕಾರ್ಜುನಯ್ಯ, ಶಿವರುದ್ರಪ್ಪ, ಮೆಣಸಗೆರೆ ಶಿವಲಿಂಗಪ್ಪ, ಎ.ಎಸ್. ತೇಜಸ್, ಸುಂದರ್ ಉಪಸ್ಥಿತರಿದ್ದರು.