ಚಿತ್ರದುರ್ಗ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಕುರಿತು ವಿಚಾರ ಸಂಕಿರಣವನ್ನು ಅಯೋಜಿಸಲಾಗಿತ್ತು.
ಶಿವಯೋಗಿಗಳ ಸಾಮಾಜಿಕ-ಧಾರ್ಮಿಕ ಔನ್ನತ್ಯ ಕುರಿತು ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರ ಮಠ ಮಾತನಾಡಿ, ಮದರ್ ತೆರೇಸಾರವರಂತೆ ಅಥಣಿ ಶಿವಯೋಗಿಯವರು ಕುಷ್ಟರೋಗಿಗಳ ಸೇವೆ ಮಾಡಿದವರು. ಕುಷ್ಟರೋಗಿಗಳಲ್ಲಿ ದೇವರನ್ನು ಕಂಡವರು ಶಿವಯೋಗಿಗಳು, ಎಂದರು.
ಬಸವತತ್ವ ಈ ನಾಡಿನಲ್ಲಿ ಹೆಚ್ಚು ಬೆಳೆಯಲು ಅಥಣಿ ಶಿವಯೋಗಿಗಳ ಕೊಡುಗೆ ಅಪಾರ. ಶರಣರ ವಚನಗಳನ್ನು, ಬಸವಣ್ಣನವರ ವಚನಗಳನ್ನು ಬಹಳ ಗೌರವದಿಂದ ಪಠನ ಮಾಡುತ್ತಿದ್ದರು. ಜನಸಾಮಾನ್ಯರಿಗೆ ೬೩ ಪುರಾತನರ ಬಗ್ಗೆ ವಿಚಾರವನ್ನು ತಿಳಿಸಿ ಕೊಟ್ಟವರಲ್ಲಿ ಮೊದಲಿಗರು ಶಿವಯೋಗಿಗಳು.

ಪ್ರತಿದಿನ ಬಸವಣ್ಣನವರ ವಚನಗಳನ್ನು ಭಕ್ತಿಯಿಂದ ಪಠಿಸುತ್ತಿದರು. ಅಥಣಿ ಶಿವಯೋಗಿಗಳು ದೇವರನ್ನು ಪ್ರತಿ ಜೀವಿಯಲ್ಲಿ, ಸಸ್ಯಗಳಲ್ಲಿ, ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಕಂಡು ರೋಗಿಗಳಿಗೆ, ಬಡವರಿಗೆ, ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯವನ್ನು ಮಾಡುವುದರಲ್ಲಿ ಮೊದಲಿಗರಾಗಿದ್ದರು ಎಂದು ತಿಳಿಸಿದರು.
ಸಾಹಿತಿ ಡಾ. ವಿ.ಎಸ್ ಮಾಳಿಯವರು ಮಾತನಾಡಿ, ಅಥಣಿ ಶಿವಯೋಗಿಗಳ ಶಿಷ್ಯ ಪರಂಪರೆ ಶಿವಯೋಗಿ ಎಂದರೆ ಕೇವಲ ಆಧ್ಯಾತ್ಮಿಕ ಸಾಧನೆ ಮಾತ್ರವಲ್ಲ. ಅದು ಸಮತ್ವದ ಚಿತ್ತ ಸ್ಥಿತಿಯೂ ಹೌದು. ಶಿವಯೋಗಿಗಳ ಶಿಷ್ಯ ಪರಂಪರೆಯ ಕರ್ನಾಟಕದ ಉತ್ತರ ತುದಿಯಿಂದ ಮೊದಲುಗೊಂಡು ದಕ್ಷಿಣದ ಶಂಭುಲಿಂಗನ ಬೆಟ್ಟದವರೆಗೂ ವ್ಯಾಪ್ತಿ ಹರಡಿತ್ತು.
ಶಿವಯೋಗಿಗಳು ತಾವು ಮಠಾಧಿಪತಿಗಳು ಆಗಲಿಲ್ಲ, ಆದರೆ ನೂರಾರು ಸ್ವಾಮಿಗಳನ್ನು ಮಠಾಧಿಪತಿಗಳನ್ನಾಗಿಸಿದರು. ಇದು ನಿಜವಾದ ಶಿವಯೋಗದ ಸಾಧನೆ.

ಶಿವಯೋಗಿಗಳು ಅಪ್ಪಟ ಬಸವ ಅಭಿಮಾನಿಗಳು. ಬಸವತತ್ವದ ನಿಷ್ಠರಾಗಿದ್ದರು. ಗಚ್ಚಿನ ಮಠದಲ್ಲಿ ಭಕ್ತವರ್ಗದ ಬಣಜಿಗ ಮನೆತನದ ಸಿದ್ದಲಿಂಗಪ್ಪಗಳನ್ನು ಮಠಾಧಿಪತಿಗಳನ್ನಾಗಿಸಿದ್ದು ಈ ಕಾಲದಲ್ಲಿ ಒಂದು ಕ್ರಾಂತಿಯೇ ಸರಿ. ಉತ್ತರಕರ್ನಾಟಕದ ಕಡೆ “ವೇದಾಂತ ಬೇಕಿದ್ದರೆ ಹುಬ್ಬಳ್ಳಿಗೆ ಬನ್ನಿ, ಸಿದ್ಧಾಂತ ಬೇಕಿದ್ದರೆ ಅಥಣಿಯ ಶಿವಯೋಗಿಗಳಲ್ಲಿ ಹೋಗಿ” ಎಂದು ಹೇಳುತ್ತಿದ್ದ ವಾಡಿಕೆ ಉಂಟು.
ಮುರುಘಾ ಮಠ ಹಾಗೂ ಎಸ್ಜೆಎಂ ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಜಿಯವರು ಮಾತನಾಡಿ, ಅಥಣಿ ಶಿವಯೋಗಿಗಳ ಕುರಿತು ಜನಸಾಮಾನ್ಯರಿಗೆ ತಲುಪಿಸುವುದು ವಿಚಾರಸಂಕಿರಣದ ಉದ್ದೇಶ. ಪೂಜ್ಯರು ಮನಸ್ಸಿನಲ್ಲಿಯೂ ಹಿಂಸೆಯನ್ನು ಮಾಡದ ಅಹಿಂಸಾ ಪರಮೋಧರ್ಮೀಯಾಗಿದ್ದರು ಎಂದು ನುಡಿದರು.
ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಿಂಪಿ ೨೦ನೇ ಶತಮಾನದ ಪ್ರಾರಂಭದಲ್ಲಿ ಬಸವಣ್ಣ ಎಂದು ಅಥಣಿ ಶಿವಯೋಗಿಗಳನ್ನು ಎಂದು ಕರೆಯುತ್ತಿದ್ದರು, ಎಂದರು.

ಸಾಹಿತಿ ಪ್ರಕಾಶ್ ಗಿರಿಮಲ್ಲನವರ್, ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ. ಬಸವ ಮರುಳ ಸಿದ್ದಸ್ವಾಮಿಗಳು, ಧಾರವಾಡದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು.
ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ.ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು, ನಿಡುಸೂಸಿ ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮಲಿಂಗೇಶ್ವರ ಮಹಾಸ್ವಾಮಿಗಳು. ಇಳಕಲ್ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮಿಗಳು, ಬಸವರಾಜ ದೇವರು
ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಪೂಜ್ಯರು ಅಥಣಿ ಮುರುಘೇಂದ್ರ ಶಿವಯೋಗಿಗಳು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ವಿಚಾರ ಸಂಕಿರಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥಿಸಿ, ಶ್ರೀ ಬಸವ ಮಹಾಂತ ಸ್ವಾಮಿಗಳು ಸ್ವಾಗತಿಸಿ, ನವೀನ ಮಸ್ಕಲ್ ನಿರೂಪಿಸಿದರು.