ಗದಗ
ರಾಜ್ಯದಲ್ಲಿ ಸರಕಾರ ಜಾತಿಗಣತಿ ಪ್ರಾರಂಭಿಸಿದ್ದು, ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡುವುದು ಇದರ ಉದ್ದೇಶವಾಗಿದೆ.
ತರಾತುರಿಯಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಿಂದಾಗಿ ಜನರಲ್ಲಿ, ವಿಶೇಷವಾಗಿ ಲಿಂಗಾಯತರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಸಣ್ಣಸಣ್ಣ ಸಮುದಾಯಗಳು ಲಿಂಗಾಯತ ಧರ್ಮದಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ, ಅಖಂಡ ಲಿಂಗಾಯತ ಸಮಾಜವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಪ್ರತಿಷ್ಠೆಯನ್ನು ಬದಿಗಿರಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾಗಿದೆ.
ಸಂವಿಧಾನದ ಕಲಂ ೨೫ ರ ಪ್ರಕಾರ ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲ ಧರ್ಮಗಳನ್ನು ಮಾನ್ಯ ಮಾಡಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿಯೇ ಜನಗಣತಿ ಫಾರ್ಮದಲ್ಲಿ ೮ನೇ ಕಾಲಂನ ೧೧ನೆಯ ಉಪಕಾಲಂದಲ್ಲಿ ‘ಇತರೆ’ ಎಂದು ಪ್ರತ್ಯೇಕ ಕಾಲಂ ಮೀಸಲಾಗಿರಿಸಿದೆ. ಇಲ್ಲಿ “ಲಿಂಗಾಯತ ಧರ್ಮ” ಎಂದು ಬರೆಯಲು ಗಣತಿದಾರರಿಗೆ ಸೂಚಿಸಬೇಕು. ಹಾಗೆಯೇ ಅವರು ಬರೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಇತ್ತೀಚೆಗೆ ಅನೇಕ ಮಠಾಧಿಪತಿಗಳು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯವರು ಧರ್ಮದ ಕಾಲಂದಲ್ಲಿ ‘ಹಿಂದೂ’ ಎಂದು ಬರೆಸಬಾರದು ಎಂದೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಈ ವಿಷಯವನ್ನು ಲಿಂಗಾಯತರ ವಿವೇಚನೆಗೆ ಬಿಟ್ಟಿರುವುದನ್ನು ಎಲ್ಲರೂ ಗಮನಿಸಿ ೮ನೇ ಧರ್ಮದ ಕಾಲಂದಲ್ಲಿ ‘ಲಿಂಗಾಯತ ಧರ್ಮ’ ಎಂದೇ ಬರೆಸಬೇಕು. ೯ನೇ ಜಾತಿ ಕಾಲಂದಲ್ಲಿ ವೀರಶೈವರು “ವೀರಶೈವ” ಎಂದು, ವೀರಶೈವ ಲಿಂಗಾಯತರು ವೀರಶೈವ ಲಿಂಗಾಯತರೆಂದು, ಲಿಂಗಾಯತದ ಬೇರೆ ಬೇರೆ ಪಂಗಡದವರು ತಮ್ಮ ತಮ್ಮ ಜಾತಿಗಳ ಹೆಸರನ್ನು ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಡುವಕ್ಕಲಿಗ, ಲಿಂಗಾಯತ ಬಣಜಿಗ, ಲಿಂಗಾಯತ ರೆಡ್ಡಿ ಇತ್ಯಾದಿ ಬರೆಸಬೇಕು. ಜಾತಿಗಳಲ್ಲಿ ಉಪಜಾತಿಗಳಿದ್ದರೆ ಉಪಜಾತಿ ಕಾಲಂದಲ್ಲಿ ಅವುಗಳನ್ನು ನಮೂದಿಸಬಹುದು. ಇದರಿಂದ ಲಿಂಗಾಯತರ ಜನಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದು ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.
‘ಲಿಂಗಾಯತ’ ಒಂದು ವಿಶಿಷ್ಟ ಧರ್ಮ. ವಿವಿಧ ಕಾಯಕಗಳನ್ನು ಮಾಡುವ ಪಂಗಡಗಳನ್ನು ಇಂದು ಜಾತಿಗಳೆಂದು ಗುರುತಿಸಲಾಗುತ್ತಿದ್ದರೂ ಎಲ್ಲರಿಗೂ ದೊರೆಯುವ ಸಂಸ್ಕಾರ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಏನೂ ವ್ಯತ್ಯಾಸವಿಲ್ಲ. ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯವಿದೆ.
ಕಾಯಕ-ದಾಸೋಹ ತತ್ವಗಳ ಅಡಿಯಲ್ಲಿ ಈ ಧರ್ಮ ಬಸವಾದಿ ಶರಣರಿಂದ ರೂಪುಗೊಂಡಿದೆ. ಸಮಾನತೆ ಈ ಧರ್ಮದ ಮೂಲ ಆಶಯ. ಸಕಲ ಜೀವಿಗಳಿಗೆ ಲೇಸ ಬಯಸುವುದೇ ಇದರ ಉದ್ದೇಶ. ಈ ಧರ್ಮಾನುಯಾಯಿಗಳು ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಜನಾಂಗ. ಇವರ ಸಂಸ್ಕೃತಿಯೂ ವೈಶಿಷ್ಟ್ಯಪೂರ್ಣ. ಈ ಜನಾಂಗದ ಅಸ್ಮಿತೆ ಕಣ್ಮರೆಯಾಗಬಾರದು. ಈ ಜನಾಂಗ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯವಾಗಿದೆ ಎಂದು ಇದೇ ಸಂದರ್ಭದಲ್ಲಿ ಶ್ರೀಗಳು ಅಭಿಪ್ರಾಯಪಟ್ಟರು.
ಅಭಿಯಾನ ಸಮಾರೋಪ ಸಮಾರಂಭ :
ಸಪ್ಟಂಬರ್ ೧ ರಿಂದ ಬಸವಜನ್ಮಭೂಮಿ ಬಸವನಬಾಗೇವಾಡಿಯಿಂದ ಪ್ರಾರಂಭಗೊಂಡ ‘ಬಸವ ಸಂಸ್ಕೃತಿ ಅಭಿಯಾನವು’ ಬರುವ ಅಕ್ಟೋಬರ ೫ ರಂದು ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದ ಅರಮನೆ ಮೈದಾನದಲ್ಲಿ (ಗಾಯತ್ರಿವಿಹಾರ ಗೇಟ್ ನಂ. ೪) ಬೆಳಿಗ್ಗೆ ೧೧-೦೦ ಗಂಟೆಗೆ ಸಮಾರೋಪಗೊಳ್ಳಲಿದೆ.
ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳನ್ನು ಸುತ್ತಿ ಬಸವಾದಿ ಶರಣರ ತತ್ವಾದರ್ಶಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಅಭಿಯಾನವು ಯಶಸ್ವಿಯಾಗಿದೆ.
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ವಿಶೇಷವಾಗಿ ಭಾಗವಹಿಸುವ ಈ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಎಲ್ಲ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಶ್ರೀಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನ ಸಮಾರೋಪ ಸಮಾರಂಭಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಮತ್ತು ಬಸವಾನುಯಾಯಿಗಳಿಗೆ ಸಿದ್ಧಗಂಗಾ ಕ್ಷೇತ್ರದಲ್ಲಿ ಸ್ನಾನಾದಿ ಕ್ರಿಯೆಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರ್ನಾಟಕದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪರವಾಗಿ ಶ್ರೀಗಳು ಕರೆಕೊಟ್ಟಿದ್ದಾರೆ.