ಅಭಿಯಾನ ಅನುಭವ: ಕೊಪ್ಪಳದ 31 ವಾರ್ಡುಗಳ ಮನೆ ಮನೆಯಲ್ಲಿ ಪ್ರಚಾರ

ಕೊಪ್ಪಳ

(ವಿವಿಧ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ. ಕೊಪ್ಪಳ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತ ಕಲ್ಮಂಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.)

1) ಅಭಿಯಾನಕ್ಕೆ ಸಜ್ಜಾಗಿದ್ದು ಹೇಗೆ, ಜನರನ್ನು ಸಂಘಟಿಸಿದ್ದು ಹೇಗೆ?

ಮೊಟ್ಟಮೊದಲು ಈ ವಿಚಾರವು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಲ್ಲಿ ಚರ್ಚೆಯಾದ ನಂತರ, ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯು ಆಯಾ ಜಿಲ್ಲಾ ಸಮಿತಿಗಳಿಗೆ ಪತ್ರವನ್ನು ಬರೆದು ಮಠಾಧಿಪತಿಗಳ ಒಕ್ಕೂಟದಿಂದ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿಗಳನ್ನು ನೀಡಲಾಗಿತ್ತು. ಅದರಂತೆ ನಾವುಗಳು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ, ತಾಲೂಕು ಸಮಿತಿಗಳ ಹಾಗೂ ಜಿಲ್ಲಾ ಮತ್ತು ತಾಲೂಕು ಮಹಿಳಾ ಘಟಕಗಳ ಹಾಗೂ ಯುವ ಘಟಕಗಳ ಸಭೆಯನ್ನು ಕರೆದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯಿಂದ ಬಂದ ಪತ್ರದ ಬಗ್ಗೆ ಮಾಹಿತಿ ನೀಡಿ ನಮ್ಮ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದೆವು.

ನಂತರ ಎಲ್ಲ ಬಸವಪರ ಸಂಘಟನೆಗಳ ಮುಖಂಡರ ಹಾಗೂ ಲಿಂಗಾಯತ ಒಳಪಂಗಡಗಳ ಎಲ್ಲಾ ಮುಖಂಡರ ಜಿಲ್ಲಾಮಟ್ಟದ ಸಭೆಯನ್ನು, ಉಸ್ತುವಾರಿ ಪೂಜ್ಯರ ನೇತೃತ್ವದಲ್ಲಿ ಕರೆದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವನ್ನು ನಮ್ಮ ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಹಾಗೂ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿಕೊಳ್ಳಲಾಯಿತು.

ಹಾಗೂ ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲಾ ಮಠಗಳ ಸ್ವಾಮೀಜಿಗಳಿಗೆ ಭೇಟಿ ಮಾಡಿ , ಬಸವ ಸಂಸ್ಕೃತಿ ಅಭಿಯಾನ ಜಿಲ್ಲಾ ಸಮಿತಿಯಿಂದ ಪತ್ರವನ್ನು ನೀಡಿ ಕೊಪ್ಪಳದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸುವುದಲ್ಲದೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಲಾಯಿತು.

ನಂತರದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದಲ್ಲಿ ಬಸವ ಸಂಘಟನೆಗಳ ಹಾಗೂ ಲಿಂಗಾಯತ ಒಳಪಂಗಡಗಳ ಮುಖಂಡರ ಸಭೆಯನ್ನು ಕರೆದು ಬಸವ ಸಂಸ್ಕೃತಿ ಅಭಿಯಾನದ ಕರಪತ್ರಗಳನ್ನು ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ತನು ಮನ ಧನದಿಂದ ಸಹಕರಿಸಲು ಕರೆ ನೀಡಲಾಯಿತು.

ಕೊಪ್ಪಳ ನಗರದ ಎಲ್ಲಾ 31 ವಾರ್ಡುಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಯಿತು.

2) ಜನರಿಂದ ನೆರವು / ಸ್ಪಂದನೆ (ತನು, ಮನ, ಧನ) ಹೇಗಿತ್ತು?

ಜನರಿಂದ, ಬಸವ ಸಂಘಟನೆಗಳಿಂದ ಹಾಗೂ ಲಿಂಗಾಯತ ಒಳಪಂಗಡಗಳ ಮುಖಂಡರಿಂದ ಉತ್ತಮ ರೀತಿಯ ಸ್ಪಂದನೆ ಹಾಗೂ ತನು ಮನ ಧನದಿಂದ ಸಹಕಾರ ನೀಡಿದರು.

3) ಅಭಿಯಾನದ ಬಗ್ಗೆ ಅವರ ನಿರೀಕ್ಷೆ ಏನಿತ್ತು?

ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಮಠಾಧೀಶರ ಒಕ್ಕೂಟದ ಪರಿಕಲ್ಪನೆ ತುಂಬಾ ಚೆನ್ನಾಗಿತ್ತು.

ಬೆಳಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದ, ಸಂಜೆ ಬಸವರಥ ಮತ್ತು ಕಲಾತಂಡಗಳೊಂದಿಗೆ ಮೆರವಣಿಗೆ, ನಂತರ ಸಾರ್ವಜನಿಕ ಸಮಾರಂಭ ನಂತರ ನಾಟಕ ಪ್ರದರ್ಶನ ಇದ್ದುದರಿಂದ ಎಲ್ಲಾ ನಾಗರಿಕರು ಈ ಕಾರ್ಯಕ್ರಮಗಳಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿ ಆನಂದಿಸಿದರು.

ಮುಖ್ಯ ಉಪನ್ಯಾಸಕರಿಗೆ ಸಮಯ ಸಾಲದು ಎನಿಸಿತು.

4) ನಿಮ್ಮ ನಿರೀಕ್ಷೆಗೆ ತಕ್ಕಂತೆ ಅಭಿಯಾನ ನಡೆಯಿತೆ?

ಹೌದು ನಡೆಯಿತು

5) ಅಭಿಯಾನದಲ್ಲಿ ನಿಮ್ಮ ಗಮನ ಸೆಳೆದ ಅಂಶಗಳೇನು?

ಗಮನ ಸೆಳೆದ ಅಂಶಗಳೇನೆಂದರೆ ಇಂದಿನ ಯುವಜನ, ವಿದ್ಯಾರ್ಥಿಗಳಿಗೆ ಬಸವಾದಿ ಶರಣರ ವಚನಗಳ ಮೂಲಕ ವಿಚಾರಗಳನ್ನು ತಿಳಿಸುವುದು ಹಾಗೂ ಅವರಲ್ಲಿರುವ ಗೊಂದಲ ಮತ್ತು ಸಮಸ್ಯೆಗಳಿಗೆ ಉತ್ತರಗಳನ್ನು ನೀಡುವುದು.

ಜಗತ್ತಿಗೆ ಅಮೂಲ್ಯವಾದ ಸಂದೇಶವನ್ನು ನೀಡಿದ ಬಸವಾದಿ ಶರಣರ ಭಾವಚಿತ್ರಗಳೊಂದಿಗೆ ಹಾಗೂ ಕಲಾತಂಡಗಳೊಂದಿಗೆ ಜಯಘೋಷ ಹಾಗೂ ಅವರ ನಾಮ ಸ್ಮರಣೆ ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು.

ಬಸವಾದಿ ಶರಣರ ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳಿಂದ ಎರಡು ವಿಷಯಗಳ ಬಗ್ಗೆ ಮುಖ್ಯ ಉಪನ್ಯಾಸ ಏರ್ಪಡಿಸಿದ್ದು.

ಉಪನ್ಯಾಸ ಹಾಗೂ ಮಾತುಗಳಿಂದ ಜನರ ಮೇಲೆ ಆಗುವ ಪರಿಣಾಮಕ್ಕಿಂತ ಹೆಚ್ಚಾಗಿ ನಾಟಕ ಪ್ರದರ್ಶನಗಳ ಮೂಲಕ ಶರಣರ ವಿಚಾರಗಳು ಅತ್ಯಂತ ಪ್ರಭಾವ ಬೀರುವುದರಿಂದ ಅತ್ಯುತ್ತಮ ನಿರ್ದೇಶನದ ಮತ್ತು ವಸ್ತು ವಿಷಯಗಳನ್ನು ಒಳಗೊಂಡ ‘ಜಂಗಮದೆಡೆಗೆ’ ನಾಟಕವನ್ನು ಸಾಣೆಹಳ್ಳಿಯ ಶಿವಸಂಚಾರ ಕಲಾತಂಡ ಮನೋಜ್ಞವಾಗಿ ಅಭಿನಯಿಸಿದ್ದು.

6) ಅಭಿಯಾನದಲ್ಲಿ ಸಮಾಜಕ್ಕೆ ಬಂದ ಸಂದೇಶಗಳೇನು?

ಈ ಎಲ್ಲ ಕಾರ್ಯಕ್ರಮಗಳ ಮೂಲಕ ಬಸವಾದಿ ಶರಣರು ಜಗತ್ತಿಗೆ ಕೊಟ್ಟಿರುವ ಅಮೂಲ್ಯ ವಿಚಾರಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಟ್ಟಂತಾಯಿತು.

ಈ ಕಾರ್ಯಕ್ರಮದ ಮೂಲಕ ಎಲ್ಲ ಬಸವಾಭಿಮಾನಿಗಳು, ಬಸವಭಕ್ತರನ್ನು ಒಂದೆಡೆ ಸೇರಿಸಲು ಸಾಧ್ಯವಾಯಿತು

7) ಅಭಿಯಾನ ಜನರ ಮೇಲೆ, ಬಸವ ಸಂಘಟನೆಗಳ ಮೇಲೆ ಮಾಡಿರುವ ಪರಿಣಾಮವೇನು?

ಅಭಿಯಾನದ ಕಾರ್ಯಕ್ರಮಗಳು ಜನರ ಮೇಲೆ ಉತ್ತಮ ಪರಿಣಾಮವನ್ನು ಉಂಟು ಮಾಡಿವೆ, ಸಂತೋಷವನ್ನು ನೀಡಿವೆ ಹಾಗೂ ಉತ್ಸಾಹ ಮತ್ತು ಭರವಸೆಯನ್ನು ಮೂಡಿಸಿವೆ.

8) ಅಭಿಯಾನದಲ್ಲಿ ಮಠಾಧೀಶರ ಒಕ್ಕೂಟದ, ಬಸವ ಸಂಘಟನೆಗಳ ಸಹಯೋಗ ಹೇಗಿತ್ತು?

ಅಭಿಯಾನದಲ್ಲಿ ಮಠಾಧೀಶರ ಒಕ್ಕೂಟ ಹಾಗೂ ಬಸವ ಸಂಘಟನೆಗಳ ಸಹಯೋಗ ತುಂಬಾ ಚೆನ್ನಾಗಿತ್ತು.

ಮಠಾಧೀಶರ ಒಕ್ಕೂಟ ರಚನೆಯಾಗಿರುವುದೇ ಬಸವಾಭಿಮಾನಿಗಳಲ್ಲಿ ಹಾಗೂ ಬಸವ ಸಂಘಟನೆಗಳಲ್ಲಿ ಅತ್ಯಂತ ಸಂತೋಷವನ್ನು ಉಂಟು ಮಾಡಿದೆ.

ಮಠಾಧೀಶರ ಒಕ್ಕೂಟದ ಮೇಲೆ ಬಹುದೊಡ್ಡ ನಿರೀಕ್ಷೆಗಳಿವೆ ಎಲ್ಲಾ ಲಿಂಗಾಯತ ಮಠಗಳನ್ನು ಎಲ್ಲಾ ಬಸವ ಸಂಘಟನೆಗಳನ್ನು ಒಂದು ಸರಪಳಿಯಂತೆ ಜೋಡಿಸಿ ಸಮನ್ವಯತೆಯಿಂದ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ಇದೆ.

ಹಲವಾರು ವಿರಕ್ತ ಮಠಗಳು ಯಾವುದೋ ಕಾರಣಗಳಿಗಾಗಿ ಬಸವತತ್ವದಿಂದ ವಿಮುಖವಾಗುತ್ತಿರುವ ಇಂದಿನ ದುರಿತ ಕಾಲದಲ್ಲಿ, ಆಯಾ ಮಠಗಳ ಮಠಾಧೀಶರನ್ನು ಸಂಪರ್ಕಿಸಿ, ಅವರೊಂದಿಗೆ ಚರ್ಚಿಸಿ, ಭರವಸೆಯನ್ನು ಮೂಡಿಸಿ ಅವರ ಬದ್ಧತೆಯನ್ನು ಮತ್ತಷ್ಟು ಖಾತ್ರಿಪಡಿಸಬೇಕಾಗಿದೆ.

ವಿಶೇಷವಾಗಿ ಎಲ್ಲಾ ಕಾಯಕ ಸಮುದಾಯದ ಗುರುಪೀಠದ ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಅತ್ಯಂತ ಪ್ರೀತಿಯಿಂದ ಕಂಡು ಸದಾಕಾಲ ಆ ಸಮಾಜಕ್ಕೆ ಭರವಸೆಯನ್ನು ತುಂಬುವ ಮೂಲಕ ಅವರ ಮನಸ್ಸಿನಲ್ಲಿ ಬಸವ ಪ್ರಜ್ಞೆಯನ್ನು ಲಿಂಗಾಯತತ್ವವನ್ನು ಗಟ್ಟಿಯಾಗಿ ಪ್ರತಿಷ್ಠಾಪಿಸಬೇಕಾಗಿದೆ.

9) ಮುಂದಿನ ವರ್ಷ ಮತ್ತೆ ಅಭಿಯಾನ ಮಾಡಿದರೆ ಹೇಗೆ ಸುಧಾರಿಸಬಹುದು?

1) ರಾಜ್ಯದ್ಯಂತ ಇರುವ ಎಲ್ಲಾ ಬಸವಪರ ಸಂಘಟನೆಗಳಿಗೆ ಮಠಾಧೀಶರ ಒಕ್ಕೂಟವು ಪತ್ರವನ್ನು ಬರೆಯಬೇಕು

2) ಎಲ್ಲಾ ರಾಜ್ಯಮಟ್ಟದ ಬಸವಪರ ಸಂಘಟನೆಗಳು ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡಲು ತಮ್ಮ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಪತ್ರವನ್ನು ಬರೆಯಬೇಕು.

3) ರಾಜ್ಯಾದ್ಯಂತ ಇರುವ ಲಿಂಗಾಯತ ಕಾಯಕ ಸಮುದಾಯಗಳ/ ಒಳಪಂಗಡಗಳ ರಾಜ್ಯಮಟ್ಟದ ಸಂಘಟನೆಗಳ ಮುಖಂಡರಿಗೆ ಪತ್ರವನ್ನು ಬರೆಯಬೇಕು.

4) ರಾಜ್ಯದ್ಯಂತ ಇರುವ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಎಲ್ಲಾ ಪ್ರಗತಿಪರ ಸಂಘಟನೆಗಳ, ಕಾರ್ಮಿಕ ಸಂಘಟನೆಗಳ ಮುಖ್ಯಸ್ಥರಿಗೆ ಪತ್ರವನ್ನು ಬರೆಯಬೇಕು.

5) ರಾಜ್ಯದ ಎಲ್ಲಾ ಶಾಸಕರು, ಸಚಿವರಿಗೆ ಹಾಗೂ ಎಲ್ಲಾ ಪಕ್ಷದ ಜಿಲ್ಲಾಧ್ಯಕ್ಷರಿಗೆ ಪತ್ರವನ್ನು ಬರೆಯಬೇಕು.

6) ಸಾಧ್ಯವಾದಲ್ಲಿ ಮಠಾಧಿಪತಿಗಳ ಒಕ್ಕೂಟವು ಅವರನ್ನು ಸಂಪರ್ಕಿಸಿ ಮಾತನಾಡಬೇಕು.

7) ಪ್ರತಿಯೊಂದು ಜಿಲ್ಲೆಗೂ ಮಠಾಧೀಶರ ಒಕ್ಕೂಟವು ಒಬ್ಬೊಬ್ಬ ಮಠಾಧೀಶರಿಗೆ ಉಸ್ತುವಾರಿಯನ್ನು ಹಂಚಿಕೆ ಮಾಡಬೇಕು ಹಾಗೂ ಅವರ ನೇತೃತ್ವದಲ್ಲಿ ಸಭೆಗಳನ್ನು ನಡೆಸಬೇಕು( ಈ ಸಾರಿ ಮಾಡಿದಂತೆ).

8) ಪ್ರತಿಯೊಂದು ಜಿಲ್ಲೆಯಲ್ಲಿಯೂ ಎಲ್ಲ ಕಾಯಕ ಸಮುದಾಯಗಳ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಮುಖ್ಯಸ್ಥರನ್ನೊಳಗೊಂಡು ಸಮಿತಿಯನ್ನು ರಚನೆ ಮಾಡಲು ಕಡ್ಡಾಯವಾಗಿ ಸೂಚನೆಯನ್ನು ನೀಡಬೇಕು.

9) ಎಲ್ಲ ಜಿಲ್ಲೆಗಳಿಗೂ ಒಂದೇ ರೀತಿಯಾದ ಕಾರ್ಯಕ್ರಮದ ಅಜೆಂಡಾವನ್ನು ನೀಡಬೇಕು (ಸಮಯಕ್ಕೆ ಅನುಸಾರವಾಗಿ)

10) ಮುಖ್ಯ ಉಪನ್ಯಾಸಕರ ಸಮಯವನ್ನು ಕನಿಷ್ಠ 30 ನಿಮಿಷಗಳಾದರೂ ನೀಡಬೇಕು.

11) ಆಯಾ ಜಿಲ್ಲೆಗೆ ಮಠಾಧಿಪತಿಗಳ ಒಕ್ಕೂಟದಿಂದ ಆಗಮಿಸುವ ಪೂಜ್ಯರ ಮಾಹಿತಿಯನ್ನು (ವಾಸ್ತವ್ಯಕ್ಕಾಗಿ ಹಾಗೂ ಆಮಂತ್ರಣ ಪತ್ರಿಕೆಗಾಗಿ) ಮುಂಚಿತವಾಗಿ ನೀಡಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *