ಬಸವಕಲ್ಯಾಣ
ಪಟ್ಟಣದಲ್ಲಿ ಶುಕ್ರವಾರ ನಡೆದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಂಭಾಪುರಿ ಪೀಠವು ಹಿಂದೂ ಧರ್ಮ ಸಂರಕ್ಷಣೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ’ ಎಂದು ಹೇಳಿದರು.
`ಹಿಂದೂ ಧರ್ಮದ ಕೌಟುಂಬಿಕ ಮತ್ತು ಆಹಾರ ಪದ್ಧತಿ ಶ್ರೇಷ್ಠವಾದದ್ದು. ಹಿಂದೂ ಸಂಸ್ಕೃತಿ ಸಂವರ್ಧಿಸಲಿ ಎಂಬ ಧ್ಯೇಯೋದ್ದೇಶದಿಂದ ರಂಭಾಪುರಿ ಶ್ರೀಗಳು ಶ್ರಮಿಸುತ್ತಿದ್ದಾರೆ.
ಬಸವಣ್ಣನವರು ದಯವೇ ಧರ್ಮದ ಮೂಲವೆಂದರು. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ಪಂಚಪೀಠಗಳ ಘೋಷವಾಕ್ಯವಾಗಿದೆ. ಇದರಲ್ಲಿ ‘ಸರ್ವೇಜನಾಃ ಸುಖಿನೋಭವಂತು’ ಎಂಬ ಭಾರತೀಯ ಭವ್ಯ ಪರಂಪರೆ ಪ್ರತಿಬಿಂಬಿತವಾಗಿದೆ. ಶಿವ ಮತ್ತು ಐಕ್ಯಕ್ಕೆ ಮಹತ್ವ ನೀಡುವ ರೇಣುಕಾಚಾರ್ಯರ ಸಂದೇಶ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಇದ್ದು ಅದನ್ನು ಎಲ್ಲರೂ ಅನುಸರಿಸಬೇಕು’ ಎಂದರು.
`ಆದರೆ, ಕೆಲವರಿಂದ ಭಾಷೆ, ಜಾತಿ, ಪ್ರಾದೇಶಿಕತೆಯ ಆಧಾರದಲ್ಲಿ ಧರ್ಮ ಒಡೆಯುವ ಷಡ್ಯಂತ್ರ ನಡೆಯುತ್ತಿದೆ. ಹಿಂದೆ ದುರ್ಬಲ ಆರ್ಥಿಕ ವ್ಯವಸ್ಥೆ ಇತ್ತು. ಆದರೆ, ಈಗ ನಮ್ಮೆಲ್ಲರ ಪ್ರಯತ್ನದಿಂದ ವಿಶ್ವದ ನಾಲ್ಕನೇಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ದೇಶ ಹೊರಹೊಮ್ಮಿದೆ. ಇದು ಕೆಲವರಿಗೆ ಹಿಡಿಸುತ್ತಿಲ್ಲ’ ಎಂದರು.
ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಆಚಾರ್ಯ ಪರಂಪರೆ ಮತ್ತು ಶರಣ ಸಂಸ್ಕೃತಿ ಬೇರೆ ಬೇರೆ ಆಗಿರಬಾರದು. ಪಂಚಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ, ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸು ಬಯಸುವವರಾಗಿದ್ದಾರೆ. ಎರಡೂ ತತ್ವಗಳು ಒಂದೇ ಆಗಿವೆ.
ಸಮಾಜ ಒಡೆಯುವ ಸಂಚು
`ಸಮೀಕ್ಷೆ ಹೆಸರಲ್ಲಿ ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯ ತಂದು ವೀರಶೈವ ಲಿಂಗಾಯತ ಸಮಾಜ ಒಡೆಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬುದನ್ನು ಸಮಾಜ ಬಾಂಧವರು ಗಂಭೀರವಾಗಿ ಪರಿಗಣಿಸಬೇಕು’ ಎಂದು ಬಾಳೆ ಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದ್ದಾರೆ.
`ವೀರಶೈವ ಲಿಂಗಾಯತ ಒಂದೇ ಆಗಿದೆ. ಈ ಧರ್ಮ ಸ್ವತಂತ್ರ ಧರ್ಮ ಆಗಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ಹಲವಾರು ಸಲ ನಾವು ಪ್ರಯತ್ನಿಸಿದ್ದೇವೆ. ದೊಡ್ಡ ಸಮಾವೇಶಗಳನ್ನು ಆಯೋಜಿಸಿದ್ದೇವೆ. ಅದರಲ್ಲಿ ಗುರು-ವಿರಕ್ತರು ಪಾಲ್ಗೊಂಡಿದ್ದರೂ ನಮ್ಮ ಉದ್ದೇಶ ಈಡೇರಲಿಲ್ಲ. ಬೆರಳೆಣಿಕೆಯ ಜನ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ,’ ಎಂದು ಹೇಳಿದರು.
ಶಾಸಕ ಶರಣು ಸಲಗರ, ಪ್ರಭು ಚವ್ಹಾಣ್, ಬಿಚಕುಂದ ಸೋಮಲಿಂಗ ಶಿವಾಚಾರ್ಯರು, ಶಿವಪ್ರಕಾಶ ಶಿವಾಚಾರ್ಯರು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪ್ರೊ.ರುದ್ರೇಶ್ವರಸ್ವಾಮಿ ಗೋರಟಾ, ರಮೇಶ ಶಿವಪುರ ಮಾತನಾಡಿದರು.
ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ, ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಪ್ರಕಾಶ ಖಂಡ್ರೆ, ಪ್ರದೀಪ ವಾತಡೆ ಉಪಸ್ಥಿತರಿದ್ದರು.
ತುಂಬಾ ಒಳ್ಳೆಯದು. ಅವರು ಲಿಂಗಾಯತರನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಧರ್ಮವಲ್ಲ ಧರ್ಮ “ಹಿಂದೂ” ಧರ್ಮವನ್ನು ಸಂರಕ್ಷಣೆ ಮಾಡಲಿ. ಅವರ ಈ ಕಾರ್ಯ ನಿಮ್ಮೆಲ್ಲರ ಮಾರ್ಗದರ್ಶನದಿಂದ ಯಶಸ್ವಿಯಾಗಲಿ, ಆದರೆ, ಲಿಂಗಾಯತರನ್ನು ಹೊರತುಪಡಿಸಿ ಹಿಂದೂ ಧರ್ಮದ ಸಂರಕ್ಷಣೆ ಮಾಡಲಿ. ಅವರಿಗೆ ಯಶಸ್ಸು ಸಿಗಲಿ