ಬೀದರ್
ಮಾಜಿ ಸಂಸದ ಪ್ರತಾಪ ಸಿಂಹ ಅವರು ಲಿಂಗಾಯತ ಕಾವಿಧಾರಿಗಳೇ ನಿಮ್ಮ ದೇವರು ಯಾರೆಂದು ಕೇಳಿದ್ದಾರೆ. ಅಯೋಗ್ಯ ಎಂಬ ಕಾರಣಕ್ಕೆ ಪ್ರತಾಪ್ ಸಿಂಹರಿಗೆ ಅವರ ಪಕ್ಷ ಟಿಕೆಟ್ ನೀಡಿಲ್ಲ, ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ತಿಳಿಸಿದರು.
ಶಾಸಕ ಬಸವನಗೌಡ ಯತ್ನಾಳ ಲಿಂಗಾಯತ ಗುರುಗಳ ಮೇಲೆ ಕೂಡ ಹಗುರವಾಗಿ ಮಾತನಾಡಿದ್ದಾರೆ. ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವ ಇವರ ಬಾಯಿ ಬಚ್ಚಲ ಮೊರೆಯಾಗಿದೆ, ಎಂದು ಟೀಕಿಸಿದರು.
ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಬಿಜೆಪಿಯ ಲಿಂಗಾಯತ ಮುಖಂಡರಿಗೆ ತಾಕತ್ತಿದ್ದರೆ ಎಲ್ಲರನ್ನೂ ಒಂದು ಕಡೆಗೆ ಸೇರಿಸಿ ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಯನ್ನು ಬೆಂಬಲಿಸಬೇಕು. ಆಗ ಸಂಘ ಪರಿವಾರದವರು ಮತ್ತು ಪಂಚ ಪೀಠಾಧೀಶ್ವರರು ಗಡಗಡ ನಡುಗುತ್ತಾರೆ.
ಬಿಜೆಪಿಯಲ್ಲಿರುವ ಲಿಂಗಾಯತ ಮುಖಂಡರು ಲಿಂಗಾಯತರ ವೇದಿಕೆಯಲ್ಲಿ ಲಿಂಗಾಯತ ಎನ್ನುತ್ತಾರೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಣತಿಯಂತೆ ಮಾತನಾಡುತ್ತಾರೆ. ಜಾತಿವಾರು ಸಮೀಕ್ಷೆಯಲ್ಲಿ ಲಿಂಗಾಯತ ಬರೆಸಬೇಕು ಎಂಬುದನ್ನು ಹೇಳುವುದು ಬಿಟ್ಟು ಹಿಂದೂ ಬರೆಸಲು ಹೇಳುತ್ತಿದ್ದಾರೆ. ಇವರ ದ್ವಂದ್ವ ನಡೆ ಖಂಡನಾರ್ಹ.
ಸಂಘ ಪರಿವಾರದವರು, ಪಂಚ ಪೀಠಾಧೀಶ್ವರರು ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಬೇಡಿಕೆಗೆ ವಿರೋಧಿಸಬಾರದು. ದ್ವೇಷ ಮೂಡಿಸುವ ಕೆಲಸ ಮಾಡಬಾರದು. ವೈಜ್ಞಾನಿಕ ತಳಹದಿ ಮೇಲೆ ಬಸವಾದಿ ಶರಣರು ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ,’ ಎಂದು ಹೇಳಿದರು.
ಜಾತಿವಾರು ಸಮೀಕ್ಷೆಯಲ್ಲಿ ಧರ್ಮದ ಇತರೆ ಕಾಲಂನಲ್ಲಿ ಲಿಂಗಾಯತರು ಲಿಂಗಾಯತ ಧರ್ಮ ಎಂದು ಬರೆಸಬೇಕು. ಜಾತಿ ಕಾಲಂನಲ್ಲಿ ಅವರವರ ಜಾತಿ ಹೆಸರು ಬರೆಸಬೇಕು,’ ಎಂದು ಮನವಿ ಮಾಡಿದರು.