ಹಿರಿಯರಿಲ್ಲದ ಮನೆ-ಗುರುವಿಲ್ಲದ ಮಠ ಶೋಭೆ ತರದು: ಪ್ರೊ. ಶಿವರಾಜ ಪಾಟೀಲ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಹಿರಿಯರು ಇರುವ ಮನೆ ಸದ್ವಿಚಾರ, ಸದ್ಗುಣಗಳಿರುವ ತಾಣ. ಶಿಸ್ತು, ಸಂಯಮ, ಸಂಪ್ರದಾಯ ಸಂಸ್ಕೃತಿಯನ್ನು ಬೆಳೆಸುವ ಹಿರಿಯರು ಕುಟುಂಬಕ್ಕೆ ಕಲಶಪ್ರಾಶ ಎಂದು ಕಲಬುರಗಿ ಮಹಾಂತ ಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಿವರಾಜ ಪಾಟೀಲ ಹೇಳಿದರು.

ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಐದನೇ ದಿನ ಶುಕ್ರವಾರ ನಡೆದ ಹಿರಿಯ ನಾಗರಿಕರ ಸಮಾವೇಶದಲ್ಲಿ ಜೀವನಕ್ಕೆ ಹಿರಿಯ ನಾಗರಿಕರ ಪ್ರೇರಣದಾಯಕ ಭಾವ-ನಿರ್ಭಾವ ಕುರಿತು ಮಾತನಾಡಿದರು.

ಹಿರಿಯರಿಲ್ಲದ ಮನೆ, ಗುರುವಿಲ್ಲದ ಮಠ ಶೋಭೆ ತರುವುದಿಲ್ಲ. ಹಿರಿಯರ, ತಂದೆ-ತಾಯಿಯರ ಪ್ರೀತಿ ಸಿಗಲಾರದ ಮಕ್ಕಳು ಹೆಚ್ಚಾಗಿ ಕ್ರಿಮಿನಲ್‌ಗಳಾಗಿ ಬೆಳೆಯುತ್ತಾರೆ. ಹಿರಿಯರ ಜ್ಞಾನ ಅನುಭವ ಏನು ಎಂಬುದನ್ನು ಕಿರಿಯರು ಕೇಳಿಸಿಕೊಳ್ಳಬೇಕು.

ಮೂಲಭೂತವಾದ ಕುಟುಂಬಗಳಲ್ಲಿ ಕಲಹದಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದ್ದು, ಮಕ್ಕಳಿದ್ದು ಹೆತ್ತವರು ವೃದ್ಧಾಶ್ರಮಕ್ಕೆ ಸೇರುತ್ತಿರುವುದು ಸಮಾಜದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದ್ದು, ಸಂಸ್ಕಾರ ಭರಿತವಾದ ಮನಸ್ಸಿನಿಂದ ಇನ್ನೊಬ್ಬರನ್ನು ಗೌರವದಿಂದ ಆದರದಿಂದ ಕಾಣಬಹುದು ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಹಿರಿಯ ಉಪಾಧ್ಯಕ್ಷರಾದ ಬಸವರಾಜ ಬುಳ್ಳಾ ಮಾತನಾಡಿ, ಬಸವಣ್ಣನೇ ನಮ್ಮ ಧರ್ಮಗುರು, ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ. ನಾವೆಲ್ಲರೂ ಏಕದೇವೋಪಾಸಕರಾಗಬೇಕು. ಜಗತ್ತಿನಲ್ಲಿಯೇ ಸ್ತ್ರೀಯರ ಸಲುವಾಗಿ ತ್ಯಾಗ ಮಾಡಿದ ವ್ಯಕ್ತಿ ಬಸವಣ್ಣನವರು.

ಅಂಗ-ಲಿಂಗ ಒಂದಾಗುವುದೇ ಸಾಮರಸ್ಯ. ಲಿಂಗಾಯತ ಧರ್ಮ ಪ್ರತ್ಯೇಕ ಸ್ವತಂತ್ರ ಧರ್ಮವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ನಿರ್ಭಯವಾಗಿ ಲಿಂಗಾಯತ ಎಂದು, ಉಪಜಾತಿ ಕಾಲಂನಲ್ಲಿ ತಮ್ಮ ಕಾಯಕ ಅಥವಾ ಉಪಪಜಾತಿ ನಮೂದಿಸಿರಿ ಎಂದರು.

ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪೂರೆ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ನಾಗರಿಕರು ನಮ್ಮ ಬೌದ್ಧಿಕ ಸಂಪತ್ತು. ಅವರಿಗೆ ದೀರ್ಘ ಕೆಲಸದ ಅನುಭವ, ಉತ್ತಮ ದೃಷ್ಟಿಕೋನ, ಯೋಜನಾ ಕೌಶಲ್ಯ ಮತ್ತು ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸಲು ಸಾಕಷ್ಟು ಹೆಚ್ಚುವರಿ ಸಮಯವಿದೆ. ಹಿರಿಯರನ್ನು ಕುಟುಂಬದಲ್ಲಿ ತಿರಸ್ಕಾರ ಭಾವದಿಂದ ಕಾಣದೆ ಯಜಮನಾರಾಗಿ ಕಾಣಬೇಕು ಎಂದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಒಳ್ಳೆಯ ಸಂಸ್ಕಾರ ಶರಣರ ಸಂಗ ಗುರು ಹಿರಿಯರ ಮೇಲಿನ ಭಕ್ತಿ ಗೌರವ ಆಚಾರ ವಿಚಾರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಹಿರಿಯರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಶರಣರ ಮಾರ್ಗದರ್ಶನ ನಡೆ ನುಡಿ ವಚನಗಳು ಆಚಾರ ವಿಚಾರಗಳು ಎಂದೆಂದಿಗೂ ಪ್ರಸ್ತುತ ಎಂದರು.

ಬಸವ ಧರ್ಮ ಪೀಠದ ಪೂಜ್ಯ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು.

ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಬಿರಾದಾರ ಸಿರಗಾಪೂರ ಉದ್ಘಾಟಿಸಿ ಮಾತನಾಡಿದರು. ಜಿ.ಆರ್. ಪಾಟೀಲ, ಗುರುಪಾದಪ್ಪ ಪಾಟೀಲ, ವೈಜನಾಥ ಹಳ್ಳೆಖೇಡೆ, ದೇವಿಂದ್ರಪ್ಪ ಗುಣತೂರೆ, ಬಸವರಾಜ ನರಶೆಟ್ಟಿ, ಶಿವಪುತ್ರಪ್ಪ ಅವಸೆ, ರಾಜಶೇಖರ ಬಿರಾದಾರ, ಚಂದ್ರಪ್ಪ ಬಿರಾದಾರ, ಸುಲೋಚನಾ ಮಾಮಾ, ಗಂಗಮ್ಮ ಕೋಳಕೂರ, ಮಂಠಾಳದ ಚಂದ್ರಕಾಂತ ಝಂಝಾ, ಧನರಾಜ ಸಾತಬಾಯಿ, ಶಕುಂತಲಾ ಕರಣೆ, ಅಚಿಜಲಿ ಬಾಲಿಕಿಲೆ, ಸವಿತಾ ಬಾಲಿಕಿಲೆ, ಚಂಪಾವತಿ ಮಹಾಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಂಕರ ಕರಣೆ ಸ್ವಾಗತಿಸಿದರೆ, ಲೀಲಾ ಸಂಕಳ್ಳಿ ನಿರೂಪಿಸಿದರು. ಝೀ ಟಿ.ವಿ. ಸರಿಗಮಪ ೨೧ನೇ ವಿಜೇತೆ ಶಿವಾನಿ ಶಿವದಾಸ ಸ್ವಾಮಿ ತಂಡದವರಿಂದ ನಡೆದ ವಚನ ಗಾಯನ ಸೇರಿದ ಜನರ ಮನಸೂರೆಗೊಂಡವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *