ಬಸವಕಲ್ಯಾಣ
ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ, ಸನಾತನ ಧರ್ಮದ ಭಾಗವಲ್ಲ ಇದೊಂದು ಸ್ವತಂತ್ರ ಧರ್ಮವಾಗಿದೆ ಎಂದು ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಸಿದ್ಧರಾಮ ಬೆಲ್ದಾಳ ಶರಣರು ನುಡಿದರು.
ಅವರು ಅಂರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಏಳನೆ ದಿನದ ಕಾರ್ಯಕ್ರಮದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಗೋಷ್ಠಿಯ ದಿವ್ಯ ಸಾನಿಧ್ಯ ವಹಿಸಿಕೊಂಡು ಅನುಭಾವ ನೀಡಿದರು.
ವೀರಶೈವ ಎನ್ನುವುದು ೧೨ನೇ ಶತಮಾನದ ನಂತರ ಹುಟ್ಟಿಕೊಂಡಿದೆ. ಯಾವುದೇ ಒಂದು ಧರ್ಮ ಸ್ಥಾಪನೆಯಾಗಲು ಧರ್ಮಗುರು, ಧರ್ಮಗ್ರಂಥ ನೀತಿ-ನಿಯಮಗಳು ಅಲ್ಲದೇ ತನ್ನದೇ ಆದ ಸಿದ್ಧಾಂತಗಳನ್ನು ಹೊಂದಿರುತ್ತದೆ, ಹೀಗಾಗಿಯೇ ಲಿಂಗಾಯ ಸ್ವತಂತ್ರ ಧರ್ಮವಾಗಿದೆ. ಶರಣ ಸಾಹಿತ್ಯಕ್ಕೆ ವೇದ ಆಗಮ ಸಂಸ್ಕೃತ ಮೂಲವಲ್ಲ. ಇದು ಅಪ್ಪಟ್ಟ ಸ್ವಾನುಭಾವದ ಕಾಯಕ ಜೀವಿಗಳ ವೈಚಾರಿಕ ಮತ್ತು ವೈಜ್ಞಾನಿಕ ಧರ್ಮ ಎಂದರು.
ಬೀದರ ಸರಕಾರಿ/ಅರೆಸರಕಾರಿ ನೌಕರರ ಪತ್ತಿನ ಸಹಕಾರ ಸೌಹಾರ್ದ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಗೋಷ್ಠಿ ಉದ್ಘಾಟಿಸಿ, ಲಿಂಗಾಯತರೆಲ್ಲರೂ ಜಾಗ್ರತರಾಗಿ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿಯಲ್ಲಿ ನಿಮ್ಮ ಜಾತಿ ಬರೆಸಬೇಕು. ಇಂದಲ್ಲ ನಾಳೆ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕವಾಗಿ ಮಾನ್ಯತೆ ದೊರೆಯುತ್ತದೆ ಎಂದರು.
ರಾಜ್ಯ ಲಿಂಗಾಯತ ಯುವ ಒಕ್ಕೂಟದ ಅಧ್ಯಕ್ಷರಾದ ಆನಂದ ದೇವಪ್ಪ ಮಾತನಾಡಿ, ಲಿಂಗಾಯತ ಧರ್ಮ ಇತ್ತೀಚಿನದಲ್ಲ. ೧೨ನೇ ಶತಮಾನದಲ್ಲಿ ಗುರು ಬಸವಣ್ಣನವರು ಸ್ಥಾಪಿತ ಧರ್ಮ. ಲಿಂಗಾಯತರ ಸೌಲಭ್ಯಕ್ಕಾಗಿ ಸಂವಿಧಾನಾತ್ಮಕವಾಗಿ ಮಾನ್ಯತೆಗಾಗಿ ಹೋರಾಟವಾಗಿದೆ ಎಂದರು.
ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಲಿಂಗಾಯತ ಸಂಸ್ಕೃತಿ ಒಂದು ಸಮುದಾಯದಲ್ಲ. ಇಡೀ ಮಾನವ ಜನಾಂಗದ ಶ್ರೇಷ್ಠತೆಗೆ ಅಸ್ಮಿತೆಗೆ ಘನತೆ ತಂದು ಕೊಟ್ಟಿದೆ. ಈ ಸಂಸ್ಕೃತಿ ಅಳಿಯಬಾರದು ಉಳಿಯಬೇಕು ಬೆಳೆಯಬೇಕು ಎಂದರು.
ಪೂಜ್ಯ ಗಾಯತ್ರಿ ಸಮ್ಮುಖ ವಹಿಸಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮೀಟಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಚಿರಡೆ, ನಿರ್ದೇಶಕರಾದ ಕಾಶಪ್ಪ ಸಕ್ಕರಬಾವಿ, ಬೀದರ ರಾಷ್ಟೀಯ ಬಸವದಳದ ಕಂಟೆಪ್ಪ ಗಂದಿಗುಡಿ, ವೀರಶೆಟ್ಟಿ ಪಾಟೀಲ, ಗಣೇಶ ಬಿರದಾರ, ಜಗದೀಶ ಪಾಟೀಲ, ಮಿಲಿಂದ ಗುರೂಜಿ, ಆಕಾಶ ಖಂಡಾಳೆ, ಮಹಾದೇವ ಮಹಾಜನ, ಜಗದೀಶ ಬಿರಾದಾರ, ವಿಜಯಕುಮಾರ ಕುಮಸಿ, ಶಿವಕುಮಾರ ಬಿರಾದಾರ, ಶೋಭಾ ಬಾಪುರಾವ, ಗುಲಾಬರಾವ ತ್ರಿಮುಖೆ, ಧನರಾಜ ರಾಜೋಳೆ, ಚಂದ್ರಕಾಂತ ಮೇತ್ರೆ, ಯಶ್ವಂತ ಗಣೇಶ ಸಾಸ್ತೂರ ಉಪಸ್ಥಿತರಿದ್ದರು.
ಶಿವಕುಮಾರ ಶೆಟಕಾರ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಜಗದೇವಿ ಜವಳಗೆ ನಿರೂಪಿಸಿದರು. ಸೋಲಾಪುರದ ಅನಿಕೇತನ ಪಾಟೀಲ ಅವರು ಡಪ್ಪಿನ ಪದಗಳನ್ನು ಹಾಡಿದರು.