ರಾಯಚೂರು
ನಗರದ ಬಸವ ಕೇಂದ್ರದಲ್ಲಿ ನವರಾತ್ರಿ ಹಬ್ಬದಾಚರಣೆ ಅಂಗವಾಗಿ 12ನೇ ಶತಮಾನದ ಶಿವಶರಣೆಯರ ಚಿಂತನಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಡಾ. ಪ್ರಿಯಾಂಕಾ ಗದ್ವಾಲ್ ಮಾತನಾಡಿ, ಅಕ್ಕಮಹಾದೇವಿ ಅವರು ಸಾವಿಲ್ಲದ ಕೇಡಿಲ್ಲದ ಮಲ್ಲಿಕಾರ್ಜುನನನ್ನೆ ಪತಿಯಾಗಿ ಸ್ವೀಕರಿಸಿ ಅನುಭಾವದ ತುತ್ತ ತುದಿಗೇರಿದ್ದಲ್ಲದೆ, ಸ್ತ್ರೀಕುಲಕ್ಕೆ ಮುಕುಟಪ್ರಾಯವಾಗಿದ್ದಾರೆಂದರು.
ಪಾರ್ವತಿ ಪಾಟೀಲ ಅವರು ಮಾತನಾಡುತ್ತಾ, ಗಂಗಾದೇವಿಯವರು ಕಾಶ್ಮೀರದ ಅರಸ ಮಹದೇವ ಭೂಪಾಲರ ಪತ್ನಿ. ಬಸವೇಶ್ವರರ ಕೀರ್ತಿಯನ್ನು ಕೇಳಿ ಮಹಾದೇವ ಭೂಪಾಲರು ರಾಜ್ಯವನ್ನು ತ್ಯಜಿಸಿ, ಪತ್ನಿ ಗಂಗಾಂಬಿಕೆಯೊಂದಿಗೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕ ಮಾಡುತ್ತಿದ್ದರಿಂದ ಇವರಿಗೆ ಮೋಳಿಗೆ ಮಾರಯ್ಯ – ಮಹದೇವಿ ಎಂದು ಹೆಸರುವಾಸಿಯಾದರೆಂದರು.

ಪೂರ್ಣಿಮ ಪಾಟೀಲ ಅವರು ಮಾತನಾಡಿ, ಆಯ್ದಕ್ಕಿ ಮಾರಯ್ಯನವರ ಪತ್ನಿ ಲಕ್ಕಮ್ಮನವರು ರಾಶಿಕಣದಲ್ಲಿ ದವಸ ಧಾನ್ಯಗಳನ್ನು ಆಯುವ ಕಾಯಕವನ್ನು ಮಾಡುತ್ತಿದ್ದರು. ಒಂದು ದಿನ ಮಾರಯ್ಯನವರು ಕಾಯಕಕ್ಕಿಂತ ಹೆಚ್ಚಿನ ಅಕ್ಕಿಯನ್ನು ತಂದಾಗ, ಹೆಚ್ಚಿನ ಆಸೆ ನಿಮಗೇಕೆಂದು ಪ್ರಶ್ನಿಸಿ, ಹೆಚ್ಚಿಗೆ ತಂದ ಅಕ್ಕಿಯನ್ನು ಮರಳಿ ಕಳಿಸುತ್ತಾಳೆ. ಇವರ ಪ್ರಾಮಾಣಿಕ ಸೇವೆ ನಮಗೆಲ್ಲ ಮಾದರಿ ಎಂದರು.
ಸುಮಂಗಲ ಸಕ್ರಿಯವರು ಮಾತನಾಡಿ, ಸತಿ-ಪತಿಗಳೊಂದಾಗಿ ಪೂಜಿಸುವ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತನೆಯನ್ನು ಮಾಡುವ ಹಕ್ಕನ್ನು ಕೊಟ್ಟವರು ಬಸವಣ್ಣನವರು ವಿಶ್ವದಲ್ಲಿ ಮೊದಲಿಗರೆಂದರೆ ತಪ್ಪಾಗಲಿಕ್ಕಿಲ್ಲ. ಹಡಪದ ಲಿಂಗಮ್ಮನವರ ಕುರಿತು ಅನೇಕ ವಿಚಾರಗಳನ್ನು ಮಂಡಿಸಿದರು. ನಿಂಗಮ್ಮ ಅವರ ವಚನ ನಾಮಾಂಕಿತ ಅಪ್ಪಣ್ಣಪ್ರೀಯ ಚನ್ನಬಸವಣ್ಣನೆಂದು ಹೇಳಿದರು.

ಶಾಲಿಕಾ ಹನುಮಂತ ಗುತ್ತೇದಾರ್ ಮಾತನಾಡಿ, ಮುಕ್ತಾಯಕ್ಕ ತನ್ನ ಅಣ್ಣ ಅಜಗಣ್ಣನನ್ನೆ ಗುರುವಾಗಿ ಸ್ವೀಕರಿಸಿ ಆಧ್ಯಾತ್ಮಿಕ ಸಾಧನೆಗೈದ ಮಹಾನ್ ಚೇತನ. ಇವರು ರಾಯಚೂರು ಜಿಲ್ಲೆಯ ಮೊಸರಕಲ್ಲಿನಲ್ಲಿ ಅಂಗೈಕ್ಯರಾದರೆಂದು ತಿಳಿಸಿದರು.
ಮುಕ್ತಾ ನರಕಲದಿನ್ನಿ ಅವರು ಕೊಂಡಿ ಮಂಚಣ್ಣನವರ ಪುಣ್ಯಸ್ತ್ರೀ ಲಕ್ಕಮ್ಮನವರ ಕಾಯಕದ ಕುರಿತು ಮಾತನಾಡಿರದಲ್ಲದೇ, ನಿತ್ಯ ವಚನಗಳ ಅಧ್ಯಯನದಿಂದ ಮನಸ್ಸಿನಲ್ಲಿರುವ ಕಲ್ಮಶ ಭಾವನೆಗಳನ್ನು ತೆಗೆದುಹಾಕಲು ಸಾಧ್ಯವೆಂದರು.

ಅನಿತಾ ಪಾಟೀಲ ನಾಗಮ್ಮನವರ ಕುರಿತು, ಲಲಿತಾ ಗುಡಿಮನಿ ಅವರು ಪುಣ್ಯಸ್ತ್ರೀ ಕಾಳವ್ವೆ ಕುರಿತು, ಸುಪ್ರಿಯಾ ಪಾಟೀಲ ಸತ್ಯಕ್ಕ ಅವರ ಕುರಿತು ಮಾತನಾಡಿದರು.
ಕೊನೆಯಲ್ಲಿ ಜಯಶ್ರೀ ಮಹಾಜನಶೆಟ್ಟಿ ಅವರು ಮಾತನಾಡಿ, 12ನೇ ಶತಮಾನದ ಎಲ್ಲಾ ಶರಣೆಯರು ಆಚಾರ- ವಿಚಾರ, ನಡೆ -ನುಡಿಯಲ್ಲಿ ಭಿನ್ನವನರಿಯದೆ ಚಾರಿತ್ರ್ಯದ ಉತ್ತಂಗಕ್ಕೆರಿದ್ದರೆಂದರು. ಹಾಗೂ ಅವರು ಕಾಯಕ ನಿಷ್ಠರು, ವ್ರತನಿಷ್ಠರಾಗಿ ಶಿವನ ಹಂಗು ತೊರೆದು ತಾವಿದ್ದ ಸ್ಥಳವನ್ನೇ ಕೈಲಾಸವನ್ನಾಗಿ ಮಾಡಿಕೊಂಡಿದ್ದರೆಂದರು.

ಸಭೆಯ ಅಧ್ಯಕ್ಷತೆ ಬಸವ ಕೇಂದ್ರದ ಗೌರಧ್ಯಕ್ಷರಾದ ಹರವಿ ನಾಗನಗೌಡರು ವಹಿಸಿದ್ದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಡಾ. ಪ್ರಿಯಾಂಕಾ ಗದ್ವಾಲ ನಡೆಸಿಕೊಟ್ಟರು, ಮಲ್ಲಿಕಾರ್ಜುನ ಗುಡಿಮನಿ ಸ್ವಾಗತಿಸಿದರು. ಚನ್ನಬಸವ, ಇಂಜಿನಿಯರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ನಾಗೇಶ್ವರಪ್ಪ ವಂದಿಸಿದರು.