ಚಿತ್ರದುರ್ಗ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಸಾಣೇಹಳ್ಳಿ ತರಳಬಾಳು ಬೃಹನ್ಮಠ ಶಾಖೆಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ದಯೆಯೇ ಧರ್ಮದ ಮೂಲ, ದೇಹವೇ ದೇವರು ಎಂದವರು ಬಸವಾದಿ ಶರಣರು. ಬಸವಣ್ಣನವರ ಸುತ್ತ ಮುತ್ತ ಜನರು ಜೇನುಹುಳದಂತೆ ಸೇರಿಕೊಂಡು ಅನುಭಾವಿಗಳಾದರು. ಒಂದು ತಿಂಗಳ ಈ ಅಭಿಯಾನದಿಂದ ಅನೇಕರು ಶರಣರಾದರು, ಅನುಭಾವಿಗಳಾದರು.

ಇದು ಜಾತ್ರೆಯಾಗಬಾರದು, ಯಾತ್ರೆಯಾಗಬೇಕು. ಈ ಅಭಿಯಾನವನ್ನು ಭಕ್ತರು ಮುಂದೆ ನಡೆಸಿಕೊಂಡು ಹೋಗಬೇಕು, ನಾವು ನಿಮ್ಮ ಜೊತೆ ಇರುತ್ತೇವೆ ಎಂದು ತಿಳಿಸಿದರು.
ಗದಗದ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಶ್ರೀಮುರುಘಾಮಠದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಶ್ವಕಂಡ ಶ್ರೇಷ್ಢ ಸಮಾಜ ಸುದಾರಕರು ಬಸವಣ್ಣನವರು. ವ್ಯಕ್ತಿಯಲ್ಲಿ ನಯ ವಿನಯ ಇದ್ದರೆ ಅವರು ಸಮರ್ಥರಾಗುತ್ತಾರೆ.

ಸದ್ಭಕ್ತರ ಸೇವೆ ಮಾಡುವುದೇ ಪರಮಪುಣ್ಯ. ಬಸವಣ್ಣನವರ ಸಂಪರ್ಕದಿಂದ ನಾನು ಸದ್ಭಕ್ತನಾದೆನು ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ಆ ಕಾಲದಲ್ಲಿ ಕಳ್ಳರು, ಸುಳ್ಳರು ಬಸವಣ್ಣನವರ ಸಂಪರ್ಕದಿಂದ ಸದ್ಭಕ್ತರಾದರು. ಬಸವಣ್ಣನವರು ಎಲ್ಲಾ ರೀತಿಯ ಪ್ರಥಮಗಳನ್ನು ಮಾಡಿದ್ದಾರೆ.
೧೮೫೮ರಲ್ಲಿ ಬೆಳಗಾವಿಯಲ್ಲಿ ಮಹಾಲಿಂಗಸ್ವಾಮಿಗಳು ಪ್ರಸಾದ ನಿಲಯ ಪ್ರಾರಂಭಿಸಿದರು. ಅದರ ಕೀರ್ತಿ ಮುರುಘರಾಜೇಂದ್ರಮಠಕ್ಕೆ ಸಲ್ಲಬೇಕು ಎಂದು ನುಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ನಾಡಿನ ಎಲ್ಲಾ ಮಠಾಧೀಶರು ಸೇರಿ ಬಸವಸಂಸ್ಕೃತಿ ಅಭಿಯಾನಕ್ಕೆ ತಿರುಗಾಡುತ್ತಿದ್ದೇವೆ. ಬಸವಣ್ಣನವರ ತತ್ವ ಪ್ರಾರಂಭವಾದದ್ದು ೧೨ನೇ ಶತಮಾನದಲ್ಲಿ. ಸಮಸಮಾಜ ನಿರ್ಮಾಣ ಮಾಡಲು ಆನೇಕ ಶರಣರು ತಮ್ಮನ್ನು ತಾವು ತ್ಯಾಗ ಮಾಡಿಕೊಂಡರು. ವಚನ ಸಾಹಿತ್ಯ ಶರಣರ ತ್ಯಾಗದ ಫಲವಾಗಿದೆ. ಇಂದು ನೆಲ, ಜಲ, ಅಂಗಾಗಗಳಲ್ಲಿ ಅಸ್ಪೃಶ್ಯತೆ ಕಾಣುತ್ತಿದ್ದೇವೆ. ಇದನ್ನು ಹೋಗಲಾಡಿಸಬೇಕೆಂದರೆ ಬಸವತತ್ವವನ್ನು ಮನೆ, ಮನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಹುಲಸೂರಿನ ಶ್ರೀ ಶಿವಾನಂದ ಸ್ವಾಮಿಗಳು ಮಾತನಾಡಿ, ಮೊದಲ ಬಾರಿಗೆ ದಾಸೋಹ ಪ್ರಾರಂಭಿಸಿದ ಕೀರ್ತಿ ಮುರುಘಾಮಠಕ್ಕೆ ಸಲ್ಲುತ್ತದೆ. ಬಡವರಿಗೆ ಆಶ್ರಯ ಮಾಡಿಕೊಟ್ಟ ಮಠ ಶ್ರೀಮಠ. ಬಸವಣ್ಣನೇ ಧರ್ಮಗುರು, ಧರ್ಮ ಲಿಂಗಾಯತ ಧರ್ಮ ಎಂದು ಹೇಳಬೇಕೆಂದರು.

ಕೂಡಲಸಂಗಮದ ಡಾ. ಗಂಗಾ ಮಾತಾಜಿ ಮಾತನಾಡಿ, ಶರಣರು ಸ್ವತಂತ್ರಧೀರರು, ವಚನ ಸಾಹಿತ್ಯ ಅನುಭಾವ ಸಾಹಿತ್ಯ. ೧೨ನೇ ಶತಮಾನದಲ್ಲಿ ೭೭೨ ಅಮರ ಗಣಂಗಳು ಅನುಭವಮಂಟಪದಲ್ಲಿ ಚಿಂತನ-ಮಂಥನ ಮಾಡಿದ ಸಾಹಿತ್ಯ ಅದುವೇ ವಚನ ಸಾಹಿತ್ಯ. ಮನದ ಮೈಲಿಗೆಯನ್ನು ತೊಳೆಯುವ ಸಾಹಿತ್ಯ ವಚನ ಸಾಹಿತ್ಯ ಎಂದು ನುಡಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಅಪ್ಪ ಬಸವಣ್ಣನ ಸಂಸ್ಕೃತಿಯನ್ನು ಮುನ್ನಡೆಸಬೇಕೆಂದು ಅನೇಕ ಮಠಾಧೀಶರು ಸೇರಿ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಎಲ್ಲಾ ಮಠಾಧೀಶರು ಉತ್ತಮ ಸಹಕಾರ ನೀಡುತ್ತಿದ್ದು ಚಿತ್ರದುರ್ಗದಲ್ಲಿ ಈ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ನುಡಿದರು.
ತುಮಕೂರಿನ ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರು ಶರಣರು ಮತ್ತು ಬಹುಸಂಸ್ಕೃತಿ ಕುರಿತು ಮಾತನಾಡಿ, ನಮ್ಮ ನಾಡಿನಲ್ಲಿ ಒಂದು ಭಾಷೆ, ಒಂದು ಧರ್ಮ ಇಲ್ಲ. ನಾವುಗಳು ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ದಾಸ್ಯತ್ವದಲ್ಲಿದ್ದೇವೆ. ಭಾರತದಲ್ಲಿ ಅನೇಕ ಧರ್ಮ ಜಾತಿ ಪಂಥ ಹುಟ್ಟಿಕೊಂಡಿವೆ. ಶರಣರ ಚಳುವಳಿ- ಸಾಮಾಜಿಕ, ಆರ್ಥಿಕ ಚಳುವಳಿಯಲ್ಲ, ಧಾರ್ಮಿಕ ಚಳುವಳಿಯಾಗಿದೆ. ಈ ಚಳುವಳಿಯಲ್ಲಿ ವಿಶ್ವದ ಯಾವುದೇ ಚಳುವಳಿ ನಡೆದಾಗ ಧರ್ಮದ ಪಟ್ಟಿಗಳು ಬಂದವು. ಸಂವಾದದ ಮುಖೇನ ಯಾವುದೇ ವರ್ಣ ಪ್ರಧಾನವಾಗಿರದೆ, ಸಂಘಟನಾತ್ಮಕವಾಗಿ ಹುಟ್ಟಿದಂತ ಧರ್ಮ ಬಸವ ಧರ್ಮವಾಗಿದೆ ವಚನ ಧರ್ಮವಾಗಿದೆ. ಇಂದು ಲಿಂಗಾಯತ ಧರ್ಮವಾಗಿದೆ.

ನಮ್ಮ ದೇಶದಲ್ಲಿ ವಿದೇಶಗಳಲ್ಲಿ ಕನ್ನಡದಲ್ಲಿ ಸೃಷ್ಟಿಯಾದ ವಚನಗಳ ರೀತಿ ಯಾವ ಧರ್ಮದಲ್ಲಿಯೂ, ಸಾಹಿತ್ಯದಲ್ಲೂ ಹುಟ್ಟಿಲ್ಲ. ವೇದ ಆಗಮ ತರ್ಕವನ್ನು ನಮ್ಮ ವಚನ ಸಾಹಿತ್ಯ ತಿರಸ್ಕರಿಸಿದೆ ಎಂಬುದನ್ನು ವಚನಗಳ ಮುಖಾಂತರ ತಿಳಿಯಬಹುದು. ಬಸವಣ್ಣನವರು ಮಹಾ ಮನೆಯನ್ನು ಕಟ್ಟಿದರು. ಅದು ಭಾರತದಲ್ಲಿ ಮಹಾ ರೂಪಕವಾಗಿದೆ. ಎಲ್ಲಾ ವರ್ಗದವರನ್ನು ಸೇರಿಸಿ ದಾಸೋಹಕ್ಕೆ, ಅನುಭವ ಹಂಚಿಕೊಳ್ಳಲು ಅನುಭವ ಮಂಟಪ ಸೃಷ್ಟಿಸಿದರು ಎಂಬುದನ್ನು ನೋಡಬಹುದು ಎಂದು ನುಡಿದರು.
ವಿಜಯಪುರದ ಶರಣ ಚಿಂತಕ ಡಾ.ಜೆ. ಎಸ್ ಪಾಟೀಲ ‘ವಚನಗಳ ನೆಲೆಯಲ್ಲಿ ಅಧಿಕಾರ’ ವಿಷಯವಾಗಿ ಮಾತನಾಡುತ್ತ, ಆಯ್ದಕ್ಕ್ಕಿ ಲಕ್ಕಮ್ಮ ಮುಂತಾದ ಶರಣರು ಕಾಯಕ ಮತ್ತು ದಾಸೋಹ ಎಂಬ ನೀತಿಯನ್ನು ಜಾರಿಗೆ ತಂದು ಸಮಾನತೆಯನ್ನು ಸೃಷ್ಟಿಸಲು ವಚನ ಸಾಹಿತ್ಯದಲ್ಲಿ ಹೇಳಿದ್ದಾರೆ. ವಚನ ಸಾಹಿತ್ಯದ ಮೂಲ ಆಶಯ ಕೇವಲ ಪ್ರವಚನವಲ್ಲ. ಅದನ್ನು ಜಾರಿಗೆ ತರುವಂತಹದ್ದು. ಶರಣರು ನಡೆದಂತೆ ನುಡಿಯುತ್ತಾರೆ, ನಡೆಯುತ್ತಾರೆ. ಆದ್ದರಿಂದ ವಚನ ಸಂವಿಧಾನವನ್ನು ನಡೆ-ನುಡಿ ಸಂವಿಧಾನ ಎನ್ನುತ್ತೇವೆ. ವಚನ ಸಂವಿಧಾನದಲ್ಲಿ ನಾನು ನೀನು ಎಂಬುದು ಅಳಿದು ನಾವು ನೀವು ಎಂಬ ಅನುಭವವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಬಸವ ಟಿವಿ ಸಂಸ್ಥಾಪಕ ಈ. ಕೃಷ್ಣಪ್ಪ, ಬಸವ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾದ ಟಿ ಆರ್ ಚಂದ್ರಶೇಖರ್, ಬಸವ ಮೀಡಿಯಾ ಟ್ರಸ್ಟ್ ಸದಸ್ಯರಾದ ಎಚ್ ಎಂ ಸೋಮಶೇಖರಪ್ಪ, ಶಾಂತಕುಮಾರ ಹರ್ಲಾಪುರ, ಬಸವ ಮೀಡಿಯಾ ಸಂಪಾದಕ ಎಂ.ಎ. ಅರುಣ, ಸಹಸಂಪಾದಕ ರವೀಂದ್ರ ಹೊನವಾಡ, ದ್ಯಾಮಣ್ಣ ಕೋಗುಂಡೆ, ಶಂಕರಮೂರ್ತಿ ಹಾಗೂ ಜಿ ಎಸ್ ಅನಿತಕುಮಾರ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಭ್ರಮದಲ್ಲಿ ಡಾ. ಶಿವಾಚಾರ್ಯ ಸ್ವಾಮಿಗಳು ರಚಿಸಿದ, ಆರ್. ಜಗದೀಶ್ ಸಂಗೀತ ನಿರ್ದೇಶನದ ಜಂಗಮದೆಡೆಗೆ ನಾಟಕವನ್ನು ಶಿವಸಂಚಾರ ತಂಡದವರು ಅಭಿನಯಿಸಿದರು.