ಬೀದರ
ಮನಸ್ಸಿನ ಸ್ವಭಾವ ನಾಯಿಯಂತೆ. ಪಲ್ಲಕ್ಕಿಯಲ್ಲಿ ಮೆರೆಸಿದರು ಕೂಡ ನಾಯಿ ತನ್ನ ಮೊದಲಿನ ಗುಣಗಳನ್ನು ಬಿಡುವುದಿಲ್ಲ ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.
ಗೋರಟಾ ಗ್ರಾಮದಲ್ಲಿ ಹತ್ತು ದಿನಗಳ ಕಾಲ ನಡೆಯುತ್ತಿರುವ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕಾರ್ಯ ಅತ್ಯಂತ ಅವಶ್ಯಕ. ಸಂಸ್ಕಾರ ಇಲ್ಲದ ಮನಸ್ಸು ವಿಷಯವಾಸನೆಗಳಿಗೆ ಹರಿಯುತ್ತದೆ. ನೀರು ಚೆಲ್ಲಿದಾಗ ತಗ್ಗಿನ ಕಡೆ ಹರಿಯುವಂತೆ, ಮನಸ್ಸು ಹೀನ ವಿಷಯಗಳಿಗೆ ಹರಿಯುತ್ತದೆ.
ಆದರೆ ನೀರಿಗೆ ಯಂತ್ರ, ಮನಸ್ಸಿಗೆ ಮಂತ್ರ ಅಳವಡಿಸಿದರೆ, ಕೆಳಮುಖವಾಗಿ ಹರಿಯುವ ನೀರು ಮೇಲ್ಮುಖವಾಗಿ ಹರಿಯುವಂತೆ ಹೀನ ವಿಷಯಗಳಿಗೆ ಹರಿಯುವ ಮನಸ್ಸು ಉನ್ನತ ಸಾಧನೆಯತ್ತ ಮುಖ ಮಾಡುತ್ತದೆ. ಅಂತಹ ಸಂಸ್ಕಾರ ಸಿಗಬೇಕಾದರೆ ಶರಣರ ಸಂಗ ಅತ್ಯಂತ ಅವಶ್ಯಕ.
ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್, ಟಿವಿ ದುಶ್ಚಟ ದುರ್ಗುಣಗಳಿಗೆ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ, ಮಕ್ಕಳಿಗೆ ವಚನಗಳು ಓದಿಸುವ ಶರಣರ ಚಿಂತನೆಗಳು ಮಾಡಿಸುವ ಮುಖಾಂತರವಾಗಿ ಒಳ್ಳೆಯ ಸಂಸ್ಕಾರ ನೀಡುವ ಕಾರ್ಯ ಮಾಡಲಾಗುತ್ತಿದೆ.

ಮಕ್ಕಳಿಂದ ಮಕ್ಕಳಿಗಾಗಿ ಚಿಂತನೆಗಳನ್ನು ರೂಪಿಸುತ್ತಾ ಪ್ರತಿದಿನ ಹತ್ತಾರು ಮಕ್ಕಳು ತಮ್ಮ ವಿಚಾರಗಳನ್ನು ಮಂಡಿಸುತ್ತಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಮಕ್ಕಳೇ ಮುಂದಿನ ದಿನಗಳಲ್ಲಿ ಭವ್ಯ ಭಾರತ ಕಟ್ಟುವ ಪ್ರಜೆಗಳಾಗುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜ್ಯೋತಿ ಸಂಗಮೇಶ ಪಟ್ಟಪಳ್ಳೆ ಮಾತನಾಡಿ, ಗುರು ಸೇವೆಯಿಂದ ಮನ ನಿರ್ಮಲವಾಗುತ್ತದೆ. ಗುರು ಇರದೆ ಮುಕ್ತಿ ದೊರಕದು. ಚತುರ್ವಿಧ ಭಕ್ತಿಯಿಂದ ಗುರುಸೇವೆ ಗೈಯಬೇಕು. ಹರನಿಂದಲೂ ಅಧಿಕ ಸದ್ಗುರು ಎಂದು ಶರಣರು ತಿಳಿಸುತ್ತಾರೆ. ಬಸವಣ್ಣನವರು ತನು, ಮನ, ಧನವನ್ನು ಗುರು- ಲಿಂಗ- ಜಂಗಮಕ್ಕೆ ಅರ್ಪಿಸಿ ಜಗವೆಲ್ಲಕ್ಕೂ ಗುರುವಾದವರು ಎಂದು ತಿಳಿಸಿದರು.
ಪೂಜಾ ರೇವಣಸಿದ್ಧ ನೂರಂದೆ ಚಿಂತನೆಗೈದರು. ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಮಠಪತಿ ಹಾಗೂ ಸುರೇಶ ಪನಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮಂತಪ್ಪ ರಾಜೇಶ್ವರೆ ಅವರು ವಹಿಸಿದ್ದರು.
ಪ್ರಣತಿ ವಚನ ಗಾಯನ, ವಚನಶ್ರೀ ವಚನ ಪಠಣ ಮಾಡಿದರು. ಅಮುಲ ಸ್ವಾಗತ ಕೋರಿದರು. ಶಾಶ್ವತ ನಿರೂಪಣೆ ಗೈದರು. ಭವಾನಿ ವಚನ ನೃತ್ಯ ಮಾಡಿದರು. ಚಂದ್ರಕಲಾ ಬಸವರಾಜ ಮಾಶೆಟ್ಟೆ ಭಕ್ತಿ ದಾಸೋಹ ಮಾಡಿದರು.