ಬಸವಕಲ್ಯಾಣ
೧೨ನೇ ಶತಮಾನದ ಕಲ್ಯಾಣ ಕ್ರಾಂತಿ ಮತ್ತು ನಂತರ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾದದ್ದು ಇತಿಹಾಸದಲ್ಲಿ ಸುವರ್ಣಯುಗ ಎಂದು ಜಾಲನಾ ಮೆಡಿಕಲ್ ಕಾಲೇಜಿನ ನಿವೃತ್ತ ಡೀನರಾದ ಡಾ. ಅಮರನಾಥ ಸೋಲಪುರೆ ಹೇಳಿದರು.
ಅವರು ಅಂತರರ‍್ರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ೮ನೇ ದಿನ ನಡೆದ ಮರೆತು ಹೋದ ಲಿಂಗಾಯತ ಮಹಾಸಾಮ್ರಾಜ್ಯ ವಿಜಯನಗರ ಗೋಷ್ಠಿಯಲ್ಲಿ ಅನುಭಾವ ನೀಡಿ, ಬಸವಕಲ್ಯಾಣ ಜ್ಞಾನನಗರಿ, ಅವಿಮುಕ್ತ ಕ್ಷೇತ್ರ, ಪುಣ್ಯನಗರಿಯಾಗಿದೆ.
೧೩೩೬ರಲ್ಲಿ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ೧೨ ಜನ ಲಿಂಗಾಯತರು ರಾಜ್ಯವನ್ನಾಳಿದರು. ಅವರು ಧೈರ್ಯಶಾಲಿಗಳು. ಗುರುಬಸವಣ್ಣನವರು ಕೈಗೊಂಡ ಅನೇಕ ಕಾರ್ಯಗಳನ್ನು ಇವರು ಕೈಗೊಂಡರು. ದಾಸೋಹ ಶಿಕ್ಷಣ ಸಮಾನತೆಗಳನ್ನು ಸಮಾಜದಲ್ಲಿ ತಂದರು.
ವಿಜಯನಗರ ಅರಸರ ಕಾಲದಲ್ಲಿ ವಿಶೇಷವಾಗಿ ೧೪-೧೫ನೇ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಧರ್ಮವು ಪ್ರವರ್ಧಮಾನಕ್ಕೆ ಬಂತು. ಅನುಭವ ಮಂಟಪದಿಂದ ಲಿಂಗಾಯತ ಪಠ್ಯಗಳು ಸಂಕಲಿತವಾದವು. ಬಸವ ಪುರಾಣವು ಇವರ ಕಾಲದಲ್ಲಿ ಕನ್ನಡಕ್ಕೆ ಅನುವಾದವಾಯಿತು ಎಂದು ವಿಜಯನಗರ ಅರಸರ ಕಾಲದಲ್ಲಿ ಲಿಂಗಾಯತ ಧರ್ಮವು ಪುನರುಜ್ಜೀವನ ಕುರಿತು ಸವಿಸ್ತರಾವಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ತು ಸದಸ್ಯ ವಿಜಯಸಿಂಗ್ ಮಾತನಾಡಿ, ಬಸವತತ್ವವು ಮಾನವೀಯ ಮೌಲ್ಯಗಳು, ಸಮಾನತೆ, ಕಾಯಕ, ದಾಸೋಹದ ಪ್ರಾಮುಖ್ಯತೆಯನ್ನು ಸಾರುವ ವಿಶ್ವವ್ಯಾಪಕ ತತ್ವವಾಗಿದ್ದು ಯಾವುದೇ ಧರ್ಮ ಜಾತಿಗೆ ಸಿಮೀತವಲ್ಲ. ಇವರ ತತ್ವಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಧಾರ್ಮಿಕ ಕಾರ್ಯಗಳಿಂದ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.
ಬೀದರ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಇಷ್ಟಲಿಂಗದಿಂದ ಲಿಂಗಾಯತ ಧರ್ಮ ಉಳಿಯುತ್ತದೆ, ಇದನ್ನು ಪ್ರತಿಯೊಬ್ಬರು ಧರಿಸಿ ಪೂಜಿಸಬೇಕು ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಕನೀನಿನಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಮಾತನಾಡಿ, ಬಸವತತ್ವದಂತಹ ಮಹಾತತ್ವ ಇನ್ನೊಂದಿಲ್ಲ. ಇದು ಮಾನವ ಧರ್ಮ, ಕಾಯಕ ದಾಸೋಹ ತತ್ವಗಳನ್ನು ಅಳವಡಿಸಿಕೊಂಡಿರುವ ಬಸವತತ್ವವನ್ನು ವಿಶ್ವದೆಲ್ಲೆಡೆ ಪ್ರಚಾರಮಾಡುವ ಕಾರ್ಯವಾಗಬೇಕಾಗಿದೆ ಎಂದರು.
ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿದರು. ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ ಉದ್ಘಾಟಿಸಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ಸುಭಾಷ ಹೊಳಕುಂದೆ ಅಧ್ಯಕ್ಷತೆ ವಹಿಸಿದರು.
ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಬಿಡಿಪಿಸಿ ನಿರ್ದೇಶಕರಾದ ವೀರಣ್ಣ ಹಲಶೆಟ್ಟಿ, ಅಶೋಕ ನಾಗರಾಳೆ, ಮುಖಂಡರಾದ ಸಂಜುಕುಮಾರ ದೇಗಲೂರೆ, ಕುಲದೀಪ ಹೇಮಾ, ನೀಲಕಂಠರಾವ ಮುನ್ನೊಳ್ಳಿ, ಸಂಪತ ಪಾಟೀಲ ಉಪಸ್ಥಿತರಿದ್ದರು.
ಹಣಮಂತ ಧನಶೆಟ್ಟಿ ಸ್ವಾಗತಿಸಿದರೆ, ಶಕುಂತಲಾ ಖಂಡಾಳೆ ನಿರೂಪಿಸಿದರು. ಶ್ರೀ ಅಲ್ಲಮಪ್ರಭು ಸಣ್ಣಾಟ ಕಲಾಪೋಷಕ ಸಂಘ ಅರ್ಜುನವಾಡ ಬೆಳಗಾವಿ ಅವರಿಂದ ಯಕ್ಷಗಾನ ಬಯಲಾಟ ನಡೆಯಿತು.