ಪ್ರತಿ ಜೀವಿಯೂ ಮಹಾಲಿಂಗವೇ ಆಗುವ ಪರಿಯನ್ನು ತಿಳಿಸುವ ಅಕ್ಕನ ವಚನ

ಗುಳೇದಗುಡ್ಡ

ಬಸವ ಕೇಂದ್ರದ ವತಿಯಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ, ಅಕ್ಕಮಹಾದೇವಿಯ “ಲಿಂಗಪೂಜಕಂಗೆ ಫಲಪದಂಗಳಲ್ಲದೆ ಲಿಂಗವಿಲ್ಲ” ಎಂಬ ವಚನದ ಕುರಿತು ವಚನ ವಿಶ್ಲೇಷಣೆ ಗುಳೇದಗುಡ್ಡದ ಶಿವಪ್ಪ ಸಂಗಪ್ಪ ಶೀಪ್ರಿ ತಿಪ್ಪಾಪೇಟೆ ಅವರ ಮನೆಯಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡುತ್ತ ಪ್ರೊ. ಶ್ರೀಕಾಂತ ಗಡೇದ ಅವರು ಈ ವಚನವು ಪರಮ ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರದು. ಮಾನವ ಮಹಾಮಾನವನಾಗುವ ಮಾರ್ಗವನ್ನು ಇಲ್ಲಿ ಹೇಳಲಾಗಿದೆ. ಕಾಮ – ಕಾಯದ ವಿಕಾರ ಕಳೆದು ಏಕದೇವೋಪಾಸನೆಯ ಮೂಲಕ, ದ್ವೈತ ಭಾವನೆ ನೀಗಿ ಅದ್ವೈತದಿಂದ ಬದುಕಿದರೆ ಪ್ರತಿಯೊಬ್ಬರು ಚೆನ್ನಮಲ್ಲಿಕಾರ್ಜುನದೇವಾ ಆಗುತ್ತಾನೆ ಎಂದರು.

ಅನುಭಾವಿ ಶರಣ ಮಹಾಂತೇಶ ಸಿಂದಗಿಯವರು ಇದೇ ವಚನವನ್ನು ಕುರಿತು ಮಾತನಾಡುತ್ತ, ಸ್ಥಾವರಲಿಂಗ ಪೂಜೆ ಮಾಡಿದರೆ ತಾನು ದೇವರಾಗುವದಿಲ್ಲ. ಸಾಧ್ಯವಾದರೆ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು. ತಾನು ಊಟ ಮಾಡಿದರೆ ಮಾತ್ರ ತನ್ನ ಹೊಟ್ಟೆ ತುಂಬುವಂತೆ ತನ್ನಾಶ್ರಯದ ರತಿಸುಖವನ್ನು ತಾನೇ ಪಡೆಯುವಂತೆ ಇಷ್ಟಲಿಂಗದ ಮೂಲಕವೇ ಪರಮ ಸುಖವನ್ನು ತಾನೇ ಸ್ವತಃ ಸಾಧನೆಯಿಂದ ಪಡೆಯಬೇಕು.

ಧರ್ಮ ಬಿಟ್ಟವನಿಗೆ ಸರಿಯಾದ ಬದುಕು ಇರುವದಿಲ್ಲ. ಕಾರಣ ತನ್ನ ತಾನರಿದು ಆ ಮಹಾಲಿಂಗವೆ ತಾವಾಗಬೇಕು ಎಂದು ಅಕ್ಕಮಹಾದೇವಿತಾಯಿಯವರ ಇಂಗಿತವಾಗಿದೆ ಎಂದು ಹೇಳಿದರು.

ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಮಾತನಾಡುತ್ತ, ಅಕ್ಕಮಹಾದೇವಿ ತಾಯಿಯವರು ಈ ವಚನದ ಮೂಲಕ ಶರಣರ ಮೂಲ ತತ್ವವಾದ ಪ್ರತಿ ಜೀವಿಯೂ ಮಹಾಲಿಂಗವೇ ಆಗುವ ಪರಿಯನ್ನು ತಿಳಿಸುವುದರೊಂದಿಗೆ, ಇದಕ್ಕೆ ಹೊರತಾದ ವಿವಿಧ ಸಾಧಕರು ಕೇವಲ ಲೌಕಿಕ ಆಸೆ ಪೂರೈಸಿಕೊಳ್ಳಬಲ್ಲರೇ ವಿನಃ ಆ ಪರಶಿವಲಿಂಗವೆ ತಾವಾಗುವದಿಲ್ಲ. ತಾವು ಕಟ್ಟಿಕೊಂಡ ಕಲ್ಪಸಿಕೊಂಡ ಮಾರ್ಗದಿಂದಾಗಿ ದ್ವೈತದಿಂದಾಗಿ ಆ ಮಹಾಲಿಂಗದಿಂದ ದೂರವೇ ಉಳಿಯುತ್ತಾರೆ.

ಆದರೆ ಶರಣನಾದವನು ಈ ಎಲ್ಲ ಭ್ರಾಂತಿಯನ್ನು ಕಿತ್ತೆಸೆದು ತಾನು ಲಿಂಗದಿಂದ ಭಿನ್ನನಾಗಿ ಲಿಂಗವೇ ಆಗಿದ್ದೇನೆ ಎಂದು ತಿಳಿದು ಬಾಳುತ್ತ ತನ್ನ ತಾನರಿವುದರಿಂದ, ಈ ತನು ಅದು ಹೊಂದಿದ ಅಂತಃಕರಣ, ಇಂದ್ರಿಯಗಳಿಂದ ಬೇರಾಗಿಯೇ ಇದ್ದು, ಇವೆಲ್ಲ ಮಲತ್ರಯಗಳಿಂದಾದ ದೋಷವೆಂದರಿದು ದ್ವೈತವನ್ನಳಿದು, ತಾನು ಪರಶಿವಾಂಶಿಕನೆಂಬ ಅದ್ವೈತದಿಂದ ಬದುಕಿದ್ದರಿಂದಾಗಿ ಶರಣನಿಂದ ಐಕ್ಯವಾಗುತ್ತಾನೆ ಎಂಬುದನ್ನು ಅಕ್ಕಮಹಾದೇವಿ ತಾಯಿಯವರು ಈ ವಚನದ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮವು ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಕಾರ್ಯಕ್ರಮದ ಅನುಭಾವದ ನಂತರ ವಚನ ಮಂಗಲವನ್ನು ರಾಚಣ್ಣ ಕೆರೂರ ಅವರು ನೇರವೇರಿಸಿದರು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಆಯೋಜಕರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆಯನ್ನು ಗೈದರು.

ಮಹಾಮನೆ ಕಾರ್ಯಕ್ರಮದಲ್ಲಿ ರಾಚಣ್ಣ ಕೆರೂರ, ಸುರೇಶ ರಾಜನಾಳ, ಪುತ್ರಪ್ಪ ಬೀಳಗಿ, ಹುಚ್ಚೇಶ ಯಂಡಿಗೇರಿ, ಚಂದ್ರಶೇಖರ ತೆಗ್ಗಿ, ಕುಮಾರ ಅರುಟಗಿ, ಪ್ರದೀಪ ಕಂಚಾಣಿ, ಶೀಪ್ರಿ ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಸೇರಿದಂತೆ ಬಸವ ಭಾಂಧವರಲ್ಲದೆ, ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *