‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವಕ್ಕೆ ಮುರುಘಾ ಮಠ ಬದ್ದ’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶರಣ ಸಂಸ್ಕೃತಿ ಉತ್ಸವ ೨೦೨೫ರ ಅಂಗವಾಗಿ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶ ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ತಿಂಥಣಿ ಕನಕಗುರು ಪೀಠದ ಶ್ರೀ ಸಿದ್ಧರಮಾನಂದಪುರಿ ಸ್ವಾಮಿಗಳು ಮಾತನಾಡಿ, ಶೂನ್ಯಪೀಠದ ಪರಂಪರೆಯ ಅಧಿಕೃತ ಮಠವು ಶ್ರೀ ಮುರುಘಾ ಮಠವಾಗಿದೆ ಎಂದರು.

೧೨ನೇ ಶತಮಾನದಲ್ಲಿ ಬಸವಣ್ಣನವರ ಹೋರಾಟಕ್ಕೆ ಬೆನ್ನೆಲುಬಾಗಿ ಗಂಗಾಬಿಕೆ, ನೀಲಾಂಬಿಕೆ ಮತ್ತು ಅಕ್ಕ ನಾಗಮ್ಮ ತ್ಯಾಗ ಮಾಡಿದ್ದಾರೆ. ಭಾರತದ ಹೆಮ್ಮೆಯ ಸಂಸ್ಕೃತಿ ಅದಿವಾಸಿ ಸಂಸ್ಕೃತಿ. ನಮ್ಮದು ಮಾತೃ ಪ್ರಧಾನ ಸಂಸ್ಕೃತಿಯಾಗಿದೆ. ಹಿಂದೆ ದಬ್ಬಾಳಿಕೆ, ಸ್ತ್ರೀ ಅಸಮಾನತೆ, ಜಾತಿ ಅಸಮಾನತೆಯನ್ನು ನಿವಾರಿಸಲು ಬಸವಣ್ಣನವರು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣಿ ಎಂಬ ಸಂದೇಶವನ್ನು ನೀಡಿದರು.

ವಚನದರ್ಶನ ಮುಖಾಂತರ ಭಗವಂತನ ದರ್ಶನ ಕಾಣಬೇಕಾಗಿದೆ. ನಮ್ಮ ಸಂಸ್ಕೃತಿ ಶರಣ ಸಂಸ್ಕೃತಿ. ಆದ್ದರಿಂದ ಮಕ್ಕಳನ್ನು ಕುಟುಂಬದ ನಡುವೆ ಬೆಳೆಸಿ ಸಂಸ್ಕಾರವನ್ನು ಕಲಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನ ಸಂಬಂಧಗಳು ಹಾಳಾಗುತ್ತಿವೆ. ಪರಸ್ಪರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳಿದರು.

ಅಖಿಲ ಭಾರತ ಶರಣ ಪರಿಷತ್ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರ ಅಸ್ತಿತ್ವ ಚಿಂತನೆ ಮತ್ತು ಜಾಗೃತಿಯನ್ನು ಮಾಡಿದರು. ಶರಣೆ ಅಕ್ಕಮಹಾದೇವಿ ಕನ್ನಡ ನಾಡಿನ ಸ್ತ್ರೀಕುಲದ ಅದರ್ಶ ಮಹಿಳೆ. ಆಯ್ದಕ್ಕಿ ಲಕ್ಕಮ್ಮ ವಿಶಿಷ್ಟ ಕಾಯಕ ಸಿದ್ದಾಂತವನ್ನು ಪ್ರತಿಪಾದನೆ ಮಾಡಿದ ಶರಣೆಯಾಗಿದ್ದಾರೆ.

೧೨ನೇ ಶತಮಾನದಲ್ಲಿ ಶರಣ ಶರಣೆಯರು ಪ್ರಾಮಾಣಿಕತೆ, ನಡೆ ನುಡಿಗಳ ಸ್ವಾಭಿಮಾನವಾಗಿ ಬದುಕಿದವರು. ಅರ್ಥಿಕ ಸಂಹಿತೆ, ನೀತಿ ಸಂಹಿತೆ ಮತ್ತು ನೈತಿಕ ಮೌಲ್ಯಗಳನ್ನು ಏಕಕಾಲದಲ್ಲಿ ೩೩ ಶರಣೆಯರು ವೈಚಾರಿಕ ಚಿಂತನೆಗಳ ಮೂಲಕ ಸ್ತ್ರೀ ಸ್ವತಂತ್ರ ಭದ್ರವಾದ ಬುನಾದಿಯನ್ನು ಹಾಕಿದವರು. ಇಂತಹ ಶರಣೆಯರ ಜೀವನದ ಅದರ್ಶ ಮೌಲ್ಯಗಳನ್ನು ಇಂದಿನ ಮಹಿಳೆಯರು ಪಾಲಿಸಬೇಕಿದೆ. ಈ ಸಮಾಜದಲ್ಲಿ ಮಾನವ ಸಂವಿಧಾನ, ಜೀವ ಸಂವಿಧಾನ, ಶರಣೆಯರು ಈ ನೆಲದಲ್ಲಿ ಬಿತ್ತಿದ್ದಾರೆ ಎಂದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಬಸವತತ್ವದ ವೈಚಾರಿಕ ತಳಹದಿಯ ಮೇಲೆ ಸಮಾಜದ ಪರಿವರ್ತನೆಗೆ ಶರಣ ಸಂಸ್ಕೃತಿ ಉತ್ಸವವು ಆರಂಭದಿಂದಲೂ ಸಾಮಾಜಿಕ ಬದ್ಧತೆ, ಜನಜಾಗೃತಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿಯಲ್ಲಿ ಶ್ರೀ ಮಠವು ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸುತ್ತಾ ಬಂದಿದೆ.

೧೨ನೇ ಶತಮಾನದಲ್ಲಿ ಬಸವಾದಿ ಶರಣರು ಲಿಂಗ ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದವರು ಎಂದು ನುಡಿದರು.

ಬೆಂಗಳೂರಿನ ಮನೋವೈದ್ಯರಾದ ಡಾ. ಸೌಜನ್ಯ ವಸಿಷ್ಠ ಅವರು ಮಹಿಳಾ ಸಬಲೀಕರಣ ಕುರಿತು ಮಾತನಾಡುತ್ತಾ, ಚಿತ್ರದುರ್ಗ ಧೈರ್ಯದ ಸಂಕೇತ ನಮ್ಮ ಓನಕೆ ಒಬವ್ವ. ಅಧುನಿಕ ಸಂದರ್ಭದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಮುನ್ನಡಿ ಬರೆದಿದ್ದಾರೆ. ಪ್ರಸ್ತುತ ಸಂದರ್ಭಗಳಲ್ಲಿ ಮಹಿಳೆಯರು ಸಾಮಾಜಿಕ ಮಾಧ್ಯಮಗಳಿಂದ ಅಸುರಕ್ಷಿತ ಮನೋಭಾವ ಕಾಣುತ್ತಿದ್ದಾರೆ. ಅದ್ದರಿಂದ ಮಹಿಳೆಯರು ಸ್ವತಂತ್ರವಾಗಿ ಅಲೋಚನೆ ಮಾಡಿ ಧೈರ್ಯ ಮತ್ತು ಸ್ವತಂತ್ರವಾಗಿ ಅಭಿವ್ಯಕ್ತ ಮಾಡುವುದನ್ನು ಕಲಿಯಿರಿ. ಅಭದ್ರತೆ ಯೋಚನೆಯಿಂದ ಹೊರಬನ್ನಿ.

ಪ್ರಪಂಚ ಬಹಳ ವಿಶಾಲವಾಗಿದೆ, ಪ್ರತಿಯೊಬ್ಬರಿಂದ ಕಲಿಯುವ ಅನೇಕ ವಿಷಯಗಳು ಇರುತ್ತವೆ. ಮೊಬೈಲ್ ಗೀಳಿನಿಂದ ಹೊರಗೆ ಬನ್ನಿ. ಮಹಿಳೆಯರು ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಬೇಕು. ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯಿರಿ. ಮಹಿಳೆಯರು ಅಧುನಿಕ ಸಂಕೋಲೆಗಳನ್ನು ಧೈರ್ಯವಾಗಿ ಎದುರಿಸಿ ನಮ್ಮ ಜೀವನದ ಭದ್ರತೆಯನ್ನು ಪಡೆದುಕೊಳ್ಳುವುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಸವತತ್ತ್ವ ಪೀಠದ ಬಸವ ಮರಳುಸಿದ್ದ ಸ್ವಾಮಿಗಳು, ಹಾಲಸ್ವಾಮಿ ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮಿಗಳು, ಹಾವೇರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಯಶೋಧ ವಂಟಗೋಡಿ, ಹಿಂದುಳಿದ ವರ್ಗಕಲ್ಯಾಣ ಇಲಾಖೆಯ ಪುಷ್ಪಲತಾ, ಕಲ್ಬುರ್ಗಿ ನೀಲಾಂಬಿಕೆ ಅಕ್ಕನ ಬಳಗದ ಅಧ್ಯಕ್ಷರಾದ ಜಯಶ್ರೀ ಚಟ್ನಳ್ಳಿ. ರೆಡ್‌ಕ್ರಾಸ್ ಸಂಸ್ಥೆಯ ಗಾಯಿತ್ರಿ ಶಿವರಾಂ, ಚಿಂತಕ ಪಾಲನೇತ್ರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಜಯದೇವಿ ಸ್ವಾಗತಿಸಿ, ನೇತ್ರಾವತಿ ಎಸ್. ಆರ್ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ, ಚಂದ್ರವಳ್ಳಿ ಎಸ್.ಜೆ.ಎಂ ಕಾಲೇಜ್, ಎಸ್.ಜೆ.ಎಂ ಮಹಿಳಾ ಕಾಲೇಜು, ಎಸ್.ಜೆ.ಎಂ ನರ್ಸಿಂಗ್ ಕಾಲೇಜು, ಎಸ್.ಜೆ.ಎಂ. ಫಾರ್ಮಸಿ ಕಾಲೇಜು, ಎಸ್.ಜೆ.ಎಂ. ದಂತ ಮಹಾವಿದ್ಯಾಲಯ, ಎಸ್.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯ, ಎಸ್.ಜೆ.ಎಂ. ಪಾಲಿಟೆಕ್ನಿಕ್, ಬೃಹನ್ಮಠ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಚಿತ್ರದುರ್ಗ ಲಿಂಗಾಯತ ಮಹಾಸಭಾ ಮಹಿಳಾ ವೇದಿಕೆಯವರು ನೃತ್ಯ ಪ್ರದರ್ಶನ ನೀಡಿದರು. ವಾಣಿಜ್ಯೋದ್ಯಮಿಗಳಾದ ಕೆ.ವಿ ಪ್ರಭಾಕರ್, ಸೀಬಾರದ ಶ್ರೀ ನಿಜಲಿಂಗಪ್ಪ ಟ್ರಸ್ಟ್ ಧರ್ಮದರ್ಶಿಗಳಾದ ಕೆಇಬಿ ಷಣ್ಮುಖಪ್ಪ ಸೇವಾರ್ಥಿಗಳಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *