ಬಸವಕಲ್ಯಾಣ
ಬಸವಣ್ಣನವರು ೧೨ನೇ ಶತಮಾನದ ಶ್ರೇಷ್ಠ ತತ್ವಜ್ಞಾನಿ, ಸಮಾಜ ಸುಧಾರಕರು ಎಂದು ಆಂಧ್ರ ಪ್ರದೇಶದ ಶ್ರೀ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಸ್. ಜಯರಾಂರೆಡ್ಡಿ ಹೇಳಿದರು.
ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಒಂಬತ್ತನೇ ದಿನ ನಡೆದ ಬಸವ ಬೆಳಕು ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ತಮ್ಮ ಜ್ಞಾನದಿಂದ ಅನುಭವ ಮಂಟಪ ಸ್ಥಾಪಿಸಿದರು, ಅಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಆಧ್ಯಾತ್ಮಿಕ ಮತ್ತು ಲೌಕಿಕ ವಿಷಯಗಳನ್ನು ಚರ್ಚಿಸಿದರು. ಯಾವುದೇ ಧರ್ಮ, ಜಾತಿ ವ್ಯತ್ಯಾಸವಿಲ್ಲದೇ ಲಿಂಗ ಧರಿಸಿದವರೆಲ್ಲರೂ ಲಿಂಗಾಯತರು.

ಬಸವಣ್ಣ ವಿಶ್ವಗುರು ಅವರ ತತ್ವಗಳು ವಿಚಾರಕ್ಕೆ ಮಾತ್ರ ಸಿಮೀತವಲ್ಲ ಅವುಗಳನ್ನು ಆಚರಣೆಗೆ ತರಬೇಕು. ಇಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಭೌತಿಕ ಕಟ್ಟಡವಾಗದೆ ಜ್ಞಾನ ಪ್ರಸಾರದ ಕೇಂದ್ರವಾಗಲಿ ಎಂದು ಜಯರಾಂರೆಡ್ಡಿ ಹೇಳಿದರು.
ಮುಖ್ಯ ಅತಿಥಿ ಹೈದ್ರಾಬಾದದ ತೆಲುಗು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ತಾಂಗೇಡ ಕಿಸಾನರಾವ ಮಾತನಾಡಿ, ಬಸವಕಲ್ಯಾಣ, ಕೂಡಲಸಂಗಮ, ಬಸವನ ಬಾಗೇವಾಡಿ ಪವಿತ್ರ ಕ್ಷೇತ್ರಗಳು. ಚಾತುರ್ವರ್ಣ ವ್ಯವಸ್ಥೆ ವಿರುದ್ಧ ಸರ್ವಸಮಾನತೆಯ ಸಾರಿದ ನೆಲದಲ್ಲಿದ್ದ ಅನುಭವ ಮಂಟಪ ಜ್ಞಾನ ವಿಶ್ವವಿದ್ಯಾಲಯವಾಗಿತ್ತು ಎಂದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಾಸ್ತಾವಿಕ ಮಾತನಾಡಿ, ೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಂತರ ಬಸವಣ್ಣನವರ ಚರಿತ್ರೆ ಉಳಿಸಿದ್ದು ತೆಲುಗುವಿನಲ್ಲಿ ರಚನೆಯಾದ ಬಸವ ಪುರಾಣ. ಅನುಭವ ಮಂಟಪದ ಮೂಲಕ ಸರ್ವಸಮಾನತೆಯ ತತ್ವಗಳನ್ನು ಹೇಳಿದ ಪವಿತ್ರ ನೆಲ ಬಸವಕಲ್ಯಾಣ. ಮಾನವೀಯ ಮೌಲ್ಯಗಳನ್ನು ಹೊಂದಿರುವ ವಚನಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಉಪಾಧ್ಯಕ್ಷ ಡಾ. ಜಿ.ಎಸ್. ಭುರಾಳೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಬಸವಾದಿ ಶರಣರ ತತ್ವಗಳು ಇಂದು ಮುಂದು ಎಂದೆಂದಿಗೂ ಶಾಶ್ವತ. ಇವುಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಕೇರಳ ಬಸವ ಸಮಿತಿ ಅಧ್ಯಕ್ಷ ಕೆ. ಪ್ರಸನ್ನಕುಮಾರ ಮಾತನಾಡಿದರು. ಮುಖಂಡ ಶಿವರಾಜ ನರಶೆಟ್ಟಿ, ಬಿಡಿಪಿಸಿ ನಿರ್ದೇಶಕರಾದ ಜಗನ್ನಾಥ ಖೂಬಾ, ಬೀದರ ವಚನ ಚಾರಿಟೆಬಲ್ ಸೊಸೈಟಿ ಅಧ್ಯಕ್ಷ ಡಾ. ಸುರೇಶ ಪಾಟೀಲ, ವಚನ ಸೌಹಾರ್ದ ಪತ್ತಿನ ಸಹಕಾರ ಸಂಘ, ಬೀದರ ಅಧ್ಯಕ್ಷರಾದ ಶಿವಕುಮಾರ ಸಾಲಿ, ಜಹೀರಾಬಾದನ ವೀರಯ್ಯ ಸ್ವಾಮಿ, ಲಕ್ಷ್ಮಿಕಾಂತ ಜ್ಯಾಂತೆ, ಶಿವಕುಮಾರ ಕುದುರೆ, ರೇವಣಸಿದ್ಧ ಸುಗೂರೆ ಮಂಠಾಳ, ಲಾತೂರಿನ ಭೀಮರಾವ ಪಾಟೀಲ, ಚಂದ್ರಕಾಂತ ಜೋಕಾರೆ, ಸಂಗೀತಾ ಪಟ್ನೆ, ಇಂದುಮತಿ ಅಬ್ದಗಿರೆ ಉಪಸ್ಥಿತರಿದ್ದರು.
ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರೆ, ಸುನೀಲ ಹೆಗ್ಗಣೆ ನಿರೂಪಿಸಿದರು. ಮಹಾರಾಷ್ಟ್ರದ ಶಿವಾನಂದ ದಾಪಶೆಟ್ಕರ ಅವರಿಂದ ನಡೆದ ಬಸವ ಕೀರ್ತನ ಗಮನ ಸೆಳೆಯಿತು.