ಬಸವಕಲ್ಯಾಣ
ಐತಿಹಾಸಿಕ ತ್ರಿಪುರಾಂತ ಕೆರೆ ಹೆಸರು ಬದಲಾವಣೆ ಹಾಗೂ ರೇಣುಕಾಚಾರ್ಯರ ವೃತ್ತ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ರಾಷ್ಟ್ರೀಯ ಬಸವದಳ, ಬಸವತತ್ವ ಪ್ರಸಾರ ಕೇಂದ್ರ ಮತ್ತು ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳ ಬಸವಕೇಂದ್ರದ ವತಿಯಿಂದ ನಗರಸಭೆ ಆಯುಕ್ತ ರಾಜೀವ ಬಣಕಾರ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಲಾಯಿತು.
‘ನಗರದಲ್ಲಿ ಹಮ್ಮಿಕೊಂಡಿರುವ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು, ವಿಜಯದಶಮಿಯ ದಿನದಂದು ವೃತ್ತ ಉದ್ಘಾಟನೆಗೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ಶಾಸಕರಿಗೆ ಸಲಹೆ ನೀಡಿದ್ದರು. ಕೆರೆಗೆ ರೇವಣಸಿದ್ಧರ ಹೆಸರಿಡಬೇಕು ಎಂದೂ ಆಗ್ರಹಿಸಿದ್ದರು. ಒಂದು ವೇಳೆ ಹಬ್ಬದ ದಿನ ಅಂತಹ ನಿರ್ಧಾರ ಕೈಗೊಂಡರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ’ ಎಂದು ಮುಖಂಡರು ತಿಳಿಸಿದರು.
‘ತ್ರಿಪುರಾಂತ ಕೆರೆಯ ಬಗ್ಗೆ 12ನೇ ಶತಮಾನದ ಶರಣರ ವಚನಗಳಲ್ಲಿ ಮತ್ತು ಶಾಸನಗಳಲ್ಲಿ ಉಲ್ಲೇಖವಿದೆ. ಆದರೂ ಈ ಬಗ್ಗೆ ಇಲ್ಲಸಲ್ಲದ ಕತೆಕಟ್ಟಿ ಹೇಳುವುದು ಸರಿಯೇ? ಶರಣರ ನಿಜಚರಿತ್ರೆಗೆ ಇದರಿಂದ ಅಪಚಾರ ಆಗುತ್ತದೆ. ಬಸವನಾಡಿನಲ್ಲಿ ಶರಣ ಸಂಸ್ಕೃತಿಗೆ ವಿರುದ್ಧವಾದ ದಸರಾ ದರ್ಬಾರ್ ನಡೆಸಲು ಯಾರೂ ಅಪಸ್ವರ ಎತ್ತಲಿಲ್ಲ. ಹೀಗೆಂದಾಗ ಇಲ್ಲಿ ಏನು ಮಾಡಿದರೂ ನಡೆಯುತ್ತದೆ. ಎಂದರ್ಥವಲ್ಲ. ಸಮಾಜದಲ್ಲಿ ಅಶಾಂತಿ ಮೂಡಿಸುವ ಇಂಥ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಕೋಳಕೂರ, ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ಬಸವತತ್ವ ಪ್ರಸಾರ ಕೇಂದ್ರದ ಪ್ರಮುಖರಾದ ಪ್ರೊ. ಹೆಚ್.ಜಿ. ಕರಣೆ, ಗುರುನಾಥ ಉಮರ್ಗೆ, ಲಕ್ಷ್ಮೀಬಾಯಿ ಪಾಟೀಲ, ಸಚಿನ್ ಕೌಟೆ, ಮಹಾದೇವ ಮಹಾಜನ, ಶಿವಪುತ್ರ ಸಂಗನಬಸವ, ಶಿವಕುಮಾರ ಬಿರಾದಾರ, ಬಸವರಾಜ ಬೇಲೂರೆ ಉಪಸ್ಥಿತರಿದ್ದರು.
