ಕಲಬುರ್ಗಿ ಅವರಿಗೆ ಮರಣೋತ್ತರ ಸಿದ್ಧಲಿಂಗ ಶ್ರೀ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಐದು ಲಕ್ಷ ಪ್ರಶಸ್ತಿ ಹಣ ಸಮಾಜಕ್ಕೆ ನೀಡಿದ ಉಮಾದೇವಿ ಕಲಬುರ್ಗಿ

ಗದಗ

ಇಲ್ಲಿನ ಜಗದ್ಗುರು ತೋಂಟದಾರ್ಯ ಮಠದಲ್ಲಿ ಶುಕ್ರವಾರ ಖ್ಯಾತ ಸಾಹಿತಿಗಳು-ಸಂಶೋಧಕರಾಗಿದ್ದ ನಾಡೋಜ ಲಿಂ. ಡಾ. ಎಂ.ಎಂ. ಕಲಬುರ್ಗಿಯವರಿಗೆ ಮರಣೋತ್ತರವಾಗಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರ್ಗಿಯವರ ಧರ್ಮಪತ್ನಿ ಉಮಾದೇವಿ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಕಂಬಳಿ, ಅಂಬಲಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ ಎಂಬ ತತ್ವದಂತೆ ಬದುಕಿದ್ದ ಡಾ. ಎಂ.ಎಂ. ಕಲಬುರ್ಗಿಯವರಂತೆ ಅವರ ಧರ್ಮಪತ್ನಿ ಕೂಡ ಅವರ ತತ್ವವನ್ನು ಅನುಸರಿಸಿ ಐದು ಲಕ್ಷ ರೂಪಾಯಿ ಮೊತ್ತದ ಈ ಪ್ರಶಸ್ತಿಯ ಹಣವನ್ನು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಯ ನೌಕರರ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಿ ಎಂದು ಪೂಜ್ಯರಿಗೆ ಮರಳಿಸಿದರು.

ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೭ನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ ಅವರು ಕೃತಜ್ಞತಾ ನುಡಿಗಳನ್ನಾಡಿ, ಈ ಸಮಾರಂಭದಲ್ಲಿ ನನಗೆ ಸಂತಸ ಹಾಗೂ ಸಂಕಟ ಎರಡೂ ಭಾವಗಳು ಉಂಟಾಗುತ್ತಿವೆ. ನನ್ನ ಗುರುಗಳಿಗೆ ಗುರುಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಸಂತಸ ಒಂದೆಡೆಯಾದರೆ, ಇಬ್ಬರೂ ಗುರುಗಳು ನಮ್ಮನ್ನು ಅಗಲಿರುವ ದು:ಖ ಇನ್ನೊಂದೆಡೆ.

ಈ ದೇಶದ ಖ್ಯಾತ ಸಂಶೋಧಕರಾಗಿದ್ದ ಡಾ. ಎಂ.ಎಂ. ಕಲಬುರ್ಗಿಯವರು ಕರ್ನಾಟಕ ಸಾಹಿತ್ಯ ಆಕಾಡೆಮಿಯಿಂದ ಆರು ಪ್ರಶಸ್ತಿಯನ್ನು ಪಡೆದ ಏಕೈಕ ಸಾಹಿತಿಗಳಾಗಿದ್ದರು.

ತೋಂಟದಾರ್ಯ ಶಿಕ್ಷಣ ಸಂಸ್ಥೆಯ ನೌಕರರು ಬೆವರು ಸುರಿಸಿ ದುಡಿದ ಹಣವನ್ನು ಒಳಗೊಂಡ ಐದು ಲಕ್ಷ ರೂಪಾಯಿ ಮೊತ್ತದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟೀಯ ಪ್ರಶಸ್ತಿಗೆ ಅದರದ್ದೇ ಆದ ಮಹತ್ವ ಇದೆ.

ಕಂಬಳಿ, ಅಂಬಲಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ ಎಂದು ನುಡಿದ ಡಾ.ಎಂ.ಎಂ. ಕಲಬುರ್ಗಿಯವರು ನಿರ್ಮೋಹಿಗಳಾಗಿದ್ದರು. ಎಷ್ಟೆಲ್ಲ ಪ್ರಶಸ್ತಿಗಳು, ಪದವಿಗಳು ಲಭಿಸಿದರೂ ಅವುಗಳಿಂದ ಬೀಗುವಂಥ ಜಾಯಮಾನ ಅವರದ್ದಾಗಿರಲಿಲ್ಲ.

ಕಾಯಕ, ಶ್ರಮ-ಶ್ರದ್ಧೆ ಹಾಗೂ ಸಮಾಜಕ್ಕೆ ಅರ್ಪಿತವಾದ ಬದುಕು ಅವರದ್ದಾಗಿತ್ತು. ಕಲಬುರ್ಗಿಯವರು ಒಡಲೆರೆಡು ಜೀವವೊಂದು ಎಂಬಂತೆ ಸಿದ್ಧಲಿಂಗ ಶ್ರೀಗಳೊಡನೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಇಂದಿನ ಸಂಕೀರ್ಣ ವ್ಯವಸ್ಥೆಯ ಅಂಕು-ಡೊಂಕುಗಳನ್ನು ಗಟ್ಟಿಯಾಗಿ ಪ್ರಶ್ನಿಸಲು ಹಾಗೂ ಸಮಕಾಲೀನ ಗೊಂದಲಗಳಿಗೆ ಪರಿಹಾರ ಸೂಚಿಸಲು ನನ್ನ ಗುರುಗಳಾದ ಡಾ. ಎಂ.ಎಂ. ಕಲಬುರ್ಗಿಯವರು ಬದುಕಿರಬೇಕಿತ್ತು.

ಅವರು ಇಲ್ಲ ಎನ್ನುವ ಕೊರಗು ನಿರಂತರ ಬಾಧಿಸುತ್ತದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹೀಗೆ ಅನೇಕ ವಿಷಯಗಳ ಕುರಿತು ಮಾರ್ಗದರ್ಶನ ಮಾಡಬಲ್ಲ ಚೈತನ್ಯ ಅವರಾಗಿದ್ದರು.
ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಕುರಿತು ಅವರಿಗಿದ್ದ ನಿಲುವುಗಳು ನಿಜಕ್ಕೂ ಉತ್ಕೃಷ್ಠವಾಗಿದ್ದವು. ಅವರ ಬರಹಗಳನ್ನು ಪುನರಾವಲೋಕನ ಮಾಡಿದಾಗ ಅವರಿಗೆ ನಾಡಿನ ಭವಿಷ್ಯದ ಕುರಿತು ಇದ್ದ ಅದಮ್ಯ ಕಾಳಜಿಯ ಅರಿವಾಗುತ್ತದೆ.

ಅವರು ವ್ಯಕ್ತಿಗತ ಚಿಂತಕರಲ್ಲ, ಸಮಷ್ಠಿಪ್ರಜ್ಞೆಯುಳ್ಳ ಶೋಧನಾ ಮನೋಭಾವದವರಾಗಿದ್ದರು. ನೀತಿಯುಕ್ತ ರಾಜಕಾರಣದ ಪ್ರತಿಪಾದಕರಾಗಿದ್ದ ಅವರು ಶಿಸ್ತಿಗೆ ವ್ಯಾಖ್ಯಾನರಾಗಿದ್ದರು. ನನ್ನ ಗುರುಗಳಾಗಿ ನನ್ನ ಜ್ಞಾನವಲಯ ವಿಸ್ತರಿಸಿದ ಡಾ.ಎಂ.ಎಂ ಕಲಬುರ್ಗಿಯವರಿಗೆ ಸಾವಿಲ್ಲ, ಅವರ ಹೆಸರು ಈ ನಾಡು ಇರುವವರೆಗೆ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.

ಮಾಜಿ ಶಾಸಕರಾದ ಡಿ.ಆರ್ ಪಾಟೀಲ ಮಾತನಾಡಿ, ನನಗೆ ಡಾ. ಎಂ.ಎಂ. ಕಲಬುರ್ಗಿಯವರ ಬಗೆಗೆ ಅಪಾರ ಗೌರವವಿದೆ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಡಾ. ಎಂ.ಎಂ ಕಲಬುರ್ಗಿಯವರು ನಾವೆಲ್ಲ ಒಂದು ಎಂಬ ಸೌಹಾರ್ದತೆಯಲ್ಲಿ ನಂಬಿಕೆಯನ್ನಿರಿಸಿದ ದಿಗ್ಗಜರು.

ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ವಿಚಾರಗಳನ್ನಲ್ಲ. ಸಮಸಮಾಜವನ್ನು ನಿರ್ಮಾಣ ಮಾಡುವಲ್ಲಿ ನಾವೆಲ್ಲ ವಿಫಲರಾಗಿರುವುದು ನಿಜಕ್ಕೂ ಕಳವಳಕಾರಿ, ಸಮಸಮಾಜವನ್ನು ನಿರ್ಮಿಸುವುದೇ ಕಲಬುರ್ಗಿಯವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕನ್ನಡಕ್ಕೆ ಅನುವಾದಿಸಿದ ಗ್ರಂಥ ‘ತೌಲನಿಕ ಧರ್ಮದರ್ಶನ’ ಕೃತಿ ಬಿಡುಗಡೆಗೊಂಡಿತು.

ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಗಳಾದ ಎಸ್.ಎಸ್. ಪಟ್ಟಣಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯರು ನಾಲ್ಕು ದಶಕಗಳ ಕಾಲ ಶ್ರೀಮಠ ಹಾಗೂ ನಾಡಿನಲ್ಲಿ ಸಮಸಮಾಜ ನಿರ್ಮಿಸುವುದಕ್ಕಾಗಿ ಹಗಲಿರುಳು ಶ್ರಮಿಸಿದ್ದರು.

ವಿಜಯದಶಮಿಯ ದಿನ ಶರಣರಿಗೆ ಮರಣವೇ ಮಹಾನವಮಿ ಎಂದು ಭಕ್ತರಿಗೆ ಬನ್ನಿ ನೀಡಿ ಆಶೀರ್ವದಿಸಿದ್ದರು. ಅವರು ಅಂದಂತೆ ಅಂದು ರಾತ್ರಿ ಇಚ್ಛಾಮರಣಿಗಳಾಗಿ ಇಹಲೋಕ ತ್ಯಜಿಸಿ ಬಸವನ ಬಯಲಿನಲ್ಲಿ ಬಯಲಾದ ಘಟನೆ ಊಹೆಗೂ ನಿಲುಕದ ಘಟನೆ ಎಂದು ಸ್ಮರಿಸಿದರು. ಅದೇ ರೀತಿ ಕಲಬುರ್ಗಿಯವರು ನಡೆದು ಬಂದ ಹಾದಿಯನ್ನು ಕೂಡ ಸ್ಮರಿಸಿದರು.

ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡುತ್ತ, ಕಲಬುರ್ಗಿ ಅವರ ಅಗಣಿತ ಸೇವೆಯನ್ನು, ಬಸವತತ್ವ ಬದ್ಧತೆಯನ್ನು ನೆನಪಿಸಿಕೊಳ್ಳುತ್ತಾ, ತಾಯಿ ಉಮಾದೇವಿ ಕಲಬುರ್ಗಿ ಅವರೊಂದಿಗೆ ನಾವೆಲ್ಲ ಇರೋಣವೆಂದರು.

ತೋಂಟದಾರ್ಯ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವಚನ ನೃತ್ಯ ಸಂಗೀತ ಜರುಗಿತು.

ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಸಂಡೂರಿನ ಪ್ರಭು ಮಹಾಂತಸ್ವಾಮಿಗಳು, ಆಳೀಜದ ಕೋರಣೇಶ್ವರ ಶ್ರೀಗಳು, ವೆಂಕಟಾಪೂರ ಶರಣರು, ಬಾಚಿಗೊಂಡನಹಳ್ಳಿ ಶ್ರೀಗಳು, ಡಾ. ಮಹಾಂತದೇವರು, ಯಶವಂತಪುರ ಶ್ರೀಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ ಸನದಿ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಡಾ. ಹನುಮಾಕ್ಷಿ ಗೋಗಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಅಮರೇಶ ಸಂಗಡಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ ಸೇರಿದಂತೆ ಮುಂಡರಗಿ, ಗದಗ, ಗಜೇಂದ್ರಗಡ, ಅಣ್ಣಿಗೇರಿ, ಕುಷ್ಟಗಿ, ಕೊಪ್ಪಳ, ವಿಜಯಪೂರ, ಬಾಗಲಕೋಟೆ, ಸಿಂದಗಿ, ಜೇವರ್ಗಿ, ಮಾಲಗತ್ತಿ, ಆಲಮಟ್ಟಿ, ಹಾವೇರಿ, ಡಂಬಳ, ಆಳಂದ, ನರಗುಂದ ಮುಂತಾದ ಊರುಗಳಿಂದ ಸಿದ್ಧಲಿಂಗ ಶ್ರೀ, ಕಲಬುರ್ಗಿ ಅವರ ಸಾವಿರಾರು ಭಕ್ತರು-ಅಭಿಮಾನಿಗಳು ಆಗಮಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *