ಬಸವಕಲ್ಯಾಣ
ವಚನಗಳನ್ನು ಅರ್ಥ ಮಾಡಿಕೊಂಡು ಆಚರಿಸುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ. ಪರಿಶುದ್ಧ ಮನಸ್ಸಿನಲ್ಲಿ ಪರಮಾತ್ಮನಿರುತ್ತಾನೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಬಸವಕಲ್ಯಾಣ ವತಿಯಿಂದ, ಇಲ್ಲಿನ ಹರಳಯ್ಯನವರ ಗವಿಯಲ್ಲಿ ೧೧ ದಿವಸಗಳ ಕಾಲ ನಡೆದ ಶರಣ ವಿಜಯೋತ್ಸವ ನಾಡ ಹಬ್ಬ ಹುತಾತ್ಮ ದಿನಾಚರಣೆ ಮಂಗಲ ಸಮಾರಂಭದ ದಿವ್ಯಸಾನಿಧ್ಯ ವಹಿಸಿಕೊಂಡು ಮಾತನಾಡಿದರು.
ವಚನಗಳು ಕೇವಲ ಪದಗಳಲ್ಲ ಅವು ಆಳವಾದ ಜೀವಾನಾನುಭವದಿಂದ ಕೂಡಿದ್ದವು. ವಚನ ಸಾಹಿತ್ಯವು ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ನೀಡುತ್ತದೆ. ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ಕಲಿಸುತ್ತದೆ. ಅವುಗಳ ಅಧ್ಯಯನದಿಂದ ವ್ಯಕ್ತಿಯ ಮನಸ್ಸಿನ ಮೈಲಿಗೆ ತೊಳೆದು ಮನಸ್ಸಿನಲ್ಲಿ ಶಾಂತಿ, ಸಮಾಧಾನ, ಪರಿಶುದ್ಧತೆ ನೆಲೆಸುತ್ತದೆ. ನಮ್ಮದು ಬಸವ ಪರಂಪರೆ, ಕಾಯಕ ದಾಸೋಹ ಮಹತ್ವ ನೀಡುತ್ತದೆ.

ಏಕದೇವೋಪಾಸಕರಾಗಿ ಇಷ್ಟಲಿಂಗಧಾರಿಗಳಾಗಿ ಪ್ರತಿದಿನ ಪೂಜಿಸಬೇಕು. ಅಲ್ಲದೇ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸಾಮಾಜಿಕ ಪ್ರಭುತ್ವಕ್ಕೆ ಅಡಿಪಾಯ ಹಾಕಿತ್ತು ಎಂದು ನುಡಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ ಜ್ಯೋತಿ ಬೆಳಗಿಸಿ ಮಾತನಾಡಿ, ಬಸವಕಲ್ಯಾಣದಲ್ಲಿ ಇಂಥ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿರುವುದು ಅತಿ ಸಂತೋಷವಾಗಿದೆ. ಮುಂದೆ ಈ ಕಾರ್ಯಕ್ರಮ ರಾಷ್ಟ್ರಮಟ್ಟದಾಗಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ತು ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ, ಮುಖಂಡ ಶಿವರಾಜ ನರಶೆಟ್ಟಿ, ಜಿ.ಆರ್. ಪಾಟೀಲ, ಪ್ರೇಮಾ ಪಾಟೀಲ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿ, ಗುಜರಾತನಲ್ಲಿರುವ ಗಾಂಧಿ ಸ್ಮಾರಕವು ಪ್ರತಿಯೊಬ್ಬರು ನೋಡಲೇಬೇಕಾದ ಸ್ಮಾರಕವಾಗಿದೆ ಎಂದರು.
ಪೂಜ್ಯ ಸತ್ಯಕ್ಕತಾಯಿ, ಜಗನ್ನಾಥ ಕುಶನೂರೆ, ಲಕ್ಷ್ಮೀಬಾಯಿ ಪಾಟೀಲ, ದತ್ತಾತ್ರೆಯ ಮೂಲಗೆ, ಗಣಪತಿ ಕಾಸ್ತೆ, ಸುಜಾತಾ ತೊಗರಖೇಡೆ, ವೀರಶೆಟ್ಟಿ ಇಮ್ಮಡಾಪೂರ ಮಾತನಾಡಿದರು.
ಬಸವತತ್ವ ಪ್ರಸಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಮಲ್ಲಮ್ಮತಾಯಿ, ಶ್ರೀದೇವಿ ಭೂಮಾ, ಶಿವರಾಜ ನೀಲಕಂಠೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುನ್ನಮ್ಮಾ ಕೌಡಾಳೆ ಸ್ವಾಗತಿಸಿದರೆ, ರಾಣಿ ವಡ್ಡೆ ನಿರೂಪಿಸಿದರು. ರಂಜನಾ ಬೂಶೆಟ್ಟಿ ಮತ್ತು ಶರಣಪ್ಪ ಜಮಾದಾರ ವಚನ ಸಂಗೀತ ನಡೆಸಿಕೊಟ್ಟರು. ಸಂಗಮೇಶ ತೊಗರಖೇಡೆ ಶರಣು ಸಲ್ಲಿಸಿದರು.
ಇದಕ್ಕೂ ಮುನ್ನ ಸಾಮೂಹಿಕವಾಗಿ ೧೦೮ ವಚನಗಳನ್ನು ಸಂಗೀತದೊಂದಿಗೆ ಸುಶ್ರಾವ್ಯವಾಗಿ ಪಠಿಸಲಾಯಿತು. ಕೊನೆಗೆ ಎಲ್ಲರೂ ಶರಣ ವಿಜಯೋತ್ಸವದ ಶುಭಾಷಯ ಕೋರಿದರು.