‘೧೦ ಸಾವಿರ ಗಾಯಕರ ವಚನ ಝೇಂಕಾರ ಆಯೋಜಿಸುವ ಚಿಂತನೆ’

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಈ ಬಾರಿಯ ವಚನ ಝೇಂಕಾರದಲ್ಲಿ ಐದು ಸಾವಿಕ್ಕೂ ಹೆಚ್ಚು ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ೧೦ ಸಾವಿರ ಜನರಿಂದ ವಚನ ಝೇಂಕಾರ ಕಾರ್ಯಕ್ರಮ ಆಯೋಜಿಸುವ ಚಿಂತನೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಚಿತ್ರದುರ್ಗ ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರ ಮಾತಿನಂತೆ ನಮ್ಮಲ್ಲಿ ಸ್ವಂತಿಕೆ ಇರಬೇಕಾದರೆ ಸಂಸ್ಕಾರ ಇರಬೇಕು. ಆಗ ಮಾತ್ರ ನಮ್ಮ ಜೀವನ ಯಶಸ್ವಿಯಾಗುತ್ತದೆ.

ಆಸೆಯೇ ದುಃಖಕ್ಕೆ ಮುಖ್ಯ ಕಾರಣ. ನಾವು ನಡೆಯುವ ದಾರಿ ನಮ್ಮದಾಗಬೇಕಾದರೆ ಸರಿಯಾದ ಮಾರ್ಗದಲ್ಲಿ ನಡೆಯಬೇಕು.

ವಚನಗಳನ್ನು ಮನ ಮನೆಗಳಿಗೆ ತಲುಪಿಸುವ ಕೆಲಸವು ವಚನ ಝೇಂಕಾರ ಕಾರ್ಯಕ್ರಮದಿಂದ ಆಗಿದೆ. ನಾಡಿನ ಸದ್ಭಕ್ತರಿಗೆಲ್ಲ ಶ್ರೀ ಮುರುಗೇಶನ ಆಶೀರ್ವಾದ ಸದಾ ಇರಲಿ ಎಂದು ನುಡಿದರು.

ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಮಾತನಾಡಿ, ನಮಸ್ಕಾರಕ್ಕೆ ಬದಲಾಗಿ ಇಂದು ಶರಣು-ಶರಣಾರ್ಥಿ ಪದ ಬಳಕೆ ಹೆಚ್ಚಾಗುತ್ತಿದೆ. ಬಸವಣ್ಣನವರ ವ್ಯಕ್ತಿತ್ವ, ಚಿಂತನೆಗಳು ಎಲ್ಲಾ ಭಾಷೆಗಳಲ್ಲಿಯೂ ಪ್ರಕಟವಾಗಬೇಕು. ಮುಂದಿನ ಬಸವ ಜಯಂತಿ ವೇಳೆ ಹಲವು ಭಾಷೆಗಳಲ್ಲಿ ವಚನಗಳನ್ನು ಪ್ರಕಟ ಮಾಡುತ್ತೇವೆ.

ವಚನ ಮತ್ತು ಲಿಂಗಪ್ರಜ್ಞೆ ಹೆಚ್ಚಾಗಬೇಕು. ಸೃಷ್ಟಿಗಿಂತ ಮೊದಲೇ ಶರಣರು ಉದಯಿಸಿದರು. ಬಸವಣ್ಣನವರ ವಚನಗಳು ಪ್ರಮುಖವಾಗಿವೆ. ಭಾವಲಿಂಗ ಪ್ರಾಣಲಿಂಗವಾಗಿ, ಇಷ್ಟಲಿಂಗವಾಗಿ ಮನಸ್ಸಿನಲ್ಲಿ ಮನದೊಡೆಯನನ್ನು ಸ್ಥಾಪಿಸಿಕೊಳ್ಳೋಣ. ಶರಣ ಎಂದರೆ ತನ್ನನ್ನು ತಾನು ಅರಿತುಕೊಳ್ಳುವವರು ಎಂದು ತಿಳಿಸಿದರು.

ಮಾಜಿ ಶಾಸಕ ಮಹಿಮಾ ಪಟೇಲ್‌ ಅವರು ಮಾತನಾಡಿ, ಪರಿಸರದ ಬಗ್ಗೆ ಕಾಳಜಿ ಇಂದು ಕಾಣುತ್ತಿಲ್ಲ. ೩೩೦೦೦ ಸಾವಿರ ಕೆರೆಗಳ ಪೈಕಿ ಇಂದು ಕೇವಲ ೩೦೦೦ ಕರೆಗಳು ಮಾತ್ರ ಉಳಿದಿವೆ. ಹಾಗಾಗಿ ನಮ್ಮಲ್ಲಿ ಪರಿಸರ ಕಾಳಜಿ ಅಗತ್ಯವಿದೆ. ಕೆರೆಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ.

ಈ ಶರಣಸಂಸ್ಕೃತಿ ಉತ್ಸವದಲ್ಲಿ ಕೃಷಿಮೇಳವನ್ನು ಏರ್ಪಡಿಸಿದ್ದು ತುಂಬಾ ಸಂತೋಷವಾಯಿತು. ಇಂದು ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಬದಲಾಗಿವೆ. ಇತ್ತೀಚಿನ ಬೆಳೆಗಳಲ್ಲಿ ವಿಷವು ಹೆಚ್ಚಾಗುತ್ತಿದೆ. ನಾನು ಕಳೆದ ೩೩ ವರ್ಷಗಳಿಂದ ಆರೋಗ್ಯವಾಗಿದ್ದೇನೆ. ವೈದ್ಯರ ಬಳಿ ಹೋಗಿಲ್ಲ. ನಮ್ಮ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿಗಳು ಚೆನ್ನಾಗಿದ್ದರೆ ನಮ್ಮ ಭಾವನೆಗಳು ಚೆನ್ನಾಗಿರುತ್ತವೆ.

ಬಸವಣ್ಣನವರು ವಚನಗಳ ಮೂಲಕ ನಾಡಿನ ಸರ್ವೋದಯದ ಮೂಲವನ್ನು ತಿಳಿಸಿದ್ದಾರೆ. ಸಂತೃಪ್ತ ಭಾವನೆಯಿಂದ ಕೆಲಸ ಮಾಡಿದರೆ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ನುಡಿದರು.

ಬೀದರ್ ಬಸವ ಕೇಂದ್ರದ ಶರಣಪ್ಪ ಮಿಠಾರೆ ಮಾತನಾಡಿ, ೯೦೦ ವರ್ಷಗಳಿಂದ ನಡೆದ ಕ್ರಾಂತಿಯೇ ಬಸವ ಕ್ರಾಂತಿ. ಬಸವಣ್ಣ ಒಂದು ಜಾತಿ ಮತಕ್ಕೆ ಸೇರಿದವರಲ್ಲ. ಬುದ್ಧ, ಮಹಾವೀರ, ಯೇಸು, ಪೈಗಂಬರ್, ಗಾಂಧೀಜಿ, ಅಂಬೇಡ್ಕರ್ ಚಿಂತನೆಗಳಿಗೆ ಬಸವಣ್ಣನವರ ಚಿಂತನೆಗಳಿಗೆ ಸಾಮ್ಯತೆ ಕಂಡು ಬರುತ್ತದೆ.

ಬಸವಣ್ಣನವರಿಗೆ ಸಮಾನರಾದವರೆಂದರೆ ಬಸವಣ್ಣನವರೇ. ಪ್ರಪಂಚದ ೮ನೇ ಅದ್ಬುತ ಬಸವಣ್ಣನವರಾಗಿದ್ದಾರೆ. ನಮ್ಮ ಬದುಕಿನಲ್ಲಿ ಬಸವಣ್ಣನವರನ್ನು ಕಾಣಬೇಕು.

ಇಂದಿನ ಯುವಕರ ಜೀವನ ಆಡಂಬರಕ್ಕೆ ಮಾತ್ರ ಮೀಸಲಾಗಿದೆ. ವಿಶ್ವಸಂಸ್ಥೆಯಲ್ಲಿ ಬಸವಣ್ಣನವರ ಜಯಂತಿಯ ಆಚರಣೆ ಬಂದಿದೆ. ಬಸವಣ್ಣನವರ ಹೆಸರಿನಲ್ಲಿ ಬಸವಸಂಸ್ಕೃತಿ ಹೆಚ್ಚಾಗುತ್ತಿದೆ ಎಂದು ನುಡಿದರು.

ಸಿ.ಎಂ. ಚಂದ್ರಶೇಖರ್ ಮಾತನಾಡಿ, ನಾನು ಮಾತಿಗಿಂತ ಕೃತಿರೂಪಕ್ಕೆ ಇಳಿಯುತ್ತೇನೆ, ಹಾಸನದಲ್ಲಿ ಬಸವಣ್ಣನವರ ವಚನಗಳನ್ನು ಪ್ರಚಾರ ಮಾಡಿ ಅಲ್ಲಿನ ಮಕ್ಕಳಿಗೆ ಕಲಿಸಿದೆ. ಮಕ್ಕಳು ಸಹ ವಚನ ಕಲಿಯಲು ಆಸಕ್ತಿ ತೋರಿದರು. ಈ ರೀತಿಯಾಗಿ ಬಸವ ಸಂಸ್ಕೃತಿ ಪ್ರಸಾರವಾಗಲು ಸಹಾಯಕವಾಯಿತು.

ಪ್ರತಿಯೊಂದು ಕಾರ್ಯಕ್ರಮದಲ್ಲೂ ಶರಣು ಬನ್ನಿ ಸ್ವಾಗತ ಫಲಕಗಳನ್ನು ಹಂಚಿ ಶರಣ ಸಂಸ್ಕೃತಿಯನ್ನು ಪ್ರಚಾರ ಮಾಡಲು ಶುರು ಮಾಡಿದೆ. ಚಿಕ್ಕ ಮಕ್ಕಳಲ್ಲಿ ಶರಣರ ವಚನಗಳ ಮಹತ್ವಗಳನ್ನು ತಿಳಿಸಿದರೆ ಜೀವನಪೂರ್ತಿ ಕಲಿಯುತ್ತವೆ ಎಂದು ತಿಳಿಸಿದರು.

ಕಾಯಕ್ರಮದಲ್ಲಿ ಶಿವನಕೆರೆ ಬಸವಲಿಂಗಪ್ಪ, ಬಸವ ಕೇಂದ್ರದ ಪದಾಧಿಕಾರಿಗಳು, ಹರಗುರುಚರ ಮೂರ್ತಿಗಳು ಉಪಸ್ಥಿತರಿದ್ದರು.

ಚಿತ್ರದುರ್ಗದ ಶಾರದಾ ಬ್ರಾಸ್ ಬ್ಯಾಂಡ್ ಎಸ್.ವಿ. ಗುರುಮೂರ್ತಿ, ಹಾಸನದ ಯುನೈಟೆಡ್ ಅಕಾಡೆಮಿಯ ಸಿ.ಎಂ. ಚಂದ್ರಶೇಖರ್, ಮಡಿವಾಳಪ್ಪ ಇವರುಗಳನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡ ವಿದುಷಿ ವಿಜೇತ ವರ್ಣಿಕರ್ ಮತ್ತು ತಂಡದವರಿಂದ ಕಥಕ್ ನೃತ್ಯ ವೈಭವ, ಕೊಪ್ಪಳದ ನಾಗರಾಜ್ ಶ್ಯಾವಿ ಕೊಳಲು, ಚಿತ್ರದುರ್ಗದ ಡಾ. ಭವ್ಯರಾಣಿ ವಯೋಲಿನ್, ಗೋವಾದ ಪ್ರಸಾದ್ ಮಡಿವಾಳರ ತಬಲ ವಾದ್ಯಗೋಷ್ಠಿ ನಡೆಸಿಕೊಟ್ಟರು.

ಚಿತ್ರದುರ್ಗದ ಹಂಸಗಾನ ಮ್ಯೂಸಿಕಲ್ ಇವೆಂಟ್ಸ್ ಮತ್ತು ಪರಮರತ್ನ ಸಂಗೀತಸಂಸ್ಥೆ ಇವರ ಸಂಗೀತ ಸಂಯೋಜನೆಯಲ್ಲಿ ಬೆಂಗಳೂರಿನ ಸರಿಗಮಪ ಖ್ಯಾತಿಯ ಗಾಯಕಿ ಶರಧಿ ಪಾಟೀಲ, ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸಿಂ, ಖ್ಯಾತ ಯುವಗಾಯಕಿ ನಂದಿನಿ, ಯುವಗಾಯಕ ಕೆ. ಗಂಗಾಧರ್, ಭಾಗ್ಯಗಂಗಾಧರ್, ಚಿತ್ರದುರ್ಗದ ಅಂಜಿನಪ್ಪ, ಹಿಮಂತ್‌ರಾಜ್, ಭಾರ್ಗವಿ ಶಮೀರ್ ಸಂಗೀತ ಕಾರ್ಯಕ್ರಮ ನಡಸಿಕೊಟ್ಟರು.

ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಸಹೋದರರು, ರುದ್ರೇಶ್ ಐಗಳ್, ಬಿ. ಕಾಂತರಾಜ್ ಸೇವಾರ್ಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಸುಚಿತ್ ಕುಲಕರ್ಣಿ ತಂಡದವರು ಪ್ರಾರ್ಥಿಸಿ, ರವಿ ಯಡಹಳ್ಳಿ ಸ್ವಾಗತಿಸಿ, ನವೀನ್ ಮಸ್ಕಲ್ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LtQQbJpNF0P0HdzSbg74pu

Share This Article
Leave a comment

Leave a Reply

Your email address will not be published. Required fields are marked *